
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಮತ್ತು ಬಳಕೆಯಾಗುವ ಗೊಬ್ಬರವೆಂದರೆ ಅದು ಯೂರಿಯ ಗೊಬ್ಬರ. ಯೂರಿಯ ಇಲ್ಲದೆ ರೈತರು ಬಿತ್ತನೆ ಮಾಡುವುದಕ್ಕೆ ತಯಾರಿಲ್ಲ, ಅಂತಹ ಅಗ್ರ ಸ್ಥಾನವನ್ನು ಯೂರಿಯ ಪಡೆದಿದೆ. ಕೆಲವೊಮ್ಮೆ ಇದು ಕೊರತೆಯಾಗಿ, ಅನೇಕ ತೊಂದರೆಗಳನ್ನು ಉಂಟುಮಾಡುತ್ತಿರುತ್ತದೆ. ಎಷ್ಟೋ ರೈತರು ಬರೀ ಯೂರಿಯ ಗೊಬ್ಬರವನ್ನು ಅಷ್ಟೇ ಹಾಕಿ ಬೆಳೆ ಬೆಳೆಯುತ್ತಿದ್ದಾರೆ, ಆದರೆ ಇದು ಸರಿಯಲ್ಲ ಇದರಿಂದ ಇಳುವರಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಯಾಕೆಂದರೆ ಯೂರಿಯಾದಲ್ಲಿ ಬರೀ ಸಾರಜನಕ ಮಾತ್ರ ಇರುತ್ತದೆ. ಆದರೆ ಬೆಳೆಗೆ ಸಾರಜನಕ, ರಂಜಕ, ಪೊಟ್ಯಾಷಿಯಂ, ಹೀಗೆ 17 ಪೋಷಕಾಂಶಗಳು ದೊರೆತರೆ ಮಾತ್ರ ಅಧಿಕ ಇಳುವರಿ ಸಾಧ್ಯ. ನಮ್ಮ ಅನೇಕ ರೈತಬಾಂದವರು, ಬರೀ ಯೂರಿಯ ಒಂದನ್ನೇ ಅಸ್ತ್ರವಾಗಿ ಬಳಸಿಕೊಂಡು ಅಧಿಕಇಳುವರಿ ತೆಗೆಯಲು ನೋಡ್ತಾರೆ, ಆದ್ರೆ ಅದು ಸಾಧ್ಯವಿಲ್ಲ ಯಾಕಂದ್ರೆ ಯಾವುದೇ ಬೆಳೆಯಾಗಲಿ ಅದಕ್ಕೆ 17 ಪೋಷಕಾಂಶಗಳು ಬೇಕು, ಅದ್ರಲ್ಲಿ NPK ಅಂದರೆ ಸಾರಜನಕ, ರಂಜಕ, ಪೊಟ್ಯಾಸಿಯಂ ಪೋಷಕಾಂಶಗಳು ಪ್ರಮುಖ ಪೋಷಕಾಂಶಗಳಾಗಿದ್ದು, ಇವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ. ಯೂರಿಯ ಗೊಬ್ಬರ ಕೇವಲ ಸಾರಜನಕ ಪೋಷಕಾಂಶವನ್ನು ಮಾತ್ರ ಪೂರೈಸುತ್ತದೆ, ಹೀಗಾಗಿ ಎಲೆಗಳು ಮಾತ್ರ ಚೆನ್ನಾಗಿ ಬೆಳೆಯುತ್ತವೆ ಆದರೆ ಇಳುವರಿ ಕಡಿಮೆ ಆಗುತ್ತೆ.
ಯೂರಿಯ ಗೊಬ್ಬರ
ಯೂರಿಯ ಒಂದು ಸಾರಜನಕ ಪೋಷಕಾಂಶವನ್ನು ಪೂರೈಸುವ ರಸಗೊಬ್ಬರವಾಗಿದೆ. ಇದು ಬಿಳಿ ಬಣ್ಣದ ಹರಳು ರೂಪದ ಗೊಬ್ಬರವಾಗಿದ್ದು, ಇದರಲ್ಲಿ 46% ಸಾರಜನಕವಿದೆ. ಅಂದರೆ 100 ಕೆಜಿ ಯೂರಿಯ ಗೊಬ್ಬರದಲ್ಲಿ, 46 ಕೆಜಿ ಸಾರಜನಕ ಇರುತ್ತದೆ. ಇದರ ರಸಾಯನಿಕ ಸೂತ್ರ, CO(NH2)2.
ಯೂರಿಯ ಗೊಬ್ಬರ ತಯಾರಿಕೆ:
ಹೆಚ್ಚು ಒತ್ತಡ ಮತ್ತು ಉಷ್ಣಾಂಶದಲ್ಲಿ, ಅಮೋನಿಯಾ ಅನ್ನು CO2 ಅನಿಲದೊಂದಿಗೆ ಪ್ರತಿಕ್ರಯಿಸಿದಾಗ ಯೂರಿಯಾ ತಯಾರಾಗುತ್ತದೆ. ಭಾರತದಲ್ಲಿ ಯೂರಿಯ ಉತ್ಪಾದನೆ ಬರೀ 31 ಘಟಕಗಳಲ್ಲಿ ಮಾತ್ರ ಆಗುತ್ತಿದ್ದು, ಇದು ದೇಶೀಯ ಬೇಡಿಕೆಗಿಂತ ತುಂಬಾ ಕಡಿಮೆ ಇದೆ. ಹೀಗಾಗಿ ಭಾರತ, ಅನ್ಯ ದೇಶಗಳಾದ ಚೀನಾ, ರಷ್ಯಾ, UAE ದೇಶಗಳಿಂದ ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತಿದೆ.
ಯೂರಿಯಾದಲ್ಲಿ ಬೈಯುರೆಟ್ ಎಂಬ ವಿಷತ್ವ:
ಯೂರಿಯ ತಯಾರಾಗಬೇಕಾದರೆ, ಅನಗತ್ಯವಾಗಿ ಬರುವ ಸಂಯುಕ್ತವೇ ಈ ಬೈಯುರೆಟ್ ಅಂಶ. ಇದು ಹೆಚ್ಚಂದರೆ 1.5% ಇರಬೇಕಷ್ಟೇ, ಇದಕ್ಕಿಂತ ಹೆಚ್ಚಾದರೆ, ಸಸ್ಯಗಳಿಗೆ ಇದು ವಿಷವಾಗಿ ಪರಿಣಮಿಸುತ್ತದೆ. ಇದರಿಂದಾಗಿ ಗಿಡಗಳು ಹಳದಿಯಾಗಿ ಸತ್ತುಹೋಗುತ್ತವೆ. ಹೀಗಾಗಿ ಶಿಫಾರಸ್ಸಿಗಿಂತ ಹೆಚ್ಚಾಗಿ ಯೂರಿಯ ಬಳಸಿದರೆ ಇಳುವರಿ ನಷ್ಟ ಕಟ್ಟಿಟ್ಟ ಬುತ್ತಿ. ಜಾಗ್ರತೆಯಿಂದ ಯೂರಿಯ ಗೊಬ್ಬರವನ್ನು ಬಳಸಬೇಕಾಗುತ್ತದೆ.

ಯೂರಿಯ ಗೊಬ್ಬರದ ಉಪಯೋಗಗಳು:
ಅತೀ ಹೆಚ್ಚು ಸಾರಜನಕ ಪೂರೈಸುವ ಗೊಬ್ಬರವೆಂದರೆ ಅದು ಯೂರಿಯ ಮಾತ್ರ. ಕಡಿಮೆ ಖರ್ಚಿನಲ್ಲಿ ಹೆಚ್ಚು ಸಾರಜನಕ ಪೋಷಕಾಂಶ ಪೂರೈಕೆಯಾಗುತ್ತದೆ. ಇದು ನೀರಿನಲ್ಲಿ ಬೇಗನೆ ಕರಗುವುದರಿಂದ ಸಸ್ಯಗಳಿಗೆ ಬೇಗನೆ ಸಿಗುತ್ತದೆ. ಇದನ್ನು ಅನೇಕ ಬೆಳೆಗಳಲ್ಲಿ ಉಪಯೋಗಿಸಬಹುದಾಗಿದೆ. ಇದು ನೀರಿನಲ್ಲಿ ಸಂಪೂರ್ಣವಾಗಿ ಕರಗುವುದರಿಂದ, ಇದನ್ನು ಡ್ರಿಪ್ ಮೂಲಕ ರಸಾವರಿ ಪದ್ಧತಿಯಲ್ಲೂ ಗಿಡಗಳಿಗೆ ಕೊಡಬಹುದಾಗಿದೆ. ಯೂರಿಯ ಗೊಬ್ಬರವನ್ನು ಬಿತ್ತನೆಗೊಬ್ಬರವಾಗಿ ಸ್ವಲ್ಪ ಪ್ರಮಾಣದಲ್ಲಿ ಹಾಗು ಮೇಲು ಗೊಬ್ಬರವಾಗಿ ಹೆಚ್ಚು ಉಪಯೋಗಿಸುತ್ತಾರೆ. ಯೂರಿಯ ಬಿಟ್ಟರೆ ಬೇರೆ ಯಾವ ಗೊಬ್ಬರದಲ್ಲೂ ಹೆಚ್ಚು ಸಾರಜನಕ ಪೋಷಕಾಂಶ ಇರುವುದಿಲ್ಲ. ಅಮೋನಿಯಂ ಸಲ್ಪೇಟ್ ಮತ್ತು CAN ಗೊಬ್ಬರದಲ್ಲಿ 21-25% ಸಾರಜನಕ ಅಷ್ಟೇ ಇರುತ್ತದೆ. ಹೀಗಾಗಿ ಯೂರಿಯ ಗೊಬ್ಬರದ ಮೇಲೆ ಹೆಚ್ಚು ಅವಲಂಬನೆ ಇದೆ. ಹಾಗೆಯೇ ಬೇರೆ ಸಾರಜನಕ ಪೂರೈಸುವ ಗೊಬ್ಬರಗಳ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಇಲ್ಲದಿರುವುದು ಮತ್ತು ಯೂರಿಯ ಗೊಬ್ಬರಕ್ಕೆ ಹೋಲಿಸಿದರೆ, ಬೇರೆ ಸಾರಜನಕ ಪೂರೈಸುವ ಗೊಬ್ಬರಗಳ ಬೆಳೆ ಹೆಚ್ಚಾಗಿರುವುದು, ಯೂರಿಯ ಗೊಬ್ಬರದ ಮೇಲೆ ಹೆಚ್ಚು ಅವಲಂಬನೆಗೆ ಕಾರಣಗಳಾಗಿವೆ.
ಅತಿಯಾದ ಯೂರಿಯಾ ಬಳಕೆಯಿಂದ ಆಗುವ ದುಷ್ಪರಿಣಾಮಗಳು:
- ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುವುದರಿಂದ, ಸಸ್ಯಗಳಲ್ಲಿ ಸಾರಜನಕದ ವಿಷತ್ವ ಹೆಚ್ಚಾಗಿ, ಬೆಳೆವಣಿಗೆ ಕುಂಠಿತವಾಗುತ್ತದೆ. ಅತಿಯಾದರೆ ಅಮೃತವು ವಿಷ ಅನ್ನೋ ಗಾದೆ ಕೇಳೇ ಇರ್ತೀರ, ಇದು ಕೂಡ ಹಾಗೆ. ಯೂರಿಯ ಒಂದನ್ನೇ ಹೆಚ್ಚಾಗಿ ಹಾಕಿದರೆ, ಸಸ್ಯದಲ್ಲಿ ಸಾರಜನಕದ ಅಂಶ ಮಿತಿಮೀರಿ ಗಿಡಗಳ ಬೆಳೆವಣಿಗೆ ಕುಂಠಿತವಾಗುತ್ತದೆ. ಬರೀ ಎಲೆಗಳು ಮಾತ್ರ ಬೆಳೆದು, ಹೂವಾಗುವುದು ತಡವಾಗುತ್ತದೆ ಮತ್ತು ಕಾಳು ಕಟ್ಟುವಿಕೆ ಕಡಿಮೆಯಾಗಿ, ಇಳುವರಿ ಕಡಿಮೆಯಾಗುತ್ತದೆ.
- ಅತಿಯಾದ ಯೂರಿಯಾ ಬಳಕೆಯಿಂದ, ಹಸಿರು ಹೆಚ್ಚಾಗಿ ಅನೇಕ ರಸಹೀರುವ ಕೀಟಗಳ ಹಾವಳಿ ಹೆಚ್ಚಾಗುತ್ತದೆ.
- ಭತ್ತ ಹಾಗೂ ಇತರ ಬೆಳೆಗಳಲ್ಲಿ ಈಗಾಗಲೇ ಬೆಂಕಿರೋಗ ಅಥವಾ ಎಲೆಚುಕ್ಕೆರೋಗ, ಅಂಗಮಾರಿ ರೋಗಗಳಿದ್ದು, ಯೂರಿಯ ಹೆಚ್ಚಾಗಿ ಹಾಕಿದರೆ ಈ ರೋಗಗಳು ಮತ್ತಷ್ಟು ತೀವ್ರತೆಗೊಳ್ಳುತ್ತವೆ. ಅತಿಯಾದ ಸಾರಜನಕ, ಸಸ್ಯದ ಎಲೆಗಳನ್ನು ಮೃದುಗೊಳಿಸುತ್ತದೆ ಹೀಗಾಗಿ ಅನೇಕ ರೋಗಗಳು ಬೇಗನೆ ಎಲೆಗಳಿಗೆ ಹರಡುತ್ತವೆ. ಎಲೆಗಳಲ್ಲಿ ಇದ್ದ ಒಂದು ಚುಕ್ಕೆ ಸಾರಜನಕ ಹೆಚ್ಚಾದಾಗ ಎಳೆಯ ತುಂಬಾ ರೋಗದ ಚುಕ್ಕೆಗಳು ಬೇಗನೆ ಹರಡುತ್ತವೆ.
- ಹೆಚ್ಚಾಗಿ ಯೂರಿಯ ಗೊಬ್ಬರವನ್ನು ಬಳಸುವುದರಿಂದ, ಕ್ರಮೇಣವಾಗಿ ಮಣ್ಣು ಉಳಿಯುಕ್ತವಾಗುತ್ತದೆ.
- ಹೆಚ್ಚು ಯೂರಿಯ ಬಳಕೆಯಿಂದ, ಮಣ್ಣಿನಲ್ಲಿ ನೈಟ್ರೇಟ್ ಅಂಶ ಅತಿಯಾಗಿ ಮಳೆನೀರಿನ ಮೂಲಕ ಅಂತರ್ಜಲಕ್ಕೆ ಸೇರಿ, ಮನುಕುಲ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಕುತ್ತು ತರುತ್ತದೆ. ಇದರಿಂದ ಅನೇಕ ರೋಗ ರುಜಿನಗಳು ಕಾಡುತ್ತವೆ.
ಯೂರಿಯ ಬಳಸುವ ಮುನ್ನ ಗಮನಿಸಬೇಕಾದ ಅಂಶಗಳು:
ಯೂರಿಯ ಗೊಬ್ಬರವನ್ನು ಬಿಸಿಲು ಹೆಚ್ಚಿದ್ದಾಗ, ಉಷ್ಣ ವಾತಾವರಣದಲ್ಲಿ ಮತ್ತು ಕ್ಷಾರಮಣ್ಣಿನಲ್ಲಿ ಬಳಸುವುದರಿಂದ, ಆವಿಯಾಗುವಿಕೆಯಿಂದ ಯೂರಿಯ ನಷ್ಟವಾಗುತ್ತದೆ. ಹೀಗಾಗಿ ತಂಪಾದ ಸಮಯದಲ್ಲಿ ಹಾಗೂ ಮಣ್ಣಿನ ರಸಸಾರ ಸರಿಪಡಿಸಿ ಯೂರಿಯ ಬಳಸಿದರೆ ಉತ್ತಮ. ಯೂರಿಯ ಗೊಬ್ಬರವನ್ನು ಯಾವುದೇ ಗೊಬ್ಬರದ ಜೊತೆ ಮಿಶ್ರಣ ಮಾಡಿ ಹಾಗೆ ಇಡಬಾರದು, ತಕ್ಷಣವೇ ಉಪಯೋಗಿಸಬೇಕು. ಯೂರಿಯ ಹಾಕುವುದರಿಂದ ಮಣ್ಣಿನ ಉಷ್ಣಾಂಶ ಹೆಚ್ಚುವುದಿಲ್ಲ, ಇದು ತಪ್ಪು ಕಲ್ಪನೆ. ಬರೀ ಯೂರಿಯ ಮಾತ್ರ ಹಾಕುವುದರಿಂದ ಅಧಿಕ ಇಳುವರಿ ಪಡೆಯಲು ಸಾಧ್ಯವಿಲ್ಲ.
ಯೂರಿಯ ಗೊಬ್ಬರದ ಕೊರತೆ ಯಾಕೆ?
ಯೂರಿಯ ಗೊಬ್ಬರದ ಕೊರತೆ ಇದೇ ಮೊದಲೇನು ಅಲ್ಲ, ಹಿಂದೆಯೂ ಕೂಡ ಅನೇಕ ಬಾರಿ ಕೊರತೆಯಾಗಿದೆ. 2008ರ ಮುಂಗಾರು, 2015ರ ಹಿಂಗಾರು, 2020ರ ಮುಂಗಾರು, 2021ರ ಮುಂಗಾರು ಮತ್ತು 2025 ಮುಂಗಾರಿನಲ್ಲಿ ಕೂಡ ಯೂರಿಯ ಗೊಬ್ಬರ ಕೊರತೆಯಾಗಿದೆ. ಯೂರಿಯ ಗೊಬ್ಬರ ಕೊರತೆಯಾಗಲು ಒಂದೆರಡು ಕಾರಣವಲ್ಲ, ಹಲವಾರು ಕಾರಣಗಳಿವೆ. ಭಾರತದಲ್ಲಿ ಉತ್ಪಾದನೆಯಾಗುವ ಯೂರಿಯ ಗೊಬ್ಬರ, ಭಾರತದಲ್ಲಿನ ಬೇಡಿಕೆಗೆ ಸರಿಹೊಂದುತ್ತಿಲ್ಲ,ಹಾಗಾಗಿ ಬೇರೆ ದೇಶಗಳಿಂದ ಯೂರಿಯ ವನ್ನು ಆಮದು ಮಾಡಿಕೊಳ್ಳುತ್ತಿದೆ. ನಮ್ಮ ದೇಶದಲ್ಲಿ ಯೂರಿಯ ಉತ್ಪಾದನೆ ಕ್ರಮೇಣವಾಗಿ ಹೆಚ್ಚಾಗುತ್ತಿದೆ, ಆದರೆ ಅದೇ ರೀತಿ ಬೇಡಿಕೆನು ಕೂಡ ಹೆಚ್ಚಾಗ್ತಾ ಇದೆ. ಸರಿಯಾದ ಸಮಯಕ್ಕೆ ಯೂರಿಯ ಬೇರೆ ರಾಷ್ಟ್ರಗಳಿಂದ ಆಮದು ಆಗದೆ ಇರುವುದು, ರೈತರು ಶಿಫಾರಸ್ಸಿಗಿಂತ ಹೆಚ್ಚಾಗಿ ಯೂರಿಯ ಗೊಬ್ಬರವನ್ನು ಬಳಸುತ್ತ ಇರುವುದು, ಸಾರಜನಕ ಪೂರೈಕೆಗಾಗಿ ಯೂರಿಯ ಗೊಬ್ಬರವನ್ನೇ ಅವಲಂಬಿತವಾಗಿರುವುದು, ಕೃಷಿಗೆ ಬಿಟ್ಟು ಬೇರೆ ಕಾರ್ಖಾನೆಗಳಿಗೆ ಯೂರಿಯ ಕಳ್ಳಸಾಗಾಣಿಕೆ ಆಗುತ್ತಾ ಇರುವುದು ಹೀಗೆ ಅನೇಕ ಕಾರಣಗಳಿವೆ.
ಯಾವುದೇ ಗೊಬ್ಬರವಾಗಲಿ, ಶಿಫಾರಸ್ಸಿಗೆ ತಕ್ಕಂತೆ ಹಾಕಬೇಕು ಹಾಗೆಯೆ,ಒಂದೊಂದು ಬೆಳೆಗೆ ಒಂದೊಂದು ಸಾರಜನಕದ ಪ್ರಮಾಣ ಇರುತ್ತದೆ. ಯೂರಿಯ ಗೊಬ್ಬರ ಕೇವಲ ಸಾರಜನಕವನ್ನು ಮಾತ್ರ ಪೂರೈಸುತ್ತದೆ, ಆದರೆ ಸಸ್ಯಗಳಿಗೆ ಅಧಿಕ ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಂ ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಬರೀ ಸಾರಜನಕವನ್ನುಪೂರೈಸುವ ಯೂರಿಯ ಬಳಸಿದರೆ ಸಾಲದು. ರಂಜಕ ಮತ್ತು ಪೊಟ್ಯಾಸಿಯಂ ಪೂರೈಸುವ ಗೊಬ್ಬರಗಳ್ಳನ್ನು ಉಪಯೋಗಿಸಬೇಕಾಗುತ್ತದೆ. ಹೆಚ್ಚು ಯೂರಿಯ ಹಾಕಿದರೆ ಹೆಚ್ಚು ಇಳುವರಿ ಅನ್ನೋ ತಪ್ಪು ಪರಿಕಲ್ಪನೆಯಿಂದ ಹೊರಬಂದು, ಗೊಬ್ಬರಗಳನ್ನು ಜಾಗ್ರತೆಯಿಂದ ಮತ್ತು ನ್ಯಾಯಯುತವಾಗಿ ಬಳಸಿದರೆ ಅಧಿಕ ಇಳುವರಿಯನ್ನು ಪಡೆಯಬಹುದು ಹಾಗೆಯೆ ಪರಿಸರ ಮಾಲಿನ್ಯವನ್ನು ಕೂಡ ತಡೆಯಬಹುದು.