Grape insect pest management
ದ್ರಾಕ್ಷಿ ಬೆಳೆಯನ್ನು ಪ್ರಮುಖವಾಗಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಮಿಜೋರಾಂ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಕೆಲವು ಉತ್ತರ ಭಾರತದ ರಾಜ್ಯಗಳಾದ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು & ಕಾಶ್ಮೀರದಲ್ಲಿಯೂ ಸಹ ಸ್ವಲ್ಪ ಪ್ರಮಾಣದಲ್ಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ದ್ರಾಕ್ಷಿಯ ಒಟ್ಟು ಉತ್ಪಾದನೆಯ ಸುಮಾರು 94% ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಂದ ಬರುತ್ತಿದೆ. ಭಾರತದಲ್ಲಿ ದ್ರಾಕ್ಷಿ ಬೆಳೆಗೆ ಸುಮಾರು 100 ಕೀಟ ಮತ್ತು ನುಸಿ ಪೀಡೆಗಳು ಭಾದಿಸುತ್ತವೆ, ಇದರಲ್ಲಿ 15-20 ಕೀಟಗಳು ಬೆಳೆಗೆ ತುಂಬಾ ಹಾನಿಕಾರಕವಾಗಿವೆ. ಈ ಬೆಳೆಗೆ ಮುಖ್ಯವಾಗಿ ಥ್ರಿಪ್ಸ್, ಹಿಟ್ಟು ತಿಗಣೆ, ಕಾಂಡ ಕೊರಕ, ನುಸಿ, ಎಲೆ ತಿನ್ನುವ ಕೀಟ, ಕಣಜದ ಹುಳು, ತೊಗಟೆ ಕೊರೆಯುವ ಕೀಟ, ಕೆಂಪು ಜೇಡ ನುಸಿ, ಸಣ್ಣ ರಂಧ್ರ ಕೊರೆಯುವ ದುಂಬಿ, ಕಾಂಡ ಕತ್ತರಿಸುವ ದುಂಬಿ ಚಿಕ್ಕಟ ದುಂಬಿ ಮತ್ತು ಇತರೆ ಕೀಟಗಳು ಭಾದಿಸುತ್ತಿವೆ.
1. ಥ್ರಿಪ್ಸ್ ಕೀಟ (Thrips):
ಮರಿ ಮತ್ತು ವಯಸ್ಕ ಕೀಟಗಳು ಎಲೆಗಳ ಕೆಳಭಾಗದಲ್ಲಿ ಕೆರೆದು ಗಾಯಮಾಡಿ, ಅದರಿಂದ ಬರುವಂತಹ ರಸವನ್ನು ಹೀರುತ್ತವೆ. ಇದರಿಂದಾಗಿ ಎಲೆಗಳ ಮೇಲೆ ಮಚ್ಚೆಗಳು ಕಂಡುಬಂದು, ಭಾದೆ ತೀವ್ರವಾದಾಗ ಎಲೆಗಳು ಮುದುರಿಕೊಳ್ಳುತ್ತವೆ. ಈ ಕೀಟ ಹೂವು ಮತ್ತು ಬೆಳೆಯುತ್ತಿರುವ ಕಾಯಿಗಳ ಮೇಲೂ ಸಹ ಉಜ್ಜಿ ರಸ ಹೀರುತ್ತವೆ, ಇದರಿಂದಾಗಿ ಕಾಯಿ ಅಥವಾ ಹಣ್ಣುಗಳ ಮೇಲೆ ಕಜ್ಜಿಯಂತಹ ಗುರುತುಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ಕೀಟದ ಭಾದೆ ವರ್ಷವಿಡಿ ಇದ್ದು, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ತೀವ್ರತೆ ಹೆಚ್ಚಾಗಿರುತ್ತದೆ.

2. ಹಿಟ್ಟು ತಿಗಣೆ (Mealy bug) :
ಈ ಕೀಟಗಳು ಬಿಳಿ ಬಣ್ಣದಲ್ಲಿದ್ದು, ಮರಿ ಹಾಗು ವಯಸ್ಕ ಹಿಟ್ಟುತಿಗಣೆ ಕೀಟಗಳು ಕಾಂಡ, ಗೆಣ್ಣುಗಳು, ಎಲೆಗಳು ಹೂಗೊಂಚಲು ಮತ್ತು ಕಾಯಿಗಳಿಂದ ರಸವನ್ನು ಹೀರುತ್ತವೆ. ಈ ಕೀಟಗಳು ಹಣ್ಣುಗಳ ಮೇಲೆ ಸಿಹಿ ಅಂಟು ದ್ರವವನ್ನು ಸ್ರವಿಸುವುದರಿಂದ, ಹಣ್ಣುಗಳು ಜಿಗುಟಾಗುತ್ತವೆ ನಂತರ ಇದರ ಮೇಲೆ ಕಪ್ಪು ಶಿಲೀಂಧ್ರ ಬೆಳೆಯುತ್ತದೆ.

3. ಕಾಂಡ ಕೊರಕ (Stem Borer):
ಈ ಕೀಟಗಳು ಮೇ-ಜೂನ್ ತಿಂಗಳ ಮೊದಲ ಮಳೆಯ ನಂತರ ಕಾಣಿಸಿಕೊಳ್ಳುತ್ತವೆ. ವಯಸ್ಕ ಕೀಟಗಳು ರಾತ್ರಿ ವೇಳೆ ಹೆಚ್ಚು ಚುರುಕಾಗಿದ್ದು, ಕಾಂಡದ ಬಿರುಕು ಮತ್ತು ತೊಗಟೆಗಳ ಮಧ್ಯೆ ಮೊಟ್ಟೆಗಳನ್ನು ಇಡುತ್ತವೆ. ನಂತರ ಮೊಟ್ಟೆಗಳು ಮಾರಿಯಾಗಿ ಕಾಂಡಗಳನ್ನು ಕೊರೆಯುತ್ತವೆ. ಇದರಿಂದ ಕಾಂಡಗಳಲ್ಲಿ ರಂಧ್ರಗಳು ಉಂಟಾಗುತ್ತವೆ. ಭಾದಿತ ಮರಗಳು ಹಳದಿಯಾಗಿ ಒಣಗಲು ಪ್ರಾರಂಭಿಸುತ್ತವೆ.

4. ಜಿಗಿಹುಳು (Leaf Hopper):
ಮರಿ ಮತ್ತು ವಯಸ್ಕ ಕೀಟಗಳು ಎಳೆಯ ಕೆಳಭಾಗದಲ್ಲಿ ರಸ ಹೀರುತ್ತವೆ. ಇದರಿಂದಾಗಿ ಎಲೆಗಳ ಮೇಲೆ ಚಿಕ್ಕ ಬಿಳಿ ಚುಕ್ಕೆಗಳು ಕಂಡುಬಂದು, ಭಾದೆ ತೀವ್ರವಾದಾಗ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರಿಹೋಗುತ್ತವೆ.
5. ಸಣ್ಣ ರಂಧ್ರ ಕೊರೆಯುವ ದುಂಬಿ (Shot hole Borer):
ದುಂಬಿಗಳು ಕಾಂಡದಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡುತ್ತವೆ. ರಂಧ್ರಗಳಿಂದ ಮರದಪುಡಿ ನೆಲದಮೇಲೆ ಉದುರಿರುತ್ತದೆ. ತೀವ್ರವಾಗಿ ಭಾದೆಗೊಳಗಾಗದ ಗಿಡಗಳು ಹಳದಿಯಾಗಿ ಸಾಯುತ್ತವೆ.

6. ಚಿಕ್ಕಟ ದುಂಬಿ (Flea beetle):
ವಯಸ್ಕ ದುಂಬಿಗಳು ಬಳ್ಳಿಯ ಚಿಗುರು, ಮೊಗ್ಗುಗಳು ಮತ್ತು ಎಲೆಗಳನ್ನು ತಿನ್ನುತ್ತವೆ, ಇದರಿಂದ ಮೊಗ್ಗುಗಳು ಸಾಯುತ್ತವೆ. ಮರಿಹುಳುಗಳು ಮಣ್ಣಿನಲ್ಲಿದ್ದು ಬೇರುಗಳನ್ನು ತಿನ್ನುತ್ತದೆ. ಎಲೆಗಳಲ್ಲಿ ರಂಧ್ರಗಳಿರುವುದು ಚಿಕ್ಕಟ ದುಂಬಿಯ ಮುಖ್ಯ ಹಾನಿಯ ಲಕ್ಶಣಲಕ್ಷಣ.
7. ಕೆಂಪು ಜೇಡ ನುಸಿ (Red Spider Mite) :
ಕೆಂಪು ಬಣ್ಣದ ಸಣ್ಣ ನುಸಿಗಳು ಎಲೆಯ ಕೆಳಭಾಗದಿಂದ ರಸ ಹೀರುತ್ತವೆ. ಎಲೆಗಳ ಮೇಲೆ ಹಳದಿ ಚುಕ್ಕೆಗಳು ಕಾಣಿಸಿಕೊಂಡು ನಂತರ ಎಲೆಗಳು ಒಣಗುತ್ತವೆ. ಈ ನುಸಿಯ ಭಾದೆ ತೀವ್ರವಾದಲ್ಲಿ ಎಲೆಗಳು ತಿಳಿ ಹಳದಿಯಾಗಿ ಉದುರುತ್ತವೆ. ನುಸಿಯ ಭಾದೆ ಬೇಸಿಗೆ ತಿಂಗಳುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸಮಗ್ರ ಕೀಟ ನಿರ್ವಹಣಾ ಕ್ರಮಗಳು
I. ಸಾಂಪ್ರದಾಯಿಕ ನಿರ್ವಹಣಾ ಪದ್ದತಿಗಳು :
1. ಥ್ರಿಪ್ಸ್, ಜಿಗಿಹುಳು ಮತ್ತು ಚಿಕ್ಕಟ ದುಂಬಿಗಳ ನಿರ್ವಹಣೆಗಾಗಿ ಬೇಸಿಗೆಯ ಚಾಟನಿಯ ನಂತರ ಉಳುಮೆಮಾಡುವುದು, ಇದರಿಂದ ಕೋಶಾವಸ್ಥೆಯಲ್ಲಿರುವ ಕೀಟಗಳು ನಾಶವಾಗುತ್ತವೆ.
2. ದ್ರಾಕ್ಷಿತೋಟದಲ್ಲಿನ ಕಳೆಗಳನ್ನು ತೆಗೆದು, ಸ್ವಚ್ಛವಾಗಿಟ್ಟುಕೊಳ್ಳಬೇಕು.
3. ದ್ರಾಕ್ಷಿ ತೋಟದ ಹತ್ತಿರದಲ್ಲಿ ದಾಸವಾಳ, ಬೆಂಡೆಕಾಯಿ, ಸೀತಾಫಲ ಹಾಗು ಸೀಬೆ ಗಿಡಗಳನ್ನು ಬೆಳೆಸಬೇಡಿ. ಇವು ಥ್ರಿಪ್ಸ್, ಹಿಟ್ಟುತಿಗಣೆ ಮತ್ತು ಇದರ ಕೀಟಗಳಿಗೆ ಆಶ್ರಯ ಸಸ್ಯಗಳಾಗಿವೆ.
4. ಹಿಟ್ಟು ತಿಗಣೆ, ಕಾಂಡ ಕೊರಕ ಮತ್ತು ರಂಧ್ರ ಕೊರೆಯುವ ದುಂಬಿ ನಿರ್ವಹಣೆಗಾಗಿ, ಗಿಡದಲ್ಲಿ ಸಡಿಲವಾಗಿರುವ ತೊಗಟೆಗಳನ್ನು ತೆಗೆದು, ಕಾಂಡವನ್ನು ಸ್ವಚ್ಛವಾಗಿಡಬೇಕು.
5. ನುಸಿಯ ನಿರ್ವಹಣೆಗಾಗಿ, ಬೇಸಿಗೆಯಲ್ಲಿ ಬೆಳೆಗೆ ನೀರಿನ ಕೊರತೆಯಾಗದಂತೆ ಸರಿಯಾಗಿ ನಿರ್ವಹಣೆ ಮಾಡುವುದು.
6. ಚಾಟನಿ ಮಾಡಿದನಂತರ ಭಾದಿತ ಸಸ್ಯಭಾಗಗಳನ್ನು ನಾಶಪಡಿಸಬೇಕು.
II. ಯಾಂತ್ರಿಕ ನಿರ್ವಹಣಾ ಪದ್ದತಿಗಳು :
1. ಥ್ರಿಪ್ಸ್ ಕೀಟದ ನಿರ್ವಹಣೆಗಾಗಿ ನೀಲಿ ಅಂಟು ಬಲೆಗಳನ್ನು ಮತ್ತು ಜಿಗಿಹುಳುಗಳ ನಿರ್ವಹಣೆಗಾಗಿ ಹಳದಿ ಅಂಟು ಬಲೆಗಳನ್ನು ತೋಟದಲ್ಲಿ ಹಾಕುವುದು.
2. ಹಿಟ್ಟು ತಿಗಣೆ ಭಾದಿತ ಗೊಂಚಲಗಳನ್ನು ತೆಗೆದು ನಾಶಪಡಿಸಬೇಕು.
3. ಕಾಂಡಕೊರಕ ಅಥವಾ ಚಿಕ್ಕಟ ದುಂಬಿ ನಿರ್ವಹಣೆಗಾಗಿ, ಎಕರೆಗೆ ಒಂದರಂತೆ ಬೆಳೆಕಿನ ಬಲೆಯನ್ನು ಅಳವಡಿಸಿ, ಕೀಟಗಳನ್ನು ಸಂಗ್ರಹಿಸಿ ನಾಶಪಡಿಸಬೇಕು.
III. ಜೈವಿಕ ನಿರ್ವಹಣಾ ಪದ್ದತಿಗಳು :
1. ತಂಪಾದ ವಾತಾವರಣದಲ್ಲಿ, ಜೈವಿಕ ಕೀಟನಾಶಕವಾದ ವೆರ್ಟಿಸೀಲಿಯಾಮ್ ಲೆಕಾನಿ ಅಥವಾ ಬೆವೆರಿಯ ಬೆಸ್ಸಿಯಾನ ಅನ್ನು ಪ್ರತೀ ಲೀಟರ್ ನೀರಿಗೆ 5 ಮಿ.ಲೀ. ಅಥವಾ ಗ್ರಾಂ ಬೆರೆಸಿ 15 ದಿನಗಳ ಅಂತರದಲ್ಲಿ 2-3 ಬಾರಿ ಗಿಡದ ಎಲ್ಲಾ ಭಾಗಗಳಿಗೆ ಸಿಂಪಡಣೆ ಮಾಡುವುದರಿಂದ ಥ್ರಿಪ್ಸ್ ಮತ್ತು ಹಿಟ್ಟುತಿಗಣೆ ಕೀಟಗಳು ಹತೋಟಿಗೆ ಬರುತ್ತವೆ.
2. ಥ್ರಿಪ್ಸ್, ಜಿಗಿಹುಳು, ಹಿಟ್ಟುತಿಗಣೆ ಮತ್ತು ನುಸಿಯ ನಿರ್ವಹಣೆಗಾಗಿ, 5% ಬೇವಿನ ಬೀಜದ ಕಷಾಯವನ್ನು ಸಿಂಪಡಣೆ ಮಾಡವುದು ಅಥವಾ ಬೇವುಜನ್ಯ ಕೀಟನಾಶಕವಾದ ಅಜಾರ್ಡಿರೆಕ್ಟಿನ್ 10000 ppm ಅನ್ನು ಪ್ರತೀ ಲೀಟರ್ ನೀರಿಗೆ 2.5 ಮಿ.ಲೀ. ಬೆರೆಸಿ ಸಿಂಪಡಣೆ ಮಾಡುವುದು.
3. ಹಿಟ್ಟು ತಿಗಣೆಯ ನಿರ್ವಹಣೆಗಾಗಿ, ಡಿಸೆಂಬರ್ – ಜನವರಿ ತಿಂಗಳಲ್ಲಿ ಪರಭಕ್ಷಕ ಕೀಟವಾದ ಕ್ರಿಪ್ಟಾಲೆಮಸ್ ಮೊಂಟ್ರೊಜಿರಿ ಅನ್ನು ಪ್ರತಿ ಗಿಡಕ್ಕೆ 10 ಹುಳುಗಳಂತೆ ಬಿಡುಗಡೆ ಮಾಡಬೇಕು.
IV. ರಾಸಾಯನಿಕ ನಿಯಂತ್ರಣ ವಿಧಾನಗಳು
ಈ ಕೆಳಗೆ ನೀಡಿರುವ ಕೀಟನಾಶಕಗಳನ್ನು ಕೀಟಗಳಿಗೆ ಅನುಗುಣವಾಗಿ ಬಳಸಬೇಕು*
| ಕೀಟ | ಕೀಟನಾಶಕ |
| ಥ್ರಿಪ್ಸ್ ಕೀಟ | ಸೈಂಟ್ರಾನಿಲಿಪ್ರೋಲ್ 10.26 % OD @ 700 ml 1000 L ನೀರಿನಲ್ಲಿ (WP: 5 ದಿನಗಳು) ಅಥವಾ ಎಮಾಮೆಕ್ಟಿನ್ ಬೆಂಜೊಯೇಟ್ 05 % SG @ 220 ಗ್ರಾಂ 500-1000 L ನೀರಿನಲ್ಲಿ (WP : 5 ದಿನಗಳು) ಅಥವಾ ಫಿಪ್ರೊನಿಲ್ 80 % WG @ 700 ಗ್ರಾಂನಲ್ಲಿ 80 % WG @ 755. – 1000 L ನೀರು (WP: 10 ದಿನಗಳು) ಅಥವಾ ಲ್ಯಾಂಬ್ಡಾ-ಸೈಹಾಲೋಥ್ರಿನ್ 04.90 % CS @ 250 ml 500-1000 L ನೀರಿನಲ್ಲಿ (WP: 7 ದಿನಗಳು) ಅಥವಾ ಸ್ಪಿನೆಟೋರಾಮ್ 11.70 % SC @ 300 ml 500-1000 L ನೀರಿನಲ್ಲಿ (WP: 5 ದಿನಗಳು) ಅಥವಾ ಸ್ಪಿನೋಸಾಡ್ 45 % SC @ 250 ml 1000 L ನೀರಿನಲ್ಲಿ (WP: 15 ದಿನಗಳು) |
| ಹಿಟ್ಟು ತಿಗಣೆ | ಬುಪ್ರೊಫೆಜಿನ್ 25 % SC @ 1000 – 1500 ml 500 – 1000 L ನೀರಿನಲ್ಲಿ (WP: 7 ದಿನಗಳು) ಅಥವಾ ಸ್ಪೈರೊಟೆಟ್ರಾಮ್ಯಾಟ್ 15.31 % w/w OD @ 700 ml 500 – 1000 L ನೀರಿನಲ್ಲಿ (WP: 60 ದಿನಗಳು) |
| ಚಿಕ್ಕಟ ದುಂಬಿ | ಸೈಂಟ್ರಾನಿಲಿಪ್ರೋಲ್ 10.26 % OD @ 700 ml 1000 L ನೀರಿನಲ್ಲಿ (WP: 5 ದಿನಗಳು) ಅಥವಾ ಇಮಿಡಾಕ್ಲೋಪ್ರಿಡ್ 17.80 % SL @ 300 – 400 ml 1000 L ನೀರಿನಲ್ಲಿ (WP: 32 ದಿನಗಳು) ಅಥವಾ ಲ್ಯಾಂಬ್ಡಾ-ಸೈಹಾಲೋಥ್ರಿನ್ 04.90 % CS @ 250 ml 500-1000 L ನೀರಿನಲ್ಲಿ (WP: 7 ದಿನಗಳು) |
| ಕೆಂಪು ಜೇಡ ನುಸಿ | ಅಬಾಮೆಕ್ಟಿನ್ 01.90 % EC @ 0.75 ml/L ನೀರು (WP : 3 ದಿನಗಳು) ಅಥವಾ ಹೆಕ್ಸಿಥಿಯಾಝಾಕ್ಸ್ 05.45 % w/w EC @ 500 ml 1000 L ನೀರಿನಲ್ಲಿ (WP: 5 ದಿನಗಳು) ಅಥವಾ ಸ್ಪೈರೊಟೆಟ್ರಾಮ್ಯಾಟ್ 15.31 % w/w OD @ 700 ml 500 – 1000 L ನೀರಿನಲ್ಲಿ (WP: 60 ದಿನಗಳು) |
*Source : MAJOR USES OF PESTICIDES (Registered under the Insecticides Act, 1968), CIB&RC, dtd.- 31/03/2024
(WP = Waiting period/ ಸಿಂಪಡಣೆ ನಂತರ ಕಾಯುವ ದಿನ)