ರೈತರು ತಪ್ಪದೇ ತಿಳಿಯಿರಿ – ಅಡಿಕೆ ರೋಗ!
ಅಡಿಕೆಗೆ ಕಾಡುವ ಅನೇಕ ರೋಗಗಳಲ್ಲಿ ಕೊಳೆರೋಗ ಒಂದು ಪ್ರಮುಖ ರೋಗವಾಗಿದ್ದು, ಇದು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಕೊಳೆರೋಗವನ್ನು ಕಾಯಿ ಕೊಳೆ ರೋಗ ಅಥವಾ ಮಹಾಲಿ ರೋಗ ಎಂದು ಕರೆಯುತ್ತಾರೆ. ಮುಂಗಾರು ಮಳೆ ಪ್ರಾರಂಭವಾದ 15 ರಿಂದ 20 ದಿನಗಳ ನಂತರ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಈ ರೋಗದ ಬಾಧೆ ತೀವ್ರವಾಗಿರುತ್ತದೆ. ಮುಂಜಾಗ್ರತಾ ಕ್ರಮಗಳನ್ನು ಮತ್ತು ಸಮಗ್ರ ನಿರ್ವಹಣೆ ಕ್ರಮಗಳನ್ನು ಪಾಲಿಸದೆ ಇರುವುದು, ಮಳೆಗಾಲದಲ್ಲಿ ಈ ರೋಗದ ಸ್ಪೋಟಕ್ಕೆ ಮುಖ್ಯ ಕಾರಣವಾಗಿದೆ.
1. ಕೊಳೆರೋಗದಿಂದ ಅಡಿಕೆ ಇಳುವರಿ ನಷ್ಟ?
ಇದು ಒಂದು ಮಳೆಗಾಲದ ಮಾರಕ ರೋಗವಾಗಿದ್ದು, ಇದರಿಂದ ಸಂಪೂರ್ಣವಾಗಿ ಅಡಿಕೆ ಕಾಯಿಯೇ ಕೊಳೆಯುತ್ತದೆ. ಈ ರೋಗವನ್ನು ನಿರ್ವಹಣೆ ಮಾಡದಿದ್ದರೆ, ಇಡೀ ಅಡಿಕೆ ತೋಟವೇ ಹಾಳಾಗಿ, ಭಾರಿ ಇಳುವರಿ ನಷ್ಟ ಅನುಭವಿಸಬೇಕಾಗುತ್ತದೆ. ಈ ಕಾಯಿ ಕೊಳೆ ರೋಗದಿಂದ ಶೇಕಡ 10 ರಿಂದ 90 ರಷ್ಟು ಇಳುವರಿ ನಷ್ಟವಾಗುತ್ತದೆ.
2. ಕೊಳೆರೋಗ ಉಂಟುಮಾಡುವ ಶಿಲೀಂದ್ರ ರೋಗಾಣು?
ಈ ಕಾಯಿ ಕೊಳೆ ರೋಗವನ್ನು ಪೈಟೊಪ್ಟರ ಮಿಡಿ (Phytophthora meadii) ಎಂಬ ಶಿಲೀಂದ್ರ ಉಂಟುಮಾಡುತ್ತದೆ. ಈ ಶಿಲೀಂದ್ರ ರೋಗಾಣು ಅನೇಕ ರೀತಿಯ ಬೀಜ ಕಣಗಳನ್ನು ಉತ್ಪತ್ತಿ ಮಾಡುತ್ತದೆ. ಅವುಗಳೆಂದರೆ ಸ್ಪೋರಂಜಿಯಾ (Sporangia), ಇದು ಈ ರೋಗಕಾರಕ ಶಿಲೀಂದ್ರ ಉತ್ಪತ್ತಿ ಮಾಡುವಂತಹ ಮೊದಲ ಬೀಜ ಕಣವಾಗಿರುತ್ತದೆ. ಸ್ಪೋರಂಜಿಯಾ ಒಳಗೆ, ಝೂಸ್ಪೋರ್ಸ್ (Zoospores) ಎಂಬ ಮರಿ ಬೀಜ ಕಣಗಳು ತುಂಬಾನೇ ಇರುತ್ತವೆ. ಇವು ಮಳೆ ಗಾಳಿ ಬಂದಾಗ ನೀರಿನ ಹನಿಯ ಸಹಾಯದೊಂದಿಗೆ ಅಡಿಕೆ ಗೊನೆಗಳ ಮೇಲೆ ಬಿದ್ದು, ರೋಗವನ್ನು ಉಂಟು ಮಾಡುತ್ತವೆ.

3. ಕೊಳೆರೋಗದ ಲಕ್ಷಣಗಳು:
ಕೊಳೆ ರೋಗದ ಲಕ್ಷಣಗಳನ್ನು ಸಸ್ಯದ ಎರಡು ಭಾಗಗಳಲ್ಲಿ ನೋಡಬಹುದು. ಮೊದಲಿಗೆ, ಅಡಿಕೆಕಾಯಿ ಅಥವಾ ಗೊಂಚಲಿನಲ್ಲಿ & ಎರಡನೆಯದಾಗಿ, ಎಲೆ ಮತ್ತು ಸುಳಿಗಳಲ್ಲಿ.
- ಅಡಿಕೆ ಕಾಯಿ ಅಥವಾ ಗೊಂಚಲಿನಲ್ಲಿ ಕಾಣುವಂತಹ ರೋಗದ ಲಕ್ಷಣಗಳೆಂದರೆ, ಮೊದಲು ಅಡಿಕೆ ಕಾಯಿಗಳ ತೊಟ್ಟು ಭಾಗದಲ್ಲಿ ನೀರಿನಂತಹ ಕಡು ಹಸಿರು ಬಣ್ಣದ ಚುಕ್ಕಿಗಳು ಕಾಣಿಸಿಕೊಳ್ಳುತ್ತವೆ. ನಂತರ ಈ ಚುಕ್ಕಿಗಳು ಇಡೀ ಕಾಯಿಯನ್ನು ಆವರಿಸಿಕೊಳ್ಳುತ್ತವೆ. ನಂತರ ಅಡಿಕೆ ಕಾಯಿ ಕಪ್ಪಗಾಗಿ ಕೊಳೆಯಲು ಪ್ರಾರಂಭಿಸುತ್ತದೆ. ನಂತರ ಅಡಿಕೆಕಾಯಿಯ ತೊಟ್ಟು ಬಲಹೀನಗೊಂಡು ಕೊಳೆಯುತ್ತಿರುವ ಕಾಯಿಗಳು ಉದುರಿ, ಮರದ ಕೆಳಗೆ ಬೀಳುತ್ತವೆ ನಂತರ ಕ್ರಮೇಣವಾಗಿ ಕಾಯಿ ಕೊಳೆಯುತ್ತಾ ಹೋಗುತ್ತದೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದಾಗ ಈ ಕೊಳೆತ ಕಾಯಿಗಳ ಮೇಲೆ ಬೂದು ಬಣ್ಣದ ರೋಗಕಾರಕ ಶಿಲೀಂದ್ರ ಬೆಳೆಯುತ್ತದೆ. ಇದರಿಂದ ಅಡಿಕೆ ಕಾಯಿಗಳಿಗೆ ಹಾನಿಯಾಗಿ ಗುಣಮಟ್ಟ ಕಡಿಮೆಯಾಗಿ ಇಳುವರಿ ನಷ್ಟವಾಗುತ್ತದೆ. ರೋಗದ ತೀವ್ರತೆ ಹೆಚ್ಚಾದಲ್ಲಿ ಸಂಪೂರ್ಣ ಅಡಿಕೆ ಗೊನೆ ಕೊಳೆತು ಒಣಗಿ ಹೋಗುತ್ತದೆ. ಮುಂಗಾರು ಕೊನೆಗೊಂಡಂತೆ ಕೆಲವು ರೋಗಭಾದಿತ ಕಾಯಿಗಳು ಒಣಗಿ ಗಟ್ಟಿಯಾಗಿ ಉದುರದೇ ಮರದಲ್ಲೇ ಉಳಿದುಬಿಡುತ್ತವೆ.
- ಮರದ ಸುಳಿಯಲ್ಲಿ ಕಾಣುವ ಲಕ್ಷಣಗಳೆಂದರೆ, ಕಾಯಿಗಳ ಮೇಲೆ ಬೆಳೆದಿರುವಂತಹ ರೋಗಕಾರಕ ಶಿಲೀಂದ್ರ, ಅಡಿಕೆ ಮರದ ಸುಳಿಗೆ ಆಕ್ರಮಣ ಮಾಡುತ್ತದೆ. ಇದರಿಂದಾಗಿ ಮರದ ಎಲೆಗಳು ಹಳದಿಯಾಗಿ ಜೋತುಬಿದ್ದು, ಒಂದರ ನಂತರ ಒಂದರಂತೆ ಉದುರುತ್ತವೆ. ನಂತರ ಮರದ ಸುಳಿ ಕೊಳೆತು, ಅಡಿಕೆ ಮರ ಸಾಯುತ್ತದೆ.

4. ಕಾಯಿಕೊಳೆ ರೋಗಕ್ಕೆ ಅನುಕೂಲಕರ ವಾತಾವರಣಗಳು :
- ಹೆಚ್ಚು ಮತ್ತು ನಿರಂತರ ಮಳೆ ವಾತಾವರಣ (>2000–3000 mm/year).
- ಗಾಳಿಯಲ್ಲಿ ಹೆಚ್ಚಿನ ತೇವಾಂಶ (RH > 90%) ಹಾಗೂ ಕಡಿಮೆ ಉಷ್ಣಾಂಶ (22–28 °C).
- ನಡುವೆ ಎಳೆ ಬಿಸಿಲು ಬಂದ ಕೂಡಲೇ ಈ ಕೊಳೆರೋಗ ಅತಿ ವೇಗವಾಗಿ ಹರಡಲು ಶುರುಮಾಡುತ್ತದೆ.
- ತೋಟದಲ್ಲಿ ಸರಿಯಾಗಿ ಗಾಳಿ ಮತ್ತು ಬೆಳಕು ಆಡದೆ ಇರುವುದು.
- ತೋಟದಲ್ಲಿ ನೀರು ನಿಲ್ಲುವುದು.
- ತುಂಬಾ ಹತ್ತಿರವಾಗಿ ಸಸಿಗಳನ್ನು ಹಾಕಿರುವುದು.
5. ರೋಗಾಣುವಿನ ಜೀವನ ಚಕ್ರ :
ಮುಂಗಾರು ಶುರುವಾದ ಕೂಡಲೇ ಮಣ್ಣಿನಲ್ಲಿರುವಂತಹ ಮತ್ತು ಬಾಧಿತ ಸಸ್ಯಭಾಗಗಳಲ್ಲಿ ಇರುವ ರೋಗಕಾರಕ ಶಿಲೀಂದ್ರ ಸಕ್ರಿಯಗೊಂಡು ಸ್ಪೋರಂಜಿಯಾ ಎನ್ನುವ ಬೀಜ ಕಣಗಳನ್ನು ಉತ್ಪಾದನೆ ಮಾಡುತ್ತದೆ. ಈ ಸ್ಪೋರಂಜಿಯಾ ಗಳು, ಝೂಸ್ಪೋರ್ಸ್ (Zoospores) ಎಂಬ ಮರಿ ಬೀಜ ಕಣಗಳನ್ನು ಬಿಡುಗಡೆ ಮಾಡುತ್ತವೆ.
ಈ ಝೂಸ್ಪೋರ್ಸ್ ಗಳು ಗಾಳಿಭರಿತ ಮಳೆಯ ಹನಿಗಳೊಂದಿಗೆ ಸೇರಿಕೊಂಡು, ಆರೋಗ್ಯವಂತ ಅಡಿಕೆ ಕಾಯಿಯ ಗೊನೆಗಳ ಮೇಲೆ ಬೀಳುತ್ತವೆ. ನಂತರ ಈ ಝೂಸ್ಪೋರ್ಸ್ ಮೊಳಕೆಯೊಡೆದು, ಅಡಿಕೆ ಕಾಯಿಗಳ ಒಳಹೋಗಿ ರೋಗವನ್ನು ಉಂಟು ಮಾಡುತ್ತವೆ. ಹೀಗೆ ಗೊನೆಯಿಂದ ಕೊನೆಗೆ ಮಳೆ ಗಾಳಿಯ ಮುಖಾಂತರ ಹರಡುತ್ತವೆ.
6. ಸಮಗ್ರ ರೋಗ ನಿರ್ವಹಣಾ ಕ್ರಮಗಳು :
ರೋಗದ ನಿರ್ವಹಣೆ ಸಮಗ್ರವಾಗಿದ್ದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ. ಬರೀ ಶಿಲೀಂದ್ರನಾಶಕದ ಮೇಲೆ ಅವಲಂಬಿತವಾದರೆ ಅದು ಒಳ್ಳೆಯದಲ್ಲ.
- ತೋಟದಲ್ಲಿ ಬಿಟ್ಟಿರುವ ಕಳೆದ ವರ್ಷದ ರೋಗಭಾದಿತ ಕಾಯಿಗಳು ಸಿಂಗಾರ (ಹೊಂಬಾಳೆ) ಮತ್ತು ಮರದ ಇತರ ಭಾಗಗಳನ್ನು ಕಿತ್ತು ನಾಶಪಡಿಸಬೇಕು. ಇದರಿಂದ ನಿಮ್ಮ ತೋಟದಲ್ಲಿ ಇರುವ ಶೇಕಡ 50ರಷ್ಟು ರೋಗಾಣುಗಳು ನಾಶವಾಗುತ್ತವೆ.
- ತೋಟದಲ್ಲಿ ನೀರು ನಿಲ್ಲದಂತೆ ಸರಿಯಾಗಿ ಬಸಿಗಾಲುವೆಗಳನ್ನು ಮಾಡಬೇಕು. ಏಕೆಂದರೆ ನೀರು ನಿಂತರೆ ಈ ರೋಗ ಬಹುಬೇಗನೆ ಹರಡುತ್ತದೆ.
- ತೋಟದಲ್ಲಿ ಅಡಿಕೆ ಜೊತೆ ಯಾವುದಾದರೂ ಬೇರೆ ಅಂತರ ಬೆಳೆ ಅಥವಾ ಮಿಶ್ರ ಬೆಳೆ ಹಾಕಿದ್ದರೆ, ಈ ಗಿಡಗಳ ಹೆಚ್ಚುವರಿ ಕೊಂಬೆಗಳನ್ನು ಕತ್ತರಿಸಿ ತೋಟಕ್ಕೆ ಗಾಳಿಯಾಡುವಂತೆ ನೋಡಿಕೊಳ್ಳಬೇಕು.
- ಅಡಿಕೆ ನಾಟಿ ಮಾಡುವಾಗ ಶಿಫಾರಸ್ಸು ಮಾಡಿದ ಅಂತರದಲ್ಲಿ ಸಸಿಗಳನ್ನು ನೆಡಬೇಕು (2.7 x 2.7 m). ಇಲ್ಲವಾದರೆ ಮುಂದಿನ ವರ್ಷಗಳಲ್ಲಿ ಈ ಕೊಳೆ ರೋಗ ಒಂದು ಮರದಿಂದ ಇನ್ನೊಂದು ಮರಕ್ಕೆ ವೇಗವಾಗಿ ಹರಡುತ್ತದೆ.
- ಅಡಿಕೆಗೆ ಬೇಕಾಗುವ ಪೊಟ್ಯಾಶಿಯಂ ಪೋಷಕಾಂಶವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಹಾಕಬೇಕು ಇದರಿಂದ ಸಸ್ಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
- ವಾತಾವರಣದ ಗಾಳಿಯಲ್ಲಿ ತೇವಾಂಶ ಹೆಚ್ಚಾದಾಗ, ಅಡಿಕೆ ಸಿಪ್ಪೆ ಅಥವಾ ಭತ್ತದೊಟ್ಟು ಅಥವಾ ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸಿ ತೋಟದಲ್ಲಿ ಅಲ್ಲಲ್ಲಿ ಹೊಗೆ ಹಾಕುವುದರಿಂದ ತೇವಾಂಶ ಕಡಿಮೆಯಾಗಿ ರೋಗ ಹರಡುವುದು ನಿಧಾನವಾಗುತ್ತದೆ.
- ಅಧಿಕ ರೋಗ ತೀವ್ರತೆಯ ಪ್ರದೇಶಗಳಲ್ಲಿ, ಜೂನ್ ತಿಂಗಳಲ್ಲಿ ಅಡಿಕೆ ಕೊನೆಗಳಿಗೆ 60 x 75 cm ಅಳತೆಯ 100 ಗೇಜ್ ಇರುವ ಪಾಲಿಥಿನ್ ಕವರ್ ಗಳನ್ನು ಕಟ್ಟುವುದು. ಇದರಿಂದ ಕೊನೆಗಳಿಗೆ ರೋಗಾಣುಗಳು ತಾಕುವುದಿಲ್ಲ.
- ವರ್ಷಕೊಮ್ಮೆ, ಪ್ರತಿ ಅಡಿಕೆ ಮರಕ್ಕೆ 2 ಕೆ.ಜಿ ಬೇವಿನ ಹಿಂಡಿಯನ್ನು ಮುಂಗಾರಿಗೆ ಮುನ್ನ ಹಾಕುವುದು.
- 10 ರಿಂದ 15 ಕೆಜಿ ಕೊಟ್ಟಿಗೆ ಅಥವಾ ಸಾವಯವ ಗೊಬ್ಬರದೊಂದಿಗೆ ಟ್ರೈಕೋಡರ್ಮ (Trichoderma viride) ಅಥವಾ ಸುಡೋಮೋನೋಸ್ ಫ್ಲೋರೊಸೆನ್ಸ್ (Pseudomonas fluorescens) ಎಂಬ ಜೈವಿಕ ರೋಗನಾಶಕಗಳನ್ನು ಅಭಿವೃದ್ಧಿಪಡಿಸಿ, ಪ್ರತಿ ಮರದ ಸುತ್ತ ಹಾಕುವುದರಿಂದ ಮಣ್ಣಿನಲ್ಲಿರುವ ರೋಗಾಣುಗಳು ನಾಶವಾಗುತ್ತವೆ.
- ಕಡ್ಡಾಯವಾಗಿ, ಶೇಕಡ 1ರಷ್ಟು ಬೋರ್ಡೋ ದ್ರಾವಣವನ್ನು (Bordeaux mixture) ಮೇ ತಿಂಗಳ ಎರಡನೇ ಅಥವಾ ಮೂರನೇ ವಾರ ಅಡಿಕೆ ಕೊನೆಗಳಿಗೆ ಸಿಂಪಡಿಸಬೇಕು. ನಂತರ 30 ರಿಂದ 40 ದಿನಗಳ ಅಂತರದಲ್ಲಿ ಎರಡನೇ ಸಿಂಪಡನೆ ಮಾಡಬೇಕು. ಅಗತ್ಯ ಬಿದ್ದರೆ ಮೂರನೇ ಸಿಂಪಡಣೆಯನ್ನು ತೆಗೆದುಕೊಳ್ಳಬೇಕು. ಬೋಡೋ ದ್ರಾವಣಕ್ಕೆ ಅಂಟು ಬೆರೆಸಿ ಸಿಂಪಡಣೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
- ಎರಡನೇ ಮತ್ತು ಮೂರನೇ ಸಿಂಪಡಣೆಗಾಗಿ ಬೋರ್ಡೋ ದ್ರಾವಣದ ಬದಲು ಕಾಪರ್ ಆಕ್ಸಿಕ್ಲೋರೈಡ್ 50%WP (Copper Oxychloride 50% WP) ಅನ್ನು 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಅಥವಾ ಮೆಟಾಲಾಕ್ಸಿಲ್ 4% + ಮ್ಯಾಂಕೋಜೆಬ್ 64% WP (Metalaxyl 4% + Mancozeb 64% WP) @ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
- ಕೊಳೆರೋಗ ಈಗಾಗಲೇ ತೋಟಕ್ಕೆ ಬಂದಿದ್ದರೆ, ಅಂತರ್ವ್ಯಾಪಿ ಶಿಲೀಂದ್ರ ನಾಶಕಗಳ ಬಳಕೆ ಅತ್ಯಗತ್ಯ. ಮೆಟಾಲಾಕ್ಸಿಲ್ 4% + ಮ್ಯಾಂಕೋಜೆಬ್ 64% WP (Metalaxyl 4% + Mancozeb 64% WP) ಶಿಲೀಂದ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ 2.5 ಗ್ರಾಂ ಬೆರೆಸಿ ಸಿಂಪಡಿಸಬಹುದು ನಂತರ 25 ದಿನಗಳ ನಂತರ ಎರಡನೇ ಸಿಂಪಡಣೆಗಾಗಿ Fosetyl AL ಶಿಲೀಂದ್ರನಾಶಕವನ್ನು 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕಾಗುತ್ತದೆ.
- ರೋಗದ ಭಾದೆ ತೀವ್ರವಾಗಿದ್ದರೆ, ಸಿ.ಪಿ.ಸಿ.ಆರ್.ಐ. (CPCRI) ಸಂಸ್ಥೆಯ ಸಲಹೆಯಂತೆ, ಮ್ಯಾಂಡಿಪ್ರಪೋಮೈಡ್ 23.4% SC (Mandipropamid 23.4% SC) ಶಿಲೀಂದ್ರನಾಶಕವನ್ನು 1 ml ಪ್ರತಿ ಲೀಟರ್ ನೀರಿಗೆ ಬೆರೆಸಿ ಗೊನೆಗಳಿಗೆ ಮತ್ತು ಸುಳಿ ಭಾಗಕ್ಕೆ ಸಿಂಪಡಿಸುವುದು ಹೆಚ್ಚು ಪರಿಣಾಮಕಾರಿ.
ಪ್ರಮುಖ ಸೂಚನೆಗಳು :
- ಶಿಲೀಂದ್ರನಾಶಕದ ಕಾರ್ಯಕ್ಷಮತೆ, ನೀವು ಹೇಗೆ ಮತ್ತು ಯಾವ ಸಮಯದಲ್ಲಿ ಸಿಂಪಡಣೆ ಮಾಡುತ್ತೀರಾ ಅನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
- ಮುಂಗಾರು ಶುರುವಿನಲ್ಲಿ ಗಿಡದ ಎಲ್ಲಾ ಭಾಗಗಳಿಗೆ ತಲುಪುವ ಹಾಗೆ ಸಿಂಪಡಣೆ ಮಾಡಬೇಕು.
- ಮಳೆ ಹೆಚ್ಚಿದ್ದಾಗ ಅಂತರ್ವ್ಯಾಪಿ ಶಿಲೀಂದ್ರ ನಾಶಕವನ್ನು ಬಳಸಬೇಕಾಗುತ್ತದೆ.
- ಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿ, ಮುಂಗಾರು ಮಳೆಗೆ ಮುನ್ನ ಮತ್ತು ಮುಂಗಾರು ಮಳೆ ಮುಗಿದ ನಂತರ ಬೋರ್ಡೋ ದ್ರಾವಣವನ್ನು (1%) ಸಿಂಪಡಣೆ ಮಾಡುವುದು ಕಡ್ಡಾಯವಾಗಿದೆ.
- ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡಮೇಲೆ, ಅಂತರ್ವ್ಯಾಪಿ ಶಿಲೀಂಧ್ರನಾಶಕಗಳನ್ನು ಬಳಸುವುದು ಸೂಕ್ತ.
- ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ನಂತರ ನಿರ್ವಹಣೆ ಮಾಡಲು ಮುಂದಾದರೆ ಕೊಳೆರೋಗ ನಿರ್ವಹಣೆ ಕಷ್ಟವಾಗುತ್ತದೆ.
- ಸಮಗ್ರ ನಿರ್ವಹಣೆ – ಸರಿಯಾದ ನಿರ್ವಹಣೆ.