Arecanut Leaf spot and inflorescence dieback
ಅಡಿಕೆಯು ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಮಾರುಕಟ್ಟೆ ವ್ಯವಸ್ಥೆಯಿಂದಾಗಿ ರೈತರು ಹೆಚ್ಚಿನ ಸಂಖೆಯಲ್ಲಿ ಅಡಿಕೆ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಅಡಿಕೆ, ತೆಂಗು, ರಬ್ಬರ್ ಅಥವಾ ಯಾವುದೇ ತೋಟಪಟ್ಟಿ ಬೆಳೆಗಳಲ್ಲಿ ರೋಗ ಹಾಗೂ ಕೀಟಗಳ ಬಾಧೆಯು ಸಾಮಾನ್ಯ ಸಮಸ್ಯೆಯಾಗಿದೆ. ತೋಟಪಟ್ಟಿ ಬೆಳೆಗಳಲ್ಲಿ ಸಹಜವಾಗಿ ಕಂಡುಬರುವ ಕೀಟ ಹಾಗೂ ರೋಗಗಳ ನಿರ್ವಹಣಾ ಕ್ರಮಗಳ ಬಗ್ಗೆ ಹೆಚ್ಚಿನ ರೈತರು ತಿಳಿದಿರುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಹವಾಮಾನ ವೈಪರೀತ್ಯದಿಂದ ಮತ್ತು ಸಾಂಪ್ರದಾಯಿಕ ವಲಯಗಳನ್ನು ಹೊರತು ಪಡಿಸಿ ಬೇರೆ ವಲಯಗಳಲ್ಲಿ ಹೆಚ್ಚಾಗಿ ಈ ಬೆಳೆಗಳನ್ನು ಬೆಳೆದಾಗ ಹೊಸ ರೋಗ, ಕೀಟ ಅಥವಾ ನ್ಯೂನ್ಯತೆಗಳು ಉಲ್ಬಣವಾಗಿ ಅವುಗಳ ನಿರ್ವಹಣಾ ಕ್ರಮಗಳ ಬಗ್ಗೆ ಗೊಂದಲಗಳು ಸೃಷ್ಠಿಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಸರಿಯಾದ ನಿರ್ವಹಣಾ ಕ್ರಮಗಳನ್ನು ಕಂಡುಹಿಡಿಯುವ ಪ್ರಕ್ರಿಯೆಯು ದೀರ್ಘ ಕಾಲಿನವಾಗಿರುತ್ತದೆ. ಈ ಸಮಯದಲ್ಲಿ ಅವುಗಳು ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಿ, ಆರ್ಥಿಕ ನಷ್ಟವನ್ನು ಉಂಟು ಮಾಡುತ್ತವೆ. ಎಲೆ ಚುಕ್ಕೆ ರೋಗ ವರ್ಷವಿಡೀ ಭಾದಿಸುತಿದ್ದರೂ, ಜೂನ್ ನಿಂದ ಅಕ್ಟೊಬರ್ ತಿಂಗಳಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿರುತ್ತದೆ.
ಇತ್ತೀಚಿಗೆ ಮಲೆನಾಡಿನ ಅಡಿಕೆ ತೋಟಗಳಲ್ಲಿ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡುತ್ತಿರುವುದು ಈ ಭಾಗದ ಬೆಳೆಗಾರರ ಕಳವಳಕ್ಕೆ ಕಾರಣವಾಗುತ್ತಿದೆ. ಈ ರೋಗ, ಕೇವಲ ಎಲೆಗೆ ಮಾತ್ರ ಸಿಮೀತವಲ್ಲ, ಇದು ಸಿಂಗಾರ ಅಂದರೆ ಹೊಂಬಾಳೆಗೂ ಸಹ ಬರುತ್ತದೆ. ಇದರಿಂದ ಇದನ್ನು ಸಿಂಗಾರ ಒಣಗುವ ರೋಗ ಅಂತಾನೂ ಕರೆಯುತ್ತಾರೆ. ಈ ಹಿಂದೆ ಮಲೆನಾಡಿನ ಸಸಿ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಈ ರೋಗವು ಇತ್ತೀಚಿಗೆ ಫಸಲು ಕೊಡುತ್ತಿರುವ ತೋಟಗಳಲ್ಲಿ ಕಾಣಿಸಿಕೊಂಡು ರೈತರಲ್ಲಿ ಹೆಚ್ಚು ಆತಂಕ ಉಂಟು ಮಾಡಿದೆ. ನಿರ್ದಿಷ್ಠ ಸಮಯದಲ್ಲಿ ಸರಿಯಾದ ಹಾಗೂ ಸಮರ್ಪಕವಾದ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಈ ರೋಗದ ಬಾಧೆ ಹಾಗೂ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ಅಡಿಕೆ ಬೆಳೆಗಾರರು ಸಾಮೂಹಿಕವಾಗಿ ಮತ್ತು ಸಮಗ್ರವಾಗಿ ನಿರ್ವಹಣೆ ಮಾಡದೇ ಇರುವುದು, ಈ ಎಲೆಚುಕ್ಕೆ ರೋಗ ಅತಿರೇಕಕ್ಕೆ ಹೋಗಲು ಕಾರಣ. ಚಿಕ್ಕದಾಗಿ ಅಲ್ಲಲ್ಲಿ ಬರುತ್ತಿದ್ದ ಈ ರೋಗ, ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಮತ್ತು ತೀವ್ರವಾಗಿದೆ. ಇದಕ್ಕೆ ಮುಖ್ಯಕಾರಣ ಹವಾಮಾನ ವೈಪರೀತ್ಯ ಒಂದು ಕಡೆ ಆದ್ರೆ, ಈ ರೋಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ನಿರ್ವಹಣಾ ಕ್ರಮಗಳನ್ನು ಸಾಮೂಹಿಕವಾಗಿ ಕೈಗೊಳ್ಳದೇ ಇರುವುದು, ಈ ರೋಗದ ತೀವ್ರವಾದ ಹರಡುವಿಕೆಗೆ ಸರಿಯಾದ ಕಾರಣಗಳಾಗಿವೆ.
ಈ ರೋಗದ ಲಕ್ಷಣಗಳು, ಹರಡುವಿಕೆ ಮತ್ತು ನಿರ್ವಹಣಾ ಕ್ರಮಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಎಲೆಚುಕ್ಕೆ ರೋಗದ ರೋಗಕಾರಕ :
ಅಡಿಕೆ ಎಲೆಚುಕ್ಕೆ ರೋಗ, ಶಿಲೀಂದ್ರದಿಂದ ಬರುವ ರೋಗವಾಗಿದೆ. ಈ ರೋಗವನ್ನು
1. ಕೊಲ್ಲೆಟೋಟ್ರಿಕಂ ಗ್ಲೋಯೋಸ್ಪೊರಿಯೊಯಿಡ್ಸ್ (Colletotrichum gloeosporioides),
2. ಫಿಲೋಸ್ಟಿಕ್ಟಾ ಅರೆಕೇ (Phyllosticta arecae)
3. ಪೆಸ್ಟಲೋಟಿಯಾ ಪಾಮೊರಮ್ (Pestalotia palmorum) ಎಂಬ ಈ ಮೂರು ರೀತಿಯ ಶಿಲೀಂಧ್ರ ರೋಗಕಾರಗಳು ಉಂಟುಮಾಡುತ್ತವೆ.
ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಶಿಲೀಂಧ್ರ ರೋಗಕಾರಕ, ಈ ರೋಗವನ್ನು ಉಂಟುಮಾಡುತ್ತೆ. ಆದರೆ ಕೊಲ್ಲೆಟೋಟ್ರಿಕಂ ಗ್ಲೋಯೋಸ್ಪೊರಿಯೊಯಿಡ್ಸ್ ಎಂಬ ರೋಗಾಣು, ಬಹುತೇಕ ಪ್ರದೇಶಗಲ್ಲಿ ಕಂಡು ಬರುವ ಅಡಿಕೆ ಎಲೆಚುಕ್ಕೆ ರೋಗಕ್ಕೆ ಮುಖ್ಯ ಕಾರಣವಾಗಿದೆ. ಉಳಿದ ಎರಡು ರೋಗಾಣುಗಳು ಕಡಿಮೆ ಪ್ರದೇಶಗಳಲ್ಲಿ ಕಂಡುಬಂದಿವೆ. ಕೆಲವೊಂದು ತೋಟಗಳಲ್ಲಿ ಈ ಮೂರು ರೋಗಾಣುಗಳನ್ನು ನೋಡಬಹುದು.

ರೋಗದ ಲಕ್ಷಣಗಳು:
- ಅಡಿಕೆಯ ಸೋಗೆಗಳಲ್ಲಿ ಹಳದಿ ಬಣ್ಣದ ಅಂಚುಗಳಿರುವ ಕಪ್ಪು ಚುಕ್ಕೆ ಹಾಗೂ ಕಂದು ಬಣ್ಣದ ಅಂಚುಗಳಿರುವ ಬೂದು ಬಣ್ಣದ ಚುಕ್ಕೆಗಳು ಕಂಡುಬರುತ್ತವೆ.
- ಸೋಗೆಗಳಲ್ಲಿ ಚುಕ್ಕೆಗಳು ಹೆಚ್ಚಾದಂತೆ ಒಂದಕ್ಕೊoದು ಕೂಡಿಕೊಂಡು ಸಂಪೂರ್ಣ ಸೋಗೆಗಳನ್ನು ಆವರಿಸಿಸುತ್ತವೆ.
- ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತವೆ. ಕ್ರಮೇಣ ಒಣಗಿದ ಎಲೆಗಳು ಜೋತು ಬಿದ್ದು ಸುಟ್ಟಂತೆ ಭಾಸವಾಗುತ್ತದೆ.
- ಎಲೆ ಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿರುವ ಗಿಡಗಳಲ್ಲಿ ಕಾಯಿಗಳ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ, ಚುಕ್ಕೆಯಿಂದ ಆವರಿಸಿದ ಕಾಯಿಗಳು ಸೀಳಿಕೊಂಡು ಉದುರುತ್ತವೆ.
- ಅತಿ ಹೆಚ್ಚು ರೋಗಕ್ಕೆ ತುತ್ತಾದ ಗಿಡಗಳಲ್ಲಿ ಫಸಲು ಕಡಿಮೆಯಾಗಿ, ಇಳುವರಿ ಕುಂಠಿತಗೊಳ್ಳುತ್ತದೆ.
- ಕೆಲವೊಮ್ಮೆ ಹೊಂಬಾಳೆಯು ಸಹ (ಸಿಂಗಾರ/ಹಿಂಗಾರ) ಈ ರೋಗಕ್ಕೆ ತುತ್ತಾಗುತ್ತದೆ. ಹಿಂಗಾರ ತುದಿಯಿಂದ ಒಣಗುತ್ತಾ ಬಂದು, ಹೂ ಗೊಂಚಲು ಸಂಪೂರ್ಣವಾಗಿ ಒಣಗುತ್ತದೆ. ಆದರಿಂದ ಇದನ್ನು ಸಿಂಗಾರ ಒಣಗುವ ರೋಗ ಅಂತಾನೂ ಕರೆಯುತ್ತಾರೆ.
- ಸಿಂಗಾರಕ್ಕೆ ರೋಗ ತಗುಲಿದರೆ, ಸಂಪೂರ್ಣ ಇಳುವರಿಯೇ ನಾಶವಾಗುತ್ತದೆ.

ರೋಗಾಣು ಹರಡುವಿಕೆ ಹೇಗೆ?
ಈ ರೋಗಾಣುಗಳು ಕೊನಿಡಿಯ ಎಂಬ ಬೀಜಕಣಗಳನ್ನು ಉತ್ಪತ್ತಿ ಮಾಡುತ್ತದೆ. ಈ ಬೀಜಕಣಗಳು ಗಾಳಿ ಮತ್ತು ಮಳೆಹನಿಯ ಮೂಲಕ ಒಂದು ಎಲೆಯಿಂದ ಇನ್ನೊಂದು ಎಲೆಗೆ ಅಥವಾ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಹರಡುತ್ತದೆ. ಮುಂಗಾರು ಶುರುವಿನಲ್ಲಿ ಮಳೆ ಬಂದ ನಂತರ, ರೋಗಕ್ಕೆ ತುತ್ತಾಗಿರುವ ಒಣಗಿದ ಎಲೆಗಳಲ್ಲಿ, ಸಿಂಗಾರ/ಹೊಂಬಾಳೆಯಲ್ಲಿ ಮತ್ತು ಚುಕ್ಕೆಗಳಿರುವ ಹಳೆಯ ಎಲೆಗಳಲ್ಲಿ ಇರುವ ಶಿಲೀಂದ್ರ ರೋಗಾಣು, ಮಳೆನೀರಿನಿಂದ ಸಕ್ರಿಯವಾಗಿ, ಕೊನಿಡಿಯ ಎಂಬ ಬೀಜಕಣಗಳನ್ನು ಉತ್ಪತ್ತಿಮಾಡುತ್ತದೆ. ಈ ಬೀಜಕಣಗಳು ಮಳೆ-ಗಾಳಿ ಮೂಲಕ ಅಡಿಕೆ ಎಲೆಗಳ ಮೇಲೆ ಬಿದ್ದು, ನಂತರ ತೇವಾಂಶ ಹೆಚ್ಚಿದ್ದಾಗ ಈ ಬೀಜಕಣಗಳು ಮೊಳಕೆಯೊಡೆದು, ಎಲೆಗಳಲ್ಲಿ ಸೋಂಕನ್ನು ಉಂಟುಮಾಡುತ್ತವೆ. ಇದರಿಂದಾಗಿ ಎಲೆಗಳ ಮೇಲೆ ಚುಕ್ಕೆಯಂತಹ ರೋಗಲಕ್ಷಣಗಳು ಕಂಡುಬರುತ್ತೇವೆ. ಆದ್ದರಿಂದ ಇದನ್ನು ಎಲೆಚುಕ್ಕೆ ರೋಗವೆಂದು ಕರೆಯುತ್ತಾರೆ.
| ರೋಗದ ಮೊದಲ ಮೂಲ | ರೋಗಬಾದಿತ ಎಲೆಗಳು/ಒಣಗಿದ ಸಿಂಗಾರ (ಹೊಂಬಾಳೆ) ಅಥವಾ ಒಣಗಿಬಿದ್ದ ಸಸ್ಯ ಭಾಗಗಳು. |
| ರೋಗದ ನಂತರದ ಮೂಲ | ಗಾಳಿ ಮತ್ತು ಮಳೆ ಹನಿಗಳ ಮೂಲಕ ಹರಡುವ ಕೊನಿಡಿಯಾ ಬೀಜಕಣಗಳು |

ರೋಗಕ್ಕೆ ಕಾರಣವಾದ ಅಂಶಗಳು:
ಅಡಿಕೆ ಎಲೆ ಚುಕ್ಕೆ ರೋಗವು ಶಿಲೀಂಧ್ರದಿಂದ ಉಂಟಾಗುವ ರೋಗ. ಕೊಲ್ಲೆಟೋಟ್ರಿಕಂ, ಪೆಸ್ಟಾಲೋಷಿಯಾ ಹಾಗೂ ಫಿಲ್ಲೋಸ್ಟಿಕ್ಟಾ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಈ ಶಿಲೀಂಧ್ರವು ಒಣಗಿ ಬಿದ್ದಿರುವ ಅಥವಾ ಮರದಲ್ಲಿ ಜೋತು ಬಿದ್ದಿರುವ ಗರಿಗಳಲ್ಲಿ ಹಾಗೂ ಮರದಲ್ಲಿ ಕಪ್ಪಾಗಿ ಜೋತು ಬಿದ್ದಿರುವ ಹಿಂಗಾರಗಳಲ್ಲಿ ಉಳಿದುಕೊಳ್ಳುತ್ತವೆ. ಶಿಲೀಂಧ್ರದ ಬೀಜಕಣಗಳು, ಮಳೆ ಹಾಗೂ ಗಾಳಿಯ ಮುಖಾಂತರ ಹರಡಿ ರೋಗವನ್ನು ಉಂಟು ಮಾಡುತ್ತವೆ.
- ಮದ್ಯಮ ತಾಪಮಾನ ಮತ್ತು ತೇವಾಂಶದಿಂದ ಕೂಡಿರುವ ವಾತಾವರಣ,
- ಕಡಿಮೆ ಉಷ್ಣಾಂಶ (18° ಸೆ. ರಿಂದ 24° ಸೆ.)
- ಹೆಚ್ಚಿನ ಆರ್ದ್ರತೆ (ಗಾಳಿಯಲ್ಲಿನ ನೀರಿನ ಅಂಶ) : 80 ರಿಂದ 90 %
- ನಿರಂತರ ಮಳೆಯ ದಿನಗಳು ಮತ್ತು ಮೊಡ ಕವಿದ ವಾತಾವರಣ.
- ಕಡಿಮೆ ಅಂತರದಲ್ಲಿ ಅಡಿಕೆ ಸಸಿಗಳನ್ನು ಹಾಕಿರುವುದು : ಸರಿಯಾಗಿ ಗಾಳಿ-ಬೆಳಕು ಆಡದೇ ಇರುವುದು.
- ತೊಟದಲ್ಲಿ ಸರಿಯಾಗಿ ಬಸಿಗಾಲುವೆ ವ್ಯವಸ್ಥೆ ಇಲ್ಲದೆ ಇರುವುದು.
- ತೊಟದಲ್ಲಿ ಕಳೆ ತುಂಬಾ ಹೆಚ್ಚಾಗಿರುವುದು.
ಈ ಎಲ್ಲಾ ಕಾರಣಗಳು, ಎಲೆ ಚುಕ್ಕೆ ರೋಗದ ತೀವ್ರತೆ ಹಾಗೂ ಹರಡುವಿಕೆಗೆ ಪೂರಕವಾದ ಅಂಶಗಳಾಗಿರುತ್ತವೆ. ರೋಗವು ವರ್ಷ ಪೂರ್ತಿ ಕಂಡುಬಂದರೂ, ಮಳೆಗಾಲದಲ್ಲಿ ಹೆಚ್ಚಾಗಿ ಬಾಧಿಸುತ್ತದೆ.
ಸಮಗ್ರ ನಿರ್ವಹಣಾ ಕ್ರಮಗಳು
- ಎಲೆ ಚುಕ್ಕೆ ರೋಗಕ್ಕೆ ತುತ್ತಾಗಿರುವ ಅಡಿಕೆ ತೋಟಗಳಲ್ಲಿ, ಸಂಪೂರ್ಣವಾಗಿ ಒಣಗಿ ಜೋತು ಬಿದ್ದಿರುವ ಎಲೆಗಳು ಹಾಗೂ ಕಪ್ಪಾಗಿ ಜೋತು ಬಿದ್ದಿರುವ ಹಿಂಗಾರಗಳನ್ನು ತೆಗೆದು ನಾಶಪಡಿಸಿದ ನಂತರ ಸಿಂಪಡಣೆ ಕೈಗೊಂಡರೆ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದು.
- ಮಳೆಗಾಲದಲ್ಲಿ ಎಲೆಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮಳೆಗಾಲ ಪ್ರಾರಂಭದಲ್ಲಿ (ಮೆ ತಿಂಗಳ ಮದ್ಯದಿಂದ ಜೂನ್ ತಿಂಗಳ ಮೊದಲನೆ ವಾರದೊಳಗೆ) ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಗೊನೆಗಳ ಜೊತೆಗೆ ಎಲೆಗಳು ಹಾಗೂ ಸುಳಿ ಭಾಗ ಸಂಪೂರ್ಣವಾಗಿ ನೆನೆಯುವ ಹಾಗೆ ಸಿಂಪಡಿಸಬೇಕು.
- ರೋಗ ಲಕ್ಷಣ ಕಂಡುಬಂದ ಪ್ರಾರಂಭದಲ್ಲಿ, ಅಂತರವ್ಯಾಪಿ ಶಿಲೀಂಧ್ರನಾಶಕಗಳಾದ ಕಾರ್ಬೆಂಡಾಜಿಮ್ (12%) + ಮ್ಯಾಂಕೋಜೆಬ್ (63%) WP @ 2 ಗ್ರಾಂ. ಅಥವಾ ಹೆಕ್ಸಾಕೊನಾಜೋಲ್ 5% SC @ 1 ಮಿ.ಲೀ ಅಥವಾ ಪ್ರೊಪಿಕೊನಾಜೋಲ್ 25% EC @ 1 ಮಿ.ಲೀ. ಅಥವಾ ಟೆಬುಕೊನಾಜೋಲ್ 25.9% EC @ 1 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸೂಕ್ತವಾದ ಸಿಲಿಕಾನ್ ಆಧಾರಿತ ಅಂಟಿನೊಂದಿಗೆ (Silicon Gum) ಸಿಂಪಡಿಸಬೇಕು.
- ಮೂರನೇ (ಕೊನೆಯ) ಸಿಂಪಡಣೆಯ ಸಮಯದಲ್ಲಿ ಶೇ. 1 ರ ಬೋರ್ಡೋ ದ್ರಾವಣವನ್ನು ಅಡಿಕೆ ಗೊನೆಗಳ ಜೊತೆಗೆ ಎಲೆಗಳು ಹಾಗೂ ಸುಳಿ ಭಾಗ ಸಂಪೂರ್ಣವಾಗಿ ನೆನೆಯುವ ಹಾಗೆ ಸಿಂಪಡಿಸುವುದು.
- ಶಿಲೀಂಧ್ರವು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಗಾಳಿಯಲ್ಲಿ ಹರಡುವುದರಿಂದ, ಅಡಿಕೆ ಬೆಳೆಗಾರರು ಸಾಮೂಹಿಕವಾಗಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು.
- ಅಡಿಕೆ ಗಿಡಗಳಿಗೆ ಸಮರ್ಪಕ ಪೋಷಕಾಂಶಗಳನ್ನು ಒದಗಿಸದಿದ್ದರೆ, ಅಂತಹ ತೋಟಗಳಲ್ಲಿ ಎಲೆಚುಕ್ಕೆ ರೋಗದ ತೀವ್ರತೆ ಹೆಚ್ಚಾಗಿರುತ್ತದೆ. ಹಾಗಾಗಿ ಪ್ರತಿ ವರ್ಷ ತೋಟಗಳಿಗೆ ಮಣ್ಣು ಪರೀಕ್ಷೆ ಆಧಾರದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಅಗತ್ಯವಾಗಿ ಮಾಡಬೇಕಾಗುತ್ತದೆ. ಮುಖ್ಯವಾಗಿ ಪೊಟ್ಯಾಸಿಯಂ ಪೋಷಕಾಂಶವನ್ನು ಸರಿಯಾಗಿ ಕೊಡಬೇಕಾಗುತ್ತದೆ.
ಅಡಿಕೆ ಬೆಳೆಗಾರರಿಗೆ ವಿಷೇಶ ಸೂಚನೆಗಳು:
- ಸರಿಯಾದ ಸಮಯಕ್ಕೆ ಬೊರ್ಡೊ ದ್ರಾವಣ ಸಿಂಪಡಣೆ : ಬೋರ್ಡೋ ದ್ರಾವಣವನ್ನು ಸರಿಯಾದ ಸಮಯದಲ್ಲಿ ಸಿಂಪಡಣೆ ಮಾಡಿ. ಮುಂಗಾರು ಶುರುವಿನ ನಂತರ ಮತ್ತು ಮುಂಗಾರು ಮುಗಿದ ನಂತರ ಕಡ್ಡಾಯವಾಗಿ ಬೋರ್ಡೋ ದ್ರಾವಣವನ್ನು ಗಿಡದ ಎಲ್ಲಾ ಭಾಗಗಳಿಗೆ ಸಿಂಪಡಿಸಿ.
- ಬೋರ್ಡೋ ದ್ರಾವಣದ ರಸಸಾರ ಸರಿಯಾಗಿರಲಿ : ರಸಸಾರ 7-8 ಇರುವಂತೆ ನೋಡಿಕೊಳ್ಳಿ. ರಸಸಾರ ಹೆಚ್ಚಾದರೆ ದ್ರಾವಣದ ಪರಿಣಾಮಕಾರಿತ್ವ ನಶಿಸಿಹೋಗಿ, ಇದರಲ್ಲಿ ಶಿಲೀಂಧ್ರನಾಶಕ ಗುಣ ಇಲ್ಲದಂತಾಗುತ್ತದೆ.
- ಸಾಮೂಹಿಕವಾಗಿ ಶಿಲೀಂಧ್ರನಾಶಕವನ್ನು ಸರಿಯಾದ ಸಮಯದಲ್ಲಿ ಸಿಂಪಡಣೆ : ಎಲೆ ಚುಕ್ಕೆ ರೋಗ ಗಾಳಿಯಿಂದ ಹರಡುವುದರಿಂದ, ಅಕ್ಕ ಪಕ್ಕದ ರೈತರೆಲ್ಲರೂ ಸೇರಿ, ಸಾಮೂಹಿಕವಾಗಿ ಶಿಲೀಂಧ್ರವನ್ನು ಸಿಂಪಡಿಸಿ.
- ಸಿಲಿಕಾನ್ ಆಧಾರಿತ ಅಂಟು ಬಳಕೆ : ಯಾವುದೇ ಶಿಲೀಂಧ್ರನಾಶಕ ಸಿಂಪಡಣೆ ಮಾಡುವಾಗ, ಸಿಲಿಕಾನ್ ಆಧಾರಿತ ಅಂಟನ್ನು ಮಿಶ್ರಣ ಮಾಡಿ ಸಿಂಪಡಿಸಿ.
- ಎಲೆಚುಕ್ಕೆ ರೋಗಕ್ಕೆ ಔಷಧಿ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ, ಆದರೆ ಅದು ಶುದ್ಧ ಸುಳ್ಳು. ಎಲೆಚುಕ್ಕೆ ರೋಗ ಒಂದು ಶಿಲೀಂದ್ರದಿಂದ ಬರುವ ರೋಗವಾಗಿದ್ದು, ಇದು ವೈರಸ್ ರೋಗ ಅಲ್ಲ. ಮಾರುಕಟ್ಟೆಯಲ್ಲಿ ನೂರಾರು ಶಿಲೀಂಧ್ರನಾಶಕಗಳಿವೆ. ಇಲ್ಲಿ ಸಮಸ್ಯೆ ಏನು ಅಂದ್ರೆ, ತೋಟಗಾರಿಕಾ ಬೆಳೆಗಳಲ್ಲಿ ಅದ್ರಲ್ಲೂ ಅಡಿಕೆ ತುಂಬಾ ಎತ್ತರದ ಬೆಳೆ, ಎಲೆಚುಕ್ಕೆ ರೋಗ ಗಾಳಿಯಿಂದ ಹರಡುತ್ತೆ. ಹೀಗಾಗಿ ಬರೀ ಒಂದು ಪದ್ದತಿಯಿಂದ ನಿರ್ವಹಣೆ ಮಾಡಿದರೆ ಸಾಲದು ಹಾಗೂ ಒಬ್ಬರೇ ಮಾಡಿದರೂ ಕೂಡ ಸಾಲದು.
- ಈ ರೋಗ ನಿರ್ವಹಣೆಗೆ ಸಮಗ್ರ ಪದ್ದತಿಗಳನ್ನು, ಸಾಮೂಹಿಕವಾಗಿ ಎಲ್ಲ ರೈತರು ಸೇರಿ ಪಾಲಿಸಿದರೆ, ಎಲೆಚುಕ್ಕೆ ರೋಗದ ನಿರ್ವಹಣೆ ಸಾಧ್ಯ. ಬರೀ ಔಷದಿ ಸಿಂಪಡಿಸುವುದರಿಂದ ಈ ರೋಗ ನಿರ್ವಹಣೆ ಆಗುವುದಿಲ್ಲ.
ಸಮಗ್ರ ನಿರ್ವಹಣೆ – ಸಾಮೂಹಿಕ ನಿರ್ವಹಣೆ – ಸರಿಯಾದ ನಿರ್ವಹಣೆ