ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಕೃಷಿ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿದೆ. ಹಸಿರು ಕ್ರಾಂತಿಗೂ ಮುನ್ನ, ರಸಗೊಬ್ಬರ ಬಳಸಿ ಎಂದು ಸರ್ಕಾರ ಅರಿವು ಮೂಡಿಸಿದರು ರೈತರು ತನ್ನ ಸಾವಯವ ಕೃಷಿ ಜೊತೆಗಿನ ಒಡನಾಟವನ್ನು ಬಿಟ್ಟು ಕೊಡಲಿಲ್ಲ. ನಂತರ ಉಚಿತವಾಗಿ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ರೈತರ ಮನವೊಲಿಸಲಾಯಿತು. ಆದರೆ ಈಗ ಎಂತಹ ಪರಿಸ್ಥಿತಿ ಎಂದರೆ ರಸಗೊಬ್ಬರವನ್ನು ಕಡಿಮೆ ಬಳಸಿ ಮತ್ತು ಸಾವಯವ ಕೃಷಿಯತ್ತ ಬನ್ನಿ ಎಂದು ವಿಷಯ ತಜ್ಞರು ಹೇಳುತ್ತಿದ್ದಾರೆ. ಇತ್ತೀಚೆಗೆ ರಸಗೊಬ್ಬರಗಳು ಇಲ್ಲದೆ, ಕೃಷಿ ಮಾಡುವುದೇ ಸಾಧ್ಯವಿಲ್ಲ ಅನ್ನುವಷ್ಟು ರಸಗೊಬ್ಬರದ ಮೇಲಿ ನ ಅವಲಂಬನೆ ಹೆಚ್ಚಾಗಿದೆ.
ರಸಗೊಬ್ಬರ ಎಂದರೇನು?
ರಸಗೊಬ್ಬರ ಎಂದರೆ ರಾಸಾಯನಿಕ ಗೊಬ್ಬರ ಎಂದರ್ಥ. ಇವು ರಾಸಾಯನಿಕ ಕ್ರಿಯೆಗಳಿಂದ ಮಾಡಲ್ಪಟ್ಟಿರುತ್ತವೆ, ಇವನ್ನು ತಯಾರಿಸಲು ಅನೇಕ ರಾಸಾಯನಿಕ ವಸ್ತುಗಳನ್ನುವುಪಯಿಗಿಸುತ್ತಾರೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ರಸಗೊಬ್ಬರಗಳು ದೊರೆಯುತ್ತವೆ ಆದರೆ ಯಾವ ಗೊಬ್ಬರ ಯಾವ ಪೋಷಕಾಂಶ ಕೊಡುತ್ತೆ ಮತ್ತು ಎಷ್ಟು ಪ್ರಮಾಣದಲ್ಲಿ ಕೊಡುತ್ತೆ ಅನ್ನೋದು ಅನೇಕ ರೈತರಿಗೆ ಗೊತ್ತಿರದೆ, ಕೆಲವು ರಸಗೊಬ್ಬರಗಳನ್ನು ಅನಿಯಮಿತವಾಗಿ ಬಳಸುತ್ತಿದ್ದಾರೆ ಹಾಗೂ ಇನ್ನೂ ಕೆಲವು ಗೊಬ್ಬರಗಳನ್ನು ಉಪಯೋಗಿಸದೆ ಬಿಟ್ಟಿದ್ದಾರೆ. ಅಧಿಕ ಇಳುವರಿಗಾಗಿ ಸಮಗ್ರ ಪೋಷಕಾಂಶ ನಿರ್ವಹಣೆ ತುಂಬಾ ಮುಖ್ಯವಾಗಿರುತ್ತದೆ. ಬೆಳೆಗೆ ಪ್ರಮುಖವಾಗಿ ಬೇಕಾದ 3 ಮುಖ್ಯ ಪೋಷಕಾಂಶಗಳನ್ನು (ಸಾರಜನಕ, ರಂಜಕ, ಪೊಟ್ಯಾಷಿಯಂ) ಸಹ ಬೆಳೆಗಳಿಗೆ ಸರಿಯಾಗಿ ಒದಗಿಸದೇ, ಕಡಿಮೆ ಇಳುವರಿ ಹೊಂದುತ್ತಿದ್ದಾರೆ ಮತ್ತು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ.

ಬೆಳೆಗಳಿಗೆ ಬೇಕು 17 ಪೋಷಕಾಂಶಗಳು :
ಎಲ್ಲಾ ಸಸ್ಯಗಳಿಗೆ ಬೇಕಾದ ಮೂಲಭೂತ ಅಂಶಗಳಾದ ಇಂಗಾಲ, ಜಲಜನಕ ಮತ್ತು ಆಮ್ಲಜನಕ ಸಸ್ಯಗಳಿಗೆ ನೀರು ಮತ್ತು ಗಾಳಿಯ ಮೂಲಕ ಸಿಗುತ್ತವೆ. ಇನ್ನು14 ಪೋಷಕಾಂಶಗಳು {ಸಾರಜನಕ (N), ರಂಜಕ (P), ಪೊಟ್ಯಾಸಿಯಂ (K), ಕ್ಯಾಲ್ಸಿಯಂ (Ca), ಮೆಗ್ನೀಸಿಯಂ (Mg), ಗಂಧಕ (S), ಕಬ್ಬಿಣ (Fe), ಸತು (Zn), ತಾಮ್ರ (Cu), ಬೋರಾನ್ (B), ಮ್ಯಾಂಗನೀಸ್ (Mn), ಮಾಲಿಬ್ಡಿನಮ್ (Mo) & ಕ್ಲೋರಿನ್ (Cl)} ಸಸ್ಯಗಳಿಗೆ ಮಣ್ಣಿನಿಂದ ಮಾತ್ರ ಸಿಗುತ್ತವೆ. ಹಾಗಾಗಿ ನಾವು ಮಣ್ಣನ್ನು ಪೋಷಣೆ ಮಾಡಿದರೆ, ಮಣ್ಣು ನಮ್ಮ ಬೆಳೆಯನ್ನು ಪೋಷಣೆ ಮಾಡುತ್ತದೆ.
ಸಾರಜನಕ ಪೋಷಕಾಂಶದ ಮಹತ್ವ
ಸಾರಜನಕ ಪೋಷಕಾಂಶ, ಸಸ್ಯದ ಬೆಳವಣಿಗೆಯ ಆಧಾರ ಸ್ತಂಭ ಅಂದರೆ ತಪ್ಪಾಗಲಾರದು. ಇದು ಕೊರತೆಯಾದರೆ ಇಳುವರಿ ಪಡೆಯುವುದು ಅಸಾಧ್ಯ. ಸಸ್ಯಗಳು ತನ್ನ ಬೆಳೆವಣಿಗೆಗೆ ಅನೇಕ ರೀತಿಯ ಪ್ರೋಟೀನ್ ಗಳನ್ನು ಉತ್ಪಾದನೆ ಮಾಡುತ್ತವೆ, ಇವುಗಳ ಉತ್ಪಾದನೆಗೆ ಸಾರಜನಕ ಬೇಕೇ ಬೇಕು. ಸಸ್ಯದ ಎಲೆಗಳು ಹಸಿರಾಗಿದ್ದರೆ ಮಾತ್ರ, ಅವುಗಳು ಆಹಾರವನ್ನು ತಯಾರಿಸುತ್ತವೆ, ಆದರೆ ಎಲೆ ಹಸಿರಾಗಿರಲು ಪತ್ರಹರಿತ್ತು ಎಂಬ ಅಂಶ ಅವಶ್ಯಕ. ಈ ಪತ್ರಹರಿತ್ತು ಉತ್ಪಾದನೆಯಾಗಲು ಸಾರಜನಕ ಖಂಡಿತಾ ಬೇಕು. ಪತ್ರಹರಿತ್ತು ಉತ್ಪಾದನೆ ಆಗದಿದ್ದರೆ ಎಲೆಗಳು ಹಳದಿ ಆಗುತ್ತವೆ, ಆಗ ಆಹಾರ ಉತ್ಪಾದನೆ ಆಗುವುದಿಲ್ಲ. ಸಾರಜನಕ ಸಸ್ಯಗಳಲ್ಲಿ ಎಲೆಗಳು ಮತ್ತು ರೆಂಬೆಗಳ ಬೆಳವಣಿಗೆಗೆ ತುಂಬಾ ಅವಶ್ಯಕ ಒಂದುವೇಳೆ ಸಾರಜನಕ ಕೊರತೆಯಾದರೆ, ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಸಾಮಾನ್ಯ ಇಳುವರಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸಾರಜನಕ ಪೋಷಕಾಂಶವು ಬೆಳೆಯ ಶುರು ಹಂತ ಮತ್ತು ಮಧ್ಯಮ ಹಂತಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬೇಕಾಗುತ್ತದೆ. ಬೆಳೆ ಮಾಗುವ ಹಂತದಲ್ಲಿ ಕಡಿಮೆ ಪ್ರಮಾದಲ್ಲಿ ಬೇಕಾಗುತ್ತದೆ.
ರಂಜಕ ಪೋಷಕಾಂಶದ ಮಹತ್ವ:
ರಂಜಕ ಸಸ್ಯಗಳಿಗೆ ಬೇಕಾಗುವ ಎರಡನೇ ದೊಡ್ಡ ಪೋಷಕಾಂಶವಾಗಿದೆ. ಇದು ಸಸ್ಯದ ಪ್ರತೀ ಜೀವಕೋಶದ ಶಕ್ತಿಯ ಮೂಲ, ಸಸ್ಯಗಳ ಆಹಾರ ಉತ್ಪಾದನೆಗೆ ಮತ್ತು ಉಸಿರಾಟಕ್ಕೆ ರಂಜಕ ಬೇಕೇ ಬೇಕು. ಸಸ್ಯದ ಆರಂಭಿಕ ಹಂತದಲ್ಲಿ ಬೇರಿನ ಬೆಳವಣಿಗೆಗೆ, ಹೂ ಬಿಡುವುದಕ್ಕೆ, ಕಾಯಿ ಕಟ್ಟುವುದಕ್ಕೆ, ಬೆಳೆ ಮಗುವುದಕ್ಕೆ ರಂಜಕ ಪೋಷಕಾಂಶ ಅತ್ಯಗತ್ಯ. ಬೀಜಗಳ ಅಥವಾ ಕಾಳುಗಳ ಅಥವಾ ಕಾಯಿಗಳ ರಚನೆಗೆ ರಂಜಕ ಬೇಕು. ಸಸ್ಯಗಳಲ್ಲಿ ರಂಜಕ ಕೊರತೆಯಾದರೆ ಬೇರುಗಳ ಬೆಳವಣಿಗೆ ಸರಿಯಾಗಿ ಆಗದೆ ಗಿಡ ಸರಿಯಾಗಿ ಬೆಳೆಯುವುದಿಲ್ಲ, ಸರಿಯಾಗಿ ಹೂ ಬಿಡುವುದಿಲ್ಲ, ಕಾಳು ಕಟ್ಟುವುದಿಲ್ಲ ಮತ್ತು ಕಟಾವಿಗೆ ಬರುವುದು ತಡವಾಗುತ್ತದೆ. ಇದು ಸಸ್ಯದ ಬೆಳವಣಿಗೆಯ ಆರಂಭಿಕ ಮತ್ತು ಮಧ್ಯಮ ಹಂತಗಳಲ್ಲಿ ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ.
ಪೊಟ್ಯಾಸಿಯಂ ಪೋಷಕಾಂಶದ ಮಹತ್ವ:
ಅನೇಕ ಕೃಷಿಕರು ಮರೆತಂತಹ ಅಮೂಲ್ಯವಾದ ಪೋಷಕಾಂಶ ಪೊಟ್ಯಾಸಿಯಂ. ಇದು ಮೂರನೇ ಅತೀ ಮುಖ್ಯವಾದ ಪೋಷಕಾಂಶವಾಗಿದೆ. ಇದು ಸಸ್ಯಗಳಲ್ಲಿ ನಡೆಯುವ ಅನೇಕ ಕ್ರಿಯೆಗಳಿಗೆ ಸಹಾಯಕ ಅಂಶವಾಗಿದೆ. ಇದು ಸಸ್ಯಗಳಲ್ಲಿ ನೀರಿನ ಸಮತೋಲನವನ್ನು ಕಾಪಾಡುತ್ತದೆ ಮತ್ತು ಸಸ್ಯಗಳಲ್ಲಿ ತಯಾರಾದ ಆಹಾರ ವಸ್ತುಗಳನ್ನು ಸಸ್ಯದ ಸರಿಯಾದ ಭಾಗಗಳಿಗೆ ತಲುಪಿಸುತ್ತದೆ. ಪೊಟ್ಯಾಸಿಯಂ ಪೋಷಕಾಂಶ, ಸಸ್ಯದ ಬರನಿರೋಧಕ, ಕೀಟನಿರೋಧಕ, ರೋಗನಿರೋಧಕ ಮತ್ತು ಅನೇಕ ಒತ್ತಡಗಳ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಪೊಟಾಸ್ಸಿಯಂ, ಬೆಳೆಯ ಕಾಳುಗಳ ಮತ್ತು ಹಣ್ಣುಗಳ ಗುಟಮಟ್ಟವನ್ನು ಹೆಚ್ಚಿಸುತ್ತದೆ. ಇದು ಕೊರತೆಯಾದರೆ, ಸರಿಯಾಗಿ ಕಾಳು ಅಥವಾ ಹಣ್ಣುಗಳು ಮಾಗದೇ, ಗುಣಮಟ್ಟವನ್ನು ಕಳೆದುಕೊಳ್ಳುತ್ತವೆ ಮತ್ತು ಸರಿಯಾಗಿ ಕಾಳು ಕಟ್ಟುವುದಿಲ್ಲ. ಪೊಟ್ಯಾಸಿಯಂ ಇಲ್ಲದೆ ಸಸ್ಯ ಬಲಹೀನವಾಗುತ್ತದೆ, ಅನೇಕ ರೋಗ-ಕೀಟಗಳ ಭಾದೆಗೆ ಬೇಗನೆ ತುತ್ತಾಗುತ್ತದೆ. ಒಮ್ಮೆ ರೋಗಗಳು ಬೆಳೆಗಳಿಗೆ ಬಂದರೆ, ಅವು ಬೇಗನೆ ಹರಡುತ್ತವೆ. ಹೀಗಾಗಿ ಪೊಟ್ಯಾಸಿಯಂ ಪೋಷಕಾಂಶ ಅನೇಕ ಮಹತ್ವಗಳನ್ನು ಹೊಂದಿದೆ.

ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಂ ಪೋಷಕಾಂಶಗಳನ್ನು ಪೂರೈಸುವ ಗೊಬ್ಬರಗಳು :
ಗೊಬ್ಬರಗಳು ಯಾವ ಯಾವ ಪೋಷಕಾಂಶಗಳನ್ನು ಒದಗಿಸುತ್ತವೆ ಅನ್ನುವ ಆಧಾರದ ಮೇಲೆ, ಗೊಬ್ಬರಗಳನ್ನು ವಿಂಗಡಣೆ ಮಾಡಲಾಗಿದೆ. ಅವುಗಳೆಂದರೆ
1. ನೇರ ರಸಗೊಬ್ಬರ (Straight Fertilizer)
2. ಸಂಕೀರ್ಣ ರಸಗೊಬ್ಬರ (Complex Fertilizer)
3. ಮಿಶ್ರಿತ ರಸಗೊಬ್ಬರ (Mixed Fertilizer)
1. ನೇರ ರಸಗೊಬ್ಬರ : ಇವು ಕೇವಲ ಒಂದು ಪ್ರಾಥಮಿಕ ಮುಖ್ಯ ಸಸ್ಯ ಪೋಷಕಾಂಶವನ್ನು ಮಾತ್ರ ಪೂರೈಸುತ್ತವೆ, ಅಂದರೆ ಈ ಗೊಬ್ಬರಗಳು ಸಾರಜನಕ ಅಥವಾ ರಂಜಕ ಅಥವಾ ಪೊಟ್ಯಾಸಿಯಮ್ ಪೋಷಕಾಂಶಗಳು, ಇವುಗಳಲ್ಲಿ ಯಾವುದಾದರು ಒಂದನ್ನು ಮಾತ್ರ ಪೂರೈಸುತ್ತದೆ. ಉದಾಹರಣೆಗೆ : ಯೂರಿಯಾ, ಅಮೋನಿಯಂ ಸಲ್ಫೇಟ್, ಪೊಟ್ಯಾಸಿಯಮ್ ಕ್ಲೋರೈಡ್ ಮತ್ತು ಪೊಟ್ಯಾಸಿಯಮ್ ಸಲ್ಫೇಟ್ ಗೊಬ್ಬರಗಳು. ಯೂರಿಯ ಗೊಬ್ಬರ ಕೇವಲ ಸಾರಜನಕವನ್ನು ಮಾತ್ರ ಪೂರೈಸುತ್ತದೆ. ಪೊಟ್ಯಾಸಿಯಂ ಕ್ಲೋರೈಡ್ ಕೇವಲ ಪೊಟ್ಯಾಸಿಯಂ ಅನ್ನು ಮಾತ್ರ ಪೂರೈಸುತ್ತದೆ.
2. ಸಂಕೀರ್ಣ ರಸಗೊಬ್ಬರಗಳು: ಈ ಗೊಬ್ಬರಗಳು ಎರಡು ಅಥವಾ ಮೂರು ಪ್ರಾಥಮಿಕ ಮುಖ್ಯ ಸಸ್ಯ ಪೋಷಕಾಂಶಗಳನ್ನು ಪೂರೈಸುತ್ತದೆ. ಈ ಗೊಬ್ಬರಳಲ್ಲಿ ಎರಡು ಅಥವಾ ಮೂರು ಪ್ರಾಥಮಿಕ ಪೋಷಕಾಂಶಗಳು ಈ ಗೊಬ್ಬರಗಳ ರಾಸಾಯನಿಕ ಸಂಯೋಜನೆಯಲ್ಲಿವೆ. ಉದಾಹರಣೆಗೆ : ಡೈಅಮೋನಿಯಮ್ ಫಾಸ್ಫೇಟ್ (DAP), ನೈಟ್ರೋಫಾಸ್ಫೇಟ್ ಮತ್ತು ಅಮೋನಿಯಮ್ ಫಾಸ್ಫೇಟ್. DAP ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕ, ಈ ಎರಡು ಪೋಷಕಾಂಶಗಳು ಇರುತ್ತವೆ.
3. ಮಿಶ್ರ ರಸಗೊಬ್ಬರಗಳು: ಈ ರಸಗೊಬ್ಬರಗಳು ನೇರವಾದ ರಸಗೊಬ್ಬರಗಳ ಭೌತಿಕ ಮಿಶ್ರಣಗಳಾಗಿವೆ. ಈ ರಸಗೊಬ್ಬರಗಳೂ ಕೂಡ, ಎರಡು ಅಥವಾ ಮೂರು ಪ್ರಾಥಮಿಕ ಮುಖ್ಯಸಸ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಈ ಮಿಶ್ರ ರಸಗೊಬ್ಬರಗಳನ್ನು ಯಾಂತ್ರಿಕವಾಗಿ ಅಥವಾ ಭೌತಿಕ ಬಲದಿಂದ ಸಂಪೂರ್ಣವಾಗಿ ಮಿಶ್ರಣ ಮಾಡುವ ಮೂಲಕ ಉತ್ಪಾದಿಸಲಾಗುತ್ತದೆ. ಉದಾಹರೆಣೆಗೆ : 17:17:17, 19:19:19, 15:15:15 ಇತರೆ.
ಸಾರಜನಕ (N- Nitrogen) ಪೂರೈಸುವ ರಸಗೊಬ್ಬರಗಳು :
| ಗೊಬ್ಬರದ ಹೆಸರು | ಪೂರೈಸುವ ಪೋಷಕಾಂಶ | ಗೊಬ್ಬರದಲ್ಲಿರುವ ಪೋಷಕಾಂಶ ಪ್ರಮಾಣ (%/ಶೇಕಡಾ) | 100 ಕೆಜಿ ಗೊಬ್ಬರ ಪೂರೈಸುವ ಪೋಷಕಾಂಶದ ಪ್ರಮಾಣ (ಕೆಜಿ ಗಳಲ್ಲಿ) |
| ಯೂರಿಯಾ (Urea) | ಸಾರಜನಕ | 46% N | 46 Kg ಸಾರಜನಕ |
| CAN : ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ | ಸಾರಜನಕ | 26% N | 26 Kg ಸಾರಜನಕ |
| ಅಮೋನಿಯಂ ಸಲ್ಫೇಟ್ (Ammonium sulphate) | ಸಾರಜನಕ ಗಂಧಕ | 21% N 24% S | 21 Kg ಸಾರಜನಕ & 24 Kg ಗಂಧಕ |
| ಅಮೋನಿಯಂ ಕ್ಲೋರೈಡ್ (Ammonium Chloride) | ಸಾರಜನಕ | 26% N | 26 Kg ಸಾರಜನಕ |
| ಜಲರಹಿತ ಅಮೋನಿಯಾ (Anhydrous ammonia) | ಸಾರಜನಕ | 82% N | 82 Kg ಸಾರಜನಕ |
| ಕ್ಯಾಲ್ಸಿಯಂ ನೈಟ್ರೇಟ್ (Calcium nitrate) | ಸಾರಜನಕ ಕ್ಯಾಲ್ಸಿಯಂ | ಸಾರಜನಕ – 15.5% ಕ್ಯಾಲ್ಸಿಯಂ – 19.5% | 15.5 Kg ಸಾರಜನಕ & 19.5 Kg ಕ್ಯಾಲ್ಸಿಯಂ |
| ಅಮೋನಿಯಂ ಸಲ್ಫೇಟ್ ನೈಟ್ರೇಟ್ (Ammonium sulphate Nitrate) | ಸಾರಜನಕ ಗಂಧಕ | ಸಾರಜನಕ – 26% ಗಂಧಕ – 12% | 26 Kg ಸಾರಜನಕ & 12 Kg ಗಂಧಕ |
ರಂಜಕ (P- Phosphorous) ಪೂರೈಸುವ ರಸಗೊಬ್ಬರಗಳು :
| ಗೊಬ್ಬರದ ಹೆಸರು | ಪೂರೈಸುವ ಪೋಷಕಾಂಶ | ಗೊಬ್ಬರದಲ್ಲಿರುವ ಪೋಷಕಾಂಶ ಪ್ರಮಾಣ (%/ಶೇಕಡಾ) | 100 ಕೆಜಿ ಗೊಬ್ಬರ ಪೂರೈಸುವ ಪೋಷಕಾಂಶದ ಪ್ರಮಾಣ (ಕೆಜಿ ಗಳಲ್ಲಿ) |
| ಸಿಂಗಲ್ ಸೂಪರ್ ಫಾಸ್ಫೇಟ್ (SSP) | ರಂಜಕ | 16% P | 16 kg ರಂಜಕ |
| ಟ್ರಿಪಲ್ ಸೂಪರ್ ಫಾಸ್ಫೇಟ್ (TSP) | ರಂಜಕ | 46% P | 16 Kg ರಂಜಕ |
ಪೊಟ್ಯಾಷಿಯಂ (K – Potassium) ಪೂರೈಸುವ ರಸಗೊಬ್ಬರಗಳು :
| ಗೊಬ್ಬರದ ಹೆಸರು | ಪೂರೈಸುವ ಪೋಷಕಾಂಶ | ಗೊಬ್ಬರದಲ್ಲಿರುವ ಪೋಷಕಾಂಶ ಪ್ರಮಾಣ (%/ಶೇಕಡಾ) | 100 ಕೆಜಿ ಗೊಬ್ಬರ ಪೂರೈಸುವ ಪೋಷಕಾಂಶದ ಪ್ರಮಾಣ (ಕೆಜಿ ಗಳಲ್ಲಿ) |
| ಮ್ಯೂರಿಯೇಟ್ ಆಫ್ ಪೊಟ್ಯಾಶ್ (MOP) | ಪೊಟ್ಯಾಷಿಯಂ | 60% K | 60 Kg ಪೊಟ್ಯಾಷಿಯಂ |
| ಪೊಟ್ಯಾಸಿಯಮ್ ಸಲ್ಫೇಟ್(SOP) | ಪೊಟ್ಯಾಷಿಯಂ | 50% K | 50 Kg ಪೊಟ್ಯಾಷಿಯಂ |
ಸಾರಜನಕ & ರಂಜಕ (N&P) ಪೂರೈಸುವ ರಸಗೊಬ್ಬರಗಳು :
| ಗೊಬ್ಬರದ ಹೆಸರು | ಪೂರೈಸುವ ಪೋಷಕಾಂಶ | ಗೊಬ್ಬರದಲ್ಲಿರುವ ಪೋಷಕಾಂಶ ಪ್ರಮಾಣ (%/ಶೇಕಡಾ) | 100 ಕೆಜಿ ಗೊಬ್ಬರ ಪೂರೈಸುವ ಪೋಷಕಾಂಶದ ಪ್ರಮಾಣ (ಕೆಜಿ ಗಳಲ್ಲಿ) |
| ಡೈ-ಅಮೋನಿಯಮ್ ಫಾಸ್ಫೇಟ್ (DAP) | ಸಾರಜನಕ & ರಂಜಕ | ಸಾರಜನಕ : 18% N ರಂಜಕ : 46% P | 18 Kg ಸಾರಜನಕ & 46 Kg ರಂಜಕ |
| ಮೊನೊಅಮೋನಿಯಂ ಫಾಸ್ಫೇಟ್ (MAP) | ಸಾರಜನಕ & ರಂಜಕ | ಸಾರಜನಕ :12% N ರಂಜಕ : 61% P | 12 Kg ಸಾರಜನಕ & 61 Kg ರಂಜಕ |
| ಅಮೋನಿಯಂ ಫಾಸ್ಫೇಟ್ ಸಲ್ಫೇಟ್ (APS) | ಸಾರಜನಕ, ರಂಜಕ & ಗಂಧಕ | ಸಾರಜನಕ :16% N ರಂಜಕ : 20% P ಗಂಧಕ : 13% S | 16 Kg ಸಾರಜನಕ & 20 Kg ರಂಜಕ & 13 Kg ಗಂಧಕ |
ಸಾರಜನಕ & ಪೊಟ್ಯಾಷಿಯಂ (N&K) ಪೂರೈಸುವ ರಸಗೊಬ್ಬರಗಳು :
| ಗೊಬ್ಬರದ ಹೆಸರು | ಪೂರೈಸುವ ಪೋಷಕಾಂಶ | ಗೊಬ್ಬರದಲ್ಲಿರುವ ಪೋಷಕಾಂಶ ಪ್ರಮಾಣ (%/ಶೇಕಡಾ) | 100 ಕೆಜಿ ಗೊಬ್ಬರ ಪೂರೈಸುವ ಪೋಷಕಾಂಶದ ಪ್ರಮಾಣ (ಕೆಜಿ ಗಳಲ್ಲಿ) |
| ಪೊಟ್ಯಾಸಿಯಮ್ ನೈಟ್ರೇಟ್ (Potassium Nitrate) | ಸಾರಜನಕ & ಪೊಟ್ಯಾಷಿಯಂ | ಸಾರಜನಕ : 13% N ಪೊಟ್ಯಾಷಿಯಂ: 45% K | 13 Kg ಸಾರಜನಕ & 45 Kg ಪೊಟ್ಯಾಷಿಯಂ |
ಸಾರಜನಕ, ರಂಜಕ & ಪೊಟ್ಯಾಷಿಯಂ (NPK) ಪೂರೈಸುವ ರಸಗೊಬ್ಬರಗಳು :
| ಗೊಬ್ಬರದ ಹೆಸರು | ಪೂರೈಸುವ ಪೋಷಕಾಂಶ | ಗೊಬ್ಬರದಲ್ಲಿರುವ ಪೋಷಕಾಂಶ ಪ್ರಮಾಣ (%/ಶೇಕಡಾ) | 100 ಕೆಜಿ ಗೊಬ್ಬರ ಪೂರೈಸುವ ಪೋಷಕಾಂಶದ ಪ್ರಮಾಣ (ಕೆಜಿ ಗಳಲ್ಲಿ) |
| 10:26:26 | ಸಾರಜನಕ, ರಂಜಕ & ಪೊಟ್ಯಾಷಿಯಂ | ಸಾರಜನಕ : 10% N ರಂಜಕ : 26% P ಪೊಟ್ಯಾಷಿಯಂ: 26% K | 10 Kg ಸಾರಜನಕ & 26 Kg ರಂಜಕ & 26 Kg ಪೊಟ್ಯಾಷಿಯಂ |
| 12:32:16 | ಸಾರಜನಕ, ರಂಜಕ & ಪೊಟ್ಯಾಷಿಯಂ | ಸಾರಜನಕ : 12% N ರಂಜಕ : 32% P ಪೊಟ್ಯಾಷಿಯಂ: 16% K | 12 Kg ಸಾರಜನಕ & 32 Kg ರಂಜಕ & 16 Kg ಪೊಟ್ಯಾಷಿಯಂ |
| 14:35:14 | ಸಾರಜನಕ, ರಂಜಕ & ಪೊಟ್ಯಾಷಿಯಂ | ಸಾರಜನಕ : 14% N ರಂಜಕ : 35% P ಪೊಟ್ಯಾಷಿಯಂ: 14% K | 14 Kg ಸಾರಜನಕ & 35 Kg ರಂಜಕ & 14 Kg ಪೊಟ್ಯಾಷಿಯಂ |
| 17:17:17 | ಸಾರಜನಕ, ರಂಜಕ & ಪೊಟ್ಯಾಷಿಯಂ | ಸಾರಜನಕ : 17% N ರಂಜಕ : 17% P ಪೊಟ್ಯಾಷಿಯಂ: 17% K | 17 Kg ಸಾರಜನಕ & 17 Kg ರಂಜಕ & 17 Kg ಪೊಟ್ಯಾಷಿಯಂ |
| 19:19:19 | ಸಾರಜನಕ, ರಂಜಕ & ಪೊಟ್ಯಾಷಿಯಂ | ಸಾರಜನಕ : 19% N ರಂಜಕ : 19% P ಪೊಟ್ಯಾಷಿಯಂ: 19% K | 19 Kg ಸಾರಜನಕ & 19 Kg ರಂಜಕ & 19 Kg ಪೊಟ್ಯಾಷಿಯಂ |
| 15:15:15 | ಸಾರಜನಕ, ರಂಜಕ & ಪೊಟ್ಯಾಷಿಯಂ | ಸಾರಜನಕ : 15% N ರಂಜಕ : 15% P ಪೊಟ್ಯಾಷಿಯಂ: 15% K | 15 Kg ಸಾರಜನಕ & 15 Kg ರಂಜಕ & 15 Kg ಪೊಟ್ಯಾಷಿಯಂ |