ಹೆಚ್ಚಿನ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಾಡುವ ಒಂದು ಸವಾಲಿನ ಪ್ರಶ್ನೆಗಳು ಅಂದ್ರೆ ಪಿ.ಯು.ಸಿ ನಂತರ ಯಾವ ಕೋರ್ಸ್ ಮಾಡಿದ್ರೆ ಉತ್ತಮ, ಯಾವ ಕೋರ್ಸ್ ಗೆ ಮುಂದೆ ಭವಿಷ್ಯ ಇದೆ, ಯಾವ ಕೋರ್ಸ್ ಗೆ ಎಂತಹ ಕೆಲಸಗಳು ಸಿಗುತ್ತವೆ ಅನ್ನೋದು. ಇತ್ತೀಚೆಗೆ ಬಿ.ಎಸ್ಸಿ ಕೃಷಿ ಕೂಡ ಒಂದು ಹೆಚ್ಚು ಚಾಲ್ತಿಯಲ್ಲಿರುವ ಕೋರ್ಸ್ ಆಗಿದೆ. ಆದರೆ ಅನೇಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಾಡುವ ಇನ್ನೊಂದು ಪ್ರಶ್ನೆ ಏನು ಅಂದ್ರೆ ಬಿ.ಎಸ್ಸಿ ಕೃಷಿ ನಂತರ ಯಾವ ಯಾವ ಅವಕಾಶಗಳು ಇರುತ್ತವೆ, ಮುಂದೆ ವಿದ್ಯಾಭ್ಯಾಸದ ಆಯ್ಕೆಗಳು ಏನೇನು ಇರಬಹುದು ಅಂತ ತಿಳಿದುಕೊಳ್ಳೋಣ.
ಬಿ.ಎಸ್ಸಿ (ಕೃಷಿ) (B.Sc.Agri.)
ಈ ನಾಲ್ಕು ವರ್ಷದ ಬಿ.ಎಸ್ಸಿ ಕೃಷಿಯಲ್ಲಿ, ಎಂಟು ಸೆಮಿಸ್ಟರ್ ಗಳು ಬರುತ್ತವೆ ಈ ಸೆಮಿಸ್ಟರ್ ಗಳಲ್ಲಿ ಕೃಷಿ ಅರ್ಥಶಾಸ್ತ್ರ, ಕೃಷಿ ಕೀಟಶಾಸ್ತ್ರ, ಸಸ್ಯ ರೋಗಶಾಸ್ತ್ರ, ತಳಿಶಾಸ್ತ್ರ, ಬೇಸಾಯಶಾಸ್ತ್ರ, ಸೂಕ್ಷ್ಮಜೀವಿ ಶಾಸ್ತ್ರ ಹೀಗೆ ಅನೇಕ ರೀತಿಯ ವಿಷಯಗಳನ್ನು ಕಲಿಯುತ್ತೀರಿ.
ಬಿ.ಎಸ್ಸಿ (ಕೃಷಿ) ಆದ ನಂತರ ಕೃಷಿ ಸಂಬಂಧಿತ ಕೆಲಸಗಳು ಮತ್ತು ಇತರೆ ಕೆಲಸಗಳು, ಈ ಎರಡು ವಿಭಾಗಗಳಲ್ಲು ಕೆಲಸವನ್ನು ಪಡೆಯಬಹುದು.
ಬಿ.ಎಸ್ಸಿ (ಕೃಷಿ) ಆದ ನಂತರ ಕೃಷಿ ಸಂಬಂಧಿತ ಕೆಲಸಗಳು:
1. ಕೃಷಿ ವಿಭಾಗದಲ್ಲಿ, ರಾಜ್ಯ ಕೃಷಿ ಇಲಾಖೆಯಲ್ಲಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಈ ನೇಮಕಾತಿಗಳು ಪ್ರತಿ ವರ್ಷ ಆಗುವುದಿಲ್ಲ ನಾಲ್ಕೈದು ವರ್ಷಗಳಿಗೊಮ್ಮೆ ಆಗುತ್ತಿವೆ.
2. ಅತಿ ಹೆಚ್ಚು ವಿದ್ಯಾರ್ಥಿಗಳು ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಐ.ಬಿ.ಪಿ.ಎಸ್ ಪ್ರವೇಶ ಪರೀಕ್ಷೆಯ ಮೂಲಕ ಅಗ್ರಿಕಲ್ಚರ್ ಫೀಲ್ಡ್ ಆಫೀಸರ್ ಆಗಿ ಸಾಕಷ್ಟು ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿದ್ದಾರೆ.
3. ಕಾರ್ಪೊರೇಷನ್ (ನಿಗಮ) ವಿಭಾಗದಲ್ಲಿ, ಸೀಡ್ ಕಾರ್ಪೊರೇಷನ್ (ಬೀಜ ನಿಗಮ), ಫರ್ಟಿಲೈಸರ್ ಕಾರ್ಪೊರೇಷನ್ (ಗೊಬ್ಬರ ನಿಗಮ) ಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ ಆದರೆ ಇವುಗಳ ನೇಮಕಾತಿಯು ಪ್ರತಿವರ್ಷ ಆಗುವುದಿಲ್ಲ.
4. ಕೃಷಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಅದು ಸ್ವದೇಶೀ ಕಂಪನಿ ಅಥವಾ ಬಹು ದೇಶದ ಕಂಪನಿಗಳಲ್ಲಿ ಉದ್ಯೋಗಗಳು ದೊರೆಯುತ್ತವೆ.
5. ಭಾರತದ ಆಹಾರ ಸಂಗ್ರಹ ಸಂಸ್ಥೆ ಮತ್ತು ನಬಾರ್ಡ್ (NABARD) ಸಂಸ್ಥೆಗಳಲ್ಲೂ ಕೂಡ ಉದ್ಯೋಗಾವಕಾಶಗಳು ಇರುತ್ತವೆ. ಆದರೆ ಇವುಗಳು ನೇಮಕಾತಿ ಕಡಿಮೆ ಸಂಖ್ಯೆಯಲ್ಲಿ ಇರುತ್ತವೆ ಹಾಗೂ ಪ್ರತಿವರ್ಷ ನೇಮಕಾತಿಗಳು ನಡೆಯುವುದಿಲ್ಲ.
6. ಆರನೆಯದಾಗಿ ಬೋರ್ಡ್ ಗಳಲ್ಲಿ (ಸರ್ಕಾರೀ ಸಂಸ್ಥೆಗಳಲ್ಲಿ) ಉದಾಹರಣೆಗೆ ಸಿಲ್ಕ್ ಬೋರ್ಡ್ (ರೇಷ್ಮೆ ಸಂಸ್ಥೆ), ಕಾಫಿ ಬೋರ್ಡ್, ತೆಂಗು ಬೋರ್ಡ್ ಇಂತಹ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ. ಆದರೆ ಇವುಗಳ ಉದ್ಯೋಗಗಳ ಸಂಖ್ಯೆ ಕಡಿಮೆ ಇದ್ದು ಇವುಗಳು ಪ್ರತಿವರ್ಷ ನೇಮಕಾತಿ ಆಗುವುದಿಲ್ಲ.
7. ವಾಣಿಜ್ಯೋದ್ಯಮ ಅವಕಾಶಗಳು, ಬಿ.ಎಸ್.ಸಿ ಅಗ್ರಿ, ಮುಗಿಸಿದ ಕೆಲವು ಯುವಕ ಯುವತಿಯರು ಸ್ವಂತವಾಗಿ ಅಗ್ರಿ ಕ್ಲಿನಿಕ್ (ಕೃಷಿ ಕ್ಲಿನಿಕ್) ಮತ್ತು ಪೀಡೇನಾಶಕ/ಕೀಟನಾಶಕ ಅಥವಾ ರಸಗೊಬ್ಬರ ಅಂಗಡಿಗಳನ್ನು ಸ್ಥಾಪಿಸಿ ಸ್ವಯಂ ಉದ್ದಿಮೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಬಿ.ಎಸ್ಸಿ (ಕೃಷಿ) ಆದ ನಂತರ ಕೃಷಿಯೇತರ/ ಇತರೆ ವಿಭಾಗಗಳಲ್ಲಿ ಕೆಲಸಗಳು
ಕೃಷಿಯೇತರ/ ಇತರೆ ವಿಭಾಗಗಳಲ್ಲಿ, ಅನೇಕ ವಿದ್ಯಾರ್ಥಿಗಳು ಯುಪಿಎಸ್ಸಿ (UPSC) ಮತ್ತು ಅಗ್ರಿಕಲ್ಚರ್ (ಕೃಷಿ) ಅನ್ನು ಆಯ್ಕೆಯ ವಿಷಯವಾಗಿ ತೆಗೆದುಕೊಂಡು ಉತ್ತೀರ್ಣರಾಗಿ ಒಳ್ಳೆಯ ಹುದ್ದೆಯಲ್ಲೂ ಕೂಡ ಇದ್ದಾರೆ. ಇನ್ನೂ ಕೆಲವರು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮತ್ತು ಎಫ್ ಡಿ ಎ (FDA) ಪರೀಕ್ಷೆಗಳನ್ನು ಉತ್ತೀರ್ಣ ಮಾಡಿ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಇನ್ನು ಬಹಳಷ್ಟು ವಿದ್ಯಾರ್ಥಿಗಳು ಪ್ರತಿಷ್ಠಿತ ಹಾಗೂ ಕೃಷಿ ಆಧಾರಿತ ಕಂಪನಿಗಳಲ್ಲಿ ಇಲ್ಲೂ ಕೂಡ ತುಂಬಾ ವಿಭಾಗಗಳಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ.
ಬಿ. ಎಸ್ಸಿ. ಕೃಷಿ (B.Sc. Agri) ಮುಗಿದ ನಂತರ ಎಂ.ಎಸ್ಸಿ. (ಕೃಷಿ) (M.Sc. Agri)?
ಬಿ. ಎಸ್ಸಿ. ಕೃಷಿ (B.Sc. Agri) ಮುಗಿದ ನಂತರ ಉನ್ನತ ಶಿಕ್ಷಣಕ್ಕಾಗಿ ಎಂ.ಎಸ್ಸಿ. (ಕೃಷಿ) (M.Sc. Agri) ಗೆ ಸೇರಬಹುದು. ಇದಕ್ಕೆ ಸ್ಟೇಟ್ ಎಂಟ್ರೆನ್ಸ್ (ರಾಜ್ಯ ಪ್ರವೇಶ ಪರೀಕ್ಷೆ) ಮತ್ತು ICAR ಸೆಂಟ್ರಲ್ ಎಂಟ್ರೆನ್ಸ್ ಗಳು (ಕೇಂದ್ರ ಪ್ರವೇಶ ಪರೀಕ್ಷೆ) ಇರುತ್ತವೆ. ಐ.ಸಿ.ಎ.ರ್ ಸೆಂಟ್ರಲ್ ಎಂಟ್ರೆನ್ಸ್ ಗಳಲ್ಲಿ ಉತ್ತೀರ್ಣರಾದರೆ ಆದರೆ ಫೆಲೋಶಿಪ್ ಸಿಗುತ್ತದೆ. ಎಂ.ಎಸ್ಸಿ. (ಕೃಷಿ) ನಂತರ ಇನ್ನು ಹೆಚ್ಚು ಉದ್ಯೋಗವಕಾಶಗಳು ಇರುತ್ತವೆ. ಎಂ.ಎಸ್ಸಿ. (ಕೃಷಿ) ಯಲ್ಲಿ ನೀವು ಬಿ.ಎಸ್ಸಿ ಕೃಷಿಯಲ್ಲಿ ಓದಿದ ಯಾವುದಾದರೂ ಒಂದು ವಿಷಯವನ್ನು ಆಯ್ಕೆಯಾಗಿ ತೆಗೆದುಕೊಳ್ಳಬೇಕಾಗುತ್ತದೆ.
ಎರಡು ವರ್ಷದ ಎಂ. ಎಸ್ಸಿ. (ಕೃಷಿ) ಕೋರ್ಸ್ ನಲ್ಲಿ ಮೊದಲ ವರ್ಷ ಕೋರ್ಸ್ ಕೆಲಸಗಳು ಮತ್ತು ಪರೀಕ್ಷೆಗಳು ಇರುತ್ತವೆ. ಎರಡನೆ ವರ್ಷ ಸಂಶೋಧನೆ ಮತ್ತು ಪ್ರಬಂಧ ಸಲ್ಲಿಕೆ ಇರುತ್ತದೆ. ಪ್ರತಿ ವಿದ್ಯಾರ್ಥಿಗೆ ಒಬ್ಬ ರಿಸರ್ಚ್ ಗೈಡ್ (ಸಂಶೋಧನಾ ಸಲಹೆಗಾರನನ್ನು) ಅನ್ನು ನೇಮಕ ಮಾಡುತ್ತಾರೆ. ಇವರ ಮಾರ್ಗದರ್ಶನದಲ್ಲಿ ಒಂದು ವರ್ಷ ಕೃಷಿಯಲ್ಲಿ ಸಂಶೋಧನೆ ಮಾಡಿ ನಂತರ ಪ್ರಬಂಧವನ್ನು ಸಲ್ಲಿಕೆ ಮಾಡಿ ಎಂ. ಎಸ್ಸಿ (ಕೃಷಿ) ಸ್ನಾತಕೋತರ ಪದವಿಯನ್ನು ಪಡೆಯಬೇಕಾಗುತ್ತದೆ.
ಎಂ. ಎಸ್ಸಿ. (ಕೃಷಿ) ನಂತರ ವಿಷಯದ ವಿಭಾಗಕ್ಕೆ (Department) ತಕ್ಕಂತೆ ಅಂದರೆ ನೀವು ಆಯ್ಕೆ ಮಾಡಿರುವ ವಿಷಯಕ್ಕೆ ತಕ್ಕಂತೆ ಉದ್ಯೋಗಾವಕಾಶಗಳು ಇರುತ್ತವೆ. ರಾಜ್ಯದ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳಾಗಿ ಉದ್ಯೋಗಾವಕಾಶಗಳು ದೊರೆಯುತ್ತವೆ. ಆದರೆ ಇವುಗಳ ನೇಮಕಾತಿ ಪ್ರತಿವರ್ಷ ಆಗುವುದಿಲ್ಲ. ಕೃಷಿ ವಿಜ್ಞಾನಿ ನೇಮಕಾತಿ ಸಂಸ್ಥೆ (ASRB) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಕೃಷಿ ವಿಜ್ಞಾನಿಯಾಗಿ ನೇಮಕಗೊಳ್ಳಬಹುದು. ಇದು ಒಂದು ಭಾರತ ಸರ್ಕಾರದ ಉದ್ಯೋಗವಾಗಿರುತ್ತದೆ. ಈ ARS ನೇಮಕಾತಿ ಪ್ರತಿವರ್ಷ ನಡೆಯುತ್ತದೆ, ಆದರೆ ಪೋಸ್ಟ್ ಗಳ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ. ನೀವು ಎಂ.ಎಸ್ಸಿ ಅಲ್ಲಿ ತೆಗೆದುಕೊಂಡಿರುವ ವಿಷಯಗಳು ಆಧಾರದ ಮೇಲೆ ಈ ಎಕ್ಸಾಮ್ ಸಿಲಬಸ್ ಇರುತ್ತದೆ ಹಾಗೂ ಈ ವಿಷಯಗಳ ಆಧಾರದ ಮೇಲೆ ನಿಮ್ಮ ಕೆಲಸ ಇರುತ್ತದೆ. ಕೃಷಿ ಕಂಪನಿಗಳು ನಿಮ್ಮ M.Sc ಯಾ ವಿಷಯದ ಆಧಾರದ ಮೇಲೆ ಕೆಲಸಗಳು ಸಿಗುತ್ತವೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ (ಯುನಿವರ್ಸಿಟಿಗಳಲ್ಲಿ) ಸಹಾಯಕ ಪ್ರಾದ್ಯಾಪಕರಾಗಿ ಮತ್ತು ವಿಷಯ ತಜ್ಞರಾಗಿ ಕೆಲಸಗಳು ಇರುತ್ತವೆ ಆದರೆ, ಇದಕ್ಕೆ ತುಂಬಾ ಸ್ಪರ್ಧೆ ಇರುತ್ತೆ ಮತ್ತು ಪ್ರತಿ ವರ್ಷ ಈ ನೇಮಕಾತಿಗಳು ನಡೆಯುವುದಿಲ್ಲ. ಎಂ. ಎಸ್ಸಿ. ಕೃಷಿ ನಂತರ S.S.C ಅಂದ್ರೆ Staff Selection Commission ನಡೆಸುವ ಅನೇಕ ಅಗ್ರಿಕಲ್ಚರ್ ಸಂಬಂಧಿತ ಸೆಲೆಕ್ಷನ್ ಪೋಸ್ಟ್ ಗಳಿಗೆ ಅಪ್ಲಿಕೇಶನ್ ಹಾಕಿ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ. ಸಿಲ್ಕ್ ಬೋರ್ಡ್, ಕಾಫಿ ಬೋರ್ಡ್, ಮಸಾಲೆ ಬೋರ್ಡ್ ಗಳಲ್ಲಿ ಕೆಲವು ವಿಷಯದಲ್ಲಿ M.Sc ಅಗ್ರಿ ಮಾಡಿದವರಿಗೆ, ಸ್ಪೆಷಲಿಸ್ಟ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಾರೆ, ಆದರೆ ಇವು ಕೂಡ ಪ್ರತಿ ವರ್ಷ ನೇಮಕಾತಿ ಆಗುವುದಿಲ್ಲ ಮತ್ತು ಉದ್ಯೋಗಳ ಸಂಖ್ಯೆ ತುಂಬಾ ಕಡಿಮೆ ಇರುತ್ತವೆ. ಖಾಸಗಿ ಕೃಷಿ ಸಂಭಂದಿತ ಕಂಪನಿಗಳಲ್ಲಿ ಸಂಶೋಧನಾ ವಿಭಾಗಗಳಲ್ಲಿ ಬೇಸಾಯಶಾಸ್ತ್ರ, ಸಸ್ಯ ರೋಗ ಶಾಸ್ತ್ರ, ತಳಿ ಅಭಿವೃದ್ಧಿ ಶಾಸ್ತ್ರ, ಕೀಟಶಾಸ್ತ್ರ ಓದಿರುವವರಿಗೆ ಉದ್ಯೋಗಗಳು ದೊರೆಯುತ್ತವೆ.
ಕೃಷಿ ನೇಮಕಾತಿಗಳ ವಾಸ್ತವತೆ?
ರಾಜ್ಯ ಕೃಷಿ ಇಲಾಖೆಯಲ್ಲಿ, 5 ರಿಂದ 6 ವರ್ಷಗಳಿಗೊಮ್ಮೆ ನೇಮಕಾತಿ ಆಗ್ತಿದೆ. ಕೇಂದ್ರ ಸರ್ಕಾರದ, ಕೃಷಿ ವಿಜ್ಞಾನಿ ನೇಮಕಾತಿ ಪ್ರತಿವರ್ಷ ಆಗುತ್ತೆ, ಆದರೆ ಉದ್ಯೋಗಗಳ ಸಂಖ್ಯೆ ತುಂಬಾ ಕಡಿಮೆ ಇರುತ್ತವೆ ಮತ್ತು ಸ್ಪರ್ಧೆ ದೇಶದಾದ್ಯಂತ ಇರುತ್ತೆ. ಇತ್ತೀಚೆಗೆ ಕೃಷಿ ಖಾಸಗಿ ಕಂಪನಿಗಳು ಕೂಡ ನೇಮಕಾತಿಯನ್ನು ಕಡಿಮೆ ಮಾಡಿವೆ ಆದರೆ ಇವರು ನಿಯಮಿತವಾಗಿ ಆಗಿ ನೇಮಕಾತಿ ಮಾಡಿಕೊಳ್ಳುತ್ತಾರೆ. ಈಗ ಪ್ರಸ್ತುತ ಕೃಷಿ ವಿದ್ಯಾರ್ಥಿಗಳು ಬ್ಯಾಂಕ್ ಕೋಚಿಂಗ್ ಗೆ ಹೋಗಿ ಐಬಿಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬ್ಯಾಂಕ್ ಕೆಲಸಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಖಾಸಗಿ ಯೂನಿವರ್ಸಿಟಿಗಳಲ್ಲಿ ಕೆಲಸ ಮಾಡ್ತಾ ಇದ್ದಾರೆ, ಇನ್ನೂ ಕೆಲವರು ಸ್ವಂತ ಕೃಷಿ ಸಂಬಂಧಿತ ಉದ್ಯಮಗಳನ್ನು ಶುರು ಮಾಡಿದ್ದಾರೆ. ಕೀಟನಾಶಕ. ಪೀಡೆನಾಶಕ ಅಂಗಡಿ, ಅಗ್ರಿ ಕ್ಲೀನಿಕ್, ಗೊಬ್ಬರ ಅಂಗಡಿ, ಕೃಷಿ ಸಲಹಾ ಸೇವೆಗಳು, ಈ ರೀತಿ ಉದ್ದಿಮೆಗಳನ್ನು ಹೊಂದಿದ್ದಾರೆ. ತುಂಬಾ ಜನ ಖಾಸಗಿ ಕಂಪನಿಗಳಲ್ಲಿ ರಿಸರ್ಚ್ ಮತ್ತು ಡೆವಲಪ್ಮೆಂಟ್ ವಿಭಾಗಗಳಲ್ಲಿ ಉತ್ತಮ ಹುದ್ದೆಗಳಲ್ಲೂ ಇದ್ದಾರೆ ಹಾಗೆಯೇ ಮಾರಾಟ ವಿಭಾಗದಲ್ಲಿ ನಲ್ಲಿ ಕೂಡ ಕೆಲಸ ಮಾಡುತ್ತಾ ಇದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಬಿ.ಎಸ್ಸಿ. (ಅಗ್ರಿ) ಕೋರ್ಸ್ ಗೆ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಳ್ತಾ ಇದ್ದಾರೆ, ಸೇರ್ಪಡೆ ಜಾಸ್ತಿಯಾಗಿ ಕೃಷಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಆಗಿದೆ ಆದರೆ ನೇಮಕಾತಿಗಳು ಮಾತ್ರ ಸರಿಯಾಗಿ ಆಗುತ್ತಿಲ್ಲ, ಹಾಗೆಯೇ ಜಾಸ್ತಿ ಕೂಡ ಆಗೋದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ, ಉದ್ಯೋಗಗಳ ಸಂಖ್ಯೆ ಕಡಿಮೆಯಾಗಿದೆ.
ಬಿ. ಎಸ್ಸಿ. (ಕೃಷಿ) ಗೆ ಗೆ ಸೇರಿದ್ರೆ ಸಾಕು ಸರ್ಕಾರಿ ಕೆಲಸ ಫಿಕ್ಸ್ ಅನ್ನೋ ಮಾತು ಈಗ ಸುಳ್ಳು, 20 ರಿಂದ 25 ವರ್ಷಗಳ ಹಿಂದೆ ಈ ರೀತಿ ಇತ್ತು. ಈಗ ನೇಮಕಾತಿಗಳು, ಉದ್ಯೋಗಗಳ ಸಂಖ್ಯೆ ಕಡಿಮೆ ಆಗಿವೆ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೃಷಿಯಲ್ಲಿ ಹೆಚ್ಚು ಆಸಕ್ತಿ ಇದ್ದು, ಇದರಲ್ಲಿ ಏನಾದರೂ ಸಾಧನೆ ಮಾಡ್ತೀನಿ ಅನ್ನೋದಿದ್ರೆ ಮಾತ್ರ ಬಿ.ಎಸ್ಸಿ. (ಕೃಷಿ) ಗೆ ಸೇರಿಕೊಳ್ಳಿ. ಅದನ್ನು ಬಿಟ್ಟು, ಡಿಗ್ರಿ ಸಿಕ್ಕರೆ ಸಾಕು ಯಾವುದಾದರೂ ಒಂದು ಕೆಲಸ ಸಿಗಲಿ ಅನ್ನುವ ಮನಸ್ಥಿತಿ ಇರುವವರು, ಬಿ.ಎಸ್ಸಿ. (ಕೃಷಿ) ಗೆ ಸೇರ್ಪಡೆಯಾಗೋಕೆ ಮುನ್ನ ಒಮ್ಮೆ ಯೋಚಿಸಿ. ಇತ್ತೀಚೆಗೆ ಸ್ಪರ್ಧಾತ್ಮಕತೆ ತುಂಬಾ ಹೆಚ್ಚಿದೆ ಮತ್ತು ನೇಮಕಾತಿಗಳು ಕಡಿಮೆ ಆಗ್ತಾ ಇದೆ. ಇದು ನಮ್ಮ ಅನುಭವ ಮತ್ತು ಅಭಿಪ್ರಾಯ ಅಷ್ಟೇ.