ತೆಂಗು ಕರ್ನಾಟಕ ರಾಜ್ಯದ ಒಂದು ಸಾಂಪ್ರದಾಯಿಕ ಬೆಳೆಯಾಗಿದೆ. ತೆಂಗು ಬೆಳೆ ಅನೇಕ ರೈತರ ಜೀವನಾಧಾರವಾಗಿದೆ. ತೆಂಗಿನ ಮರವನ್ನು ಕಲ್ಪವೃಕ್ಷ ಅಂತ ಕರೆಯುತ್ತಾರೆ. ಇದರ ಪ್ರತಿಯೊಂದು ಭಾಗವು ಕೂಡ ಉಪಯೋಗಕಾರಿ. ಇತ್ತೀಚೆಗೆ ತೆಂಗು ಬೆಳೆ ಭಾರೀ ಸುದ್ದಿ ಮಾಡುತ್ತಿದೆ, ಕಾರಣ ಕಾಯಿ ಕೊಬ್ಬರಿಯ ಬೆಲೆ ಏರಿಕೆ. ಇತಿಹಾಸದಲ್ಲಿ ಕೊಬ್ಬರಿ ಕ್ವಿಂಟಾಲ್ ಗೆ ರೂ.30,000 ದಾಟಿರಲಿಲ್ಲ ಆದರೆ ಈ ವರ್ಷ ದಾಖಲೆಯನ್ನು ಮುರಿದಿದೆ. ಇದನ್ನು ಎರಡು ರೀತಿ ನೋಡಬಹುದು.
ಇದು ತೆಂಗು ಬೆಳೆಯ ಸುವರ್ಣ ಯುಗ ಅಲ್ಲ ಇದು ತೆಂಗು ಬೆಲೆಯ ಸುವರ್ಣ ಯುಗ!
ಒಂದು ಕಡೆಯಿಂದ ನೋಡಿದರೆ ಇದು ತೆಂಗು ಬೆಳೆಗಾರರ ಸುವರ್ಣ ಯುಗ ಆದರೆ ಇನ್ನೊಂದು ಕಡೆಯಿಂದ ನೋಡಿದರೆ ಇದು ತೆಂಗಿನ ತೋಟಗಳಲ್ಲಿ ಕೀಟ ರೋಗ ಭಾದೆ ಮತ್ತು ಇಳುವರಿ ನಷ್ಟ. ಇದರ ಬಗ್ಗೆ ಸರಿಯಾಗಿ ತಿಳಿದವರು ಹೇಳುತ್ತಾರೆ. ಇದು ತೆಂಗು ಬೆಳೆಯ ಸುವರ್ಣ ಯುಗ ಅಲ್ಲ ಇದು ತೆಂಗು ಬೆಲೆಯ ಸುವರ್ಣ ಯುಗ. ಹೌದು ಇದು ಖಂಡಿತ ಸತ್ಯ, ಬರೀ ಬೆಲೆ ಏರಿಕೆ ಮಾತ್ರ ನಮಗೆ ಕಾಣಿಸುತ್ತಿದೆ ಆದರೆ ಅದರ ಹಿಂದಿನ ಕಷ್ಟಗಳು, ನಷ್ಟಗಳು, ಸರಣಿ ಆಘಾತಗಳು ಯಾರಿಗೂ ಕಾಣಿಸುತ್ತಿಲ್ಲ. ಇದನ್ನು ಹೊರ ತರಲು, ನಾವು ಒಂದು ಸಣ್ಣ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದ್ದೇವೆ.
ಜಾಗತೀಕವಾಗಿ ತೆಂಗು ಉತ್ಪಾದನೆ ಹೇಗಿದೆ?
ವಿಶ್ವದ ತೆಂಗಿನಕಾಯಿ ಉತ್ಪಾದನೆಯಲ್ಲಿ ಅಗ್ರಸ್ಥಾನವನ್ನು ಪಡೆದ ರಾಷ್ಟ್ರಗಳೆಂದರೆ, ಭಾರತ, ಫಿಲಿಪೈನ್ಸ್ ಮತ್ತು ಇಂಡೋನೇಷಿಯಾ. ಇವು ಸುಮಾರು ಪ್ರಪಂಚದ ಶೇಕಡಾ 73.7 ರಷ್ಟು ತೆಂಗನ್ನು ಉತ್ಪಾದನೆ ಮಾಡುತ್ತವೆ. ಇತ್ತೀಚಿನ ಎರಡು – ಮೂರು ವರ್ಷಗಳಿಂದ ಜಾಗತಿಕವಾಗಿ ಅಂದರೆ ಈ ಮೂರು ದೇಶಗಳಲ್ಲಿ ತೆಂಗಿನ ಉತ್ಪಾದನೆ ಕುಸಿತ ಕಂಡಿದೆ. ಫಿಲಿಪೈನ್ಸ್ ಮತ್ತು ಇಂಡೋನೇಷಿಯಾ ದೇಶಗಳಲ್ಲೂ ಕೂಡ ಹಲವಾರು ಕಾರಣಗಳಿಂದ ತೆಂಗು ಉತ್ಪಾದನೆ ಕಡಿಮೆ ಆಗಿದೆ. ಇದರಿಂದ ಬೆಲೆ ಏರಿಕೆಗೆ ಮತ್ತಷ್ಟು ಬಲ ಸಿಕ್ಕಿ, ಬೆಲೆ ವೇಗವಾಗಿ ಏರಿಕೆಯಾಗುತ್ತಿದೆ. ತೆಂಗಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯ ಬೆಲೆಗಳು ಜಾಗತಿಕವಾಗಿ ಹೆಚ್ಚಾಗಿರುವುದಕ್ಕೆ ಕೂಡ ಇದೇ ಕಾರಣ.
ತೆಂಗು ಉತ್ಪಾದನೆಯಲ್ಲಿ ಬಲಿಷ್ಠವಾಗಿರುವ ಈ ಮೂರು ದೇಶಗಳು ಹಲವಾರು ಕಾರಣಗಳಿಂದ ಇಳುವರಿ ಕುಸಿತ ಕಂಡಿವೆ. ಭಾರತದಲ್ಲಿ ಮಾತ್ರ ಉತ್ಪಾದನೆ ಕಡಿಮೆಯಾಗಿದ್ದರೆ, ಆಗ ಬೇರೆ ದೇಶಗಳಿಂದ ತೆಂಗು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ ಬೆಲೆ 20,000 ದಾಟುವ ಸಾಧ್ಯತೆ ಕಡಿಮೆ ಇತ್ತು. ಆದರೆ ಇಂಡೋನೇಷಿಯಾ ಮತ್ತು ಫಿಲಿಪೈನ್ಸ್ ದೇಶಗಳಲ್ಲೂ ಇದೇ ಸಮಸ್ಯೆ ಆಗಿರುವುದರಿಂದ ಕೊಬ್ಬರಿಯ ಬೆಲೆ ರೂ.30,000 ದಾಟಿದೆ ಎಂದು ಹೇಳಬಹುದು.
ಭಾರತದಲ್ಲಿ ತೆಂಗು ಉತ್ಪಾದನೆ ಇಳಿಕೆ?
ಭಾರತದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯಗಳೆಂದರೆ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ. ಅದರಲ್ಲೂ ಉಂಡೆ ಕೊಬ್ಬರಿಗೆ ಕರ್ನಾಟಕ ರಾಜ್ಯ ಹೆಸರುವಾಸಿಯಾಗಿದೆ. ಮಿಲ್ಲಿಂಗ್ ಕೊಬ್ಬರಿಗೆ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಹೆಸರುವಾಸಿಯಾಗಿವೆ. ಆದರೆ ಈ ರಾಜ್ಯಗಳಲ್ಲಿ ತೆಂಗು ಉತ್ಪಾದನೆ ತುಂಬಾನೇ ಕಡಿಮೆ ಆಗಿದೆ ಮತ್ತು ಪೂರೈಕೆನೂ ಕಡಿಮೆ ಆದ ಕಾರಣ, ಬೇಡಿಕೆ ಹೆಚ್ಚಾಗಿದೆ ಅದಕ್ಕೆ ಬೆಲೆ ಏರಿಕೆ ಆಗುತ್ತಾ ಇದೆ. ತೆಂಗು ಇಳುವರಿ ಮತ್ತು ಪೂರೈಕೆ ಯಾಕೆ ಕಡಿಮೆಯಾಗಲು ಇರುವ ಕಾರಣಗಳನ್ನು ಈ ಲೇಖನದಲ್ಲಿ ತಿಳಿಸುತ್ತೇವೆ.
ಕೊಬ್ಬರಿ ಬೆಲೆ v/s ಹಣದುಬ್ಬರ?
ಕೊಬ್ಬರಿ ಬೆಲೆ ವರ್ಷದಿಂದ ವರ್ಷಕ್ಕೆ ಎಷ್ಟು ಜಾಸ್ತಿ ಆಗ್ತಿತ್ತು ಅಂತ ಮೊದಲು ತಿಳಿಯೋಣ. ಉದಾಹರಣೆಗೆ ನಾವು 2012ರಿಂದ 2023ರವರೆಗೆ ಬೆಲೆ ಯಾವ ರೀತಿ ಇತ್ತು ಅಂತ ತಿಳಿಯೋಣ. 2012ರಲ್ಲಿ ಕ್ವಿಂಟಾಲ್ ಗೆ Rs.5280 ಇದ್ದ ಉಂಡೆ ಕೊಬ್ಬರಿ ಬೆಲೆ 2023ರಲ್ಲಿ Rs.9622 ಆಗಿದೆ ಅಂದ್ರೆ 11 ವರ್ಷಕ್ಕೆ ಕೇವಲ Rs.4342 ರೂಗಳು ಮಾತ್ರ ಹೆಚ್ಚಾಗಿದೆ. ಆದರೆ ಈ ಹೆಚ್ಚಳ ಕೂಡ ನಿರಂತರವಾಗಿಲ್ಲ, ಮಧ್ಯದ ವರ್ಷಗಳಲ್ಲಿ ತುಂಬಾ ಏರಿಳಿತ ಕಂಡಿದೆ. ಲೆಕ್ಕಹಾಕಿ ನೋಡಿದರೆ ಪ್ರತಿ ವರ್ಷ 5.61% ಹೆಚ್ಚಾಗಿದೆ ಅದು ಸರಾಸರಿಯಲ್ಲಿ. ಭಾರತದಲ್ಲಿ ಹಣದುಬ್ಬರ 6-7% ಇದೆ, ಅಂದ್ರೆ ತೆಂಗು ಬೆಳೆಗಾರರು ಲಾಭಕ್ಕಿಂತ ಬರೀ ಹಣದುಬ್ಬರವನ್ನು ಸರಿದೂಗಿಸುವುದರಲ್ಲೆ ಇದ್ದಾರೆ. ಇನ್ನು ಅವರಿಗೆ ಲಾಭದ ಕನಸು, ಬರೀ ಕನಸಾಗಿಯೇ ಉಳಿದಿದೆ. ನಮ್ಮ ದೇಶದಲ್ಲಿ ವೈದ್ಯಕೀಯ ಕ್ಷೇತ್ರದ ಹಣ ದುಬ್ಬರ 12-14% ಮತ್ತು ಶೈಕ್ಷಣಿಕ ಹಣ ದುಬ್ಬರ 10% ರಿಂದ 12% ಇದೆ. ಸರಳವಾಗಿ ತಿಳಿಸುವುದಾದರೆ, ಈ ವರ್ಷ ಒಂದು ವೈದ್ಯಕೀಯ ಚಿಕಿತ್ಸೆಯ ಖರ್ಚು 1 ಲಕ್ಷ ಆಗಿದೆ ಅಂದ್ರೆ, ಮುಂದಿನ ವರ್ಷ ಇದೇ ಚಿಕಿತ್ಸೆಯ ಕರ್ಚಿಗೆ 1 ಲಕ್ಷದ 14 ಸಾವಿರ ರೂಗಳು ಆಗುತ್ತದೆ. ಹಾಗೆಯೇ ಶಾಲೆಗಳಿಗೆ ನೀವು ಈ ವರ್ಷ 1 ಲಕ್ಷ ಶುಲ್ಕ ಕಟ್ಟಿದರೆ, ಮುಂದಿನ ವರ್ಷ ಅದೇ ಶುಲ್ಕ 1 ಲಕ್ಷ 10 ಸಾವಿರ ಆಗುತ್ತದೆ.
ಕೊಬ್ಬರಿ ಬೆಲೆ ಏರಿಕೆ ಹೇಗೆ?
ಈ ಪರಿಸ್ಥಿತಿ ನೋಡಿದರೆ, ತೆಂಗು ಬೆಳೆಯುವ ರೈತನಿಗೆ ಹಣದುಬ್ಬರ ಬೆಲೆಯನ್ನು ಸರಿದೂಗಿಸಲು ಆಗುತ್ತಿಲ್ಲ. ಎಲ್ಲಾ ಬೆಲೆಗಳು ರಾಕೆಟ್ ತರ ಓಡುತ್ತಾ ಇವೆ, ಆದರೆ ರೈತ ಬೆಳೆದಂತಹ ಬೆಳೆ ಮಾತ್ರ ಇನ್ನೂ ಕಾಲಲ್ಲೇ ನಡೆಯುತ್ತಿದೆ. ತೆಂಗು ಬೆಳೆಯನ್ನೇ ನಂಬಿಕೊಂಡು ತುಂಬಾ ಕುಟುಂಬಗಳಿವೆ, ಇವತ್ತು ಅವರಿಗೆ ಒಳ್ಳೆ ಬೆಲೆ ಸಿಕ್ತಾ ಇದೆ ಆದರೆ ಅವರ ಹತ್ರ ಈಗ ಕಾಯಿ ಕೊಬ್ಬರಿಗಳು ಜಾಸ್ತಿ ಇಲ್ಲ. ಮೂರು ವರ್ಷದ ಹಿಂದೆ 10,000 ಕಾಯಿಯನ್ನು ಕಟಾವುಮಾಡುತಿದ್ದ ರೈತ ಇವತ್ತು 4000-5000 ಕಾಯಿಗಳನ್ನು ಕಟಾವುಮಾಡುತಿದ್ದಾನೆ. ಅಂದರೆ 50-60% ಇಳುವರಿ ನಷ್ಟದಲ್ಲಿದ್ದಾನೆ. ಕೊಬ್ಬರಿ ಬೆಲೆ ತರಕಾರಿ ಬೆಲೆಯ ಹಾಗೆ ಅಲ್ಲ, ಈ ತಿಂಗಳು ಇಳುವರಿ ಇಲ್ಲ ಅಂದ್ರೆ ಮುಂದಿನ ತಿಂಗಳು ಬೆಲೆ ಏರಿಕೆಯಾಗುವುದಕ್ಕೆ. ತೆಂಗು ಬೆಳೆಯಲ್ಲಿ, ಈ ವರ್ಷ ಇಳುವರಿ ಕಡಿಮೆಯಾದರೆ ಇನ್ನೂ ಎರಡು ವರ್ಷ ಬೇಕು ಬೆಲೆ ಏರಿಕೆಯಾಗುವುದಕ್ಕೆ. ಅದು ಏಕೆ ಎಂದರೆ, ತೆಂಗಿನ ಮರ ಹೂ ಬಿಟ್ಟ ನಂತರ ಅದು ಬಲಿತ ಕಾಯಿ ಆಗೋದಕ್ಕೆ 10-12 ತಿಂಗಳುಗಳು ಬೇಕಾಗುತ್ತವೆ & ಅದನ್ನು ಕಟಾವು ಮಾಡಿ ಕೊಬ್ಬರಿಗೆ ಹಾಕಿದಾಗ, ಅದು ಕೊಬ್ಬರಿ ಆಗುವುದಕ್ಕೆ 10-12 ತಿಂಗಳುಗಳು ಬೇಕಾಗುತ್ತವೆ ಅಂದರೆ ಬರೋಬ್ಬರಿ ಎರಡು ವರ್ಷಗಳು ಬೇಕಾಗುತ್ತವೆ.
ಕಾಯಿ- ಕೊಬ್ಬರಿ ಬೆಲೆ ಏರಿಕೆಗೆ ಕಾರಣಗಳು!
ಹೀಗಾಗಿ 2021 ರಲ್ಲಿ ಕ್ವಿಂಟಾಲ್ ಗೆ Rs.15,870 ಇದ್ದ ಉಂಡೆ ಕೊಬ್ಬರಿ ಬೆಲೆ, 2023ರಲ್ಲಿ Rs.9622 ರೂಗಳು ಆಗಿತ್ತು. ಇದಕ್ಕೆ ಕಾರಣ ಕೋವಿಡ್ (ಕೊರೊನ ರೋಗ) 2021 ರಿಂದ 2022 ರಲ್ಲಿ ಕೋವಿಡ್ ಲಾಕ್ ಡೌನ್ ಇದ್ದಿದ್ದರಿಂದ ಎಳನೀರು ಕಾಯಿಗಳ ಸಾಗಾಣಿಕೆ ಕಡಿಮೆಯಾಗಿ, ಎಲ್ಲಾ ಕೊಬ್ಬರಿ ರೂಪದಲ್ಲಿ 2023ರಲ್ಲಿ ಒಟ್ಟಿಗೆ ಮಾರುಕಟ್ಟೆಗೆ ಬರುತ್ತದೆ, ಆಗ ಪೂರೈಕೆ ಹೆಚ್ಚಾಗಿ ಬೆಲೆ ದಿಡೀರನೆ ಕುಸಿಯುತ್ತದೆ. ಆಗ ಕೊಬ್ಬರಿಗಿಂತ ಎಳನೀರಿನ ಬೆಲೆ ಹೆಚ್ಚಾಗುತ್ತದೆ. ಅನೇಕ ರೈತರು ಎಳನೀರಿಗೆ ಕಾಯಿಯನ್ನು ಕೀಳುತ್ತಾರೆ ಆಗಂತ ಇದು ಒಂದೇ ಕಾರಣ ಅಲ್ಲ ಬೆಲೆ ಏರಿಕೆಗೆ, ಆದರೆ ಹಲವಾರು ಕಾರಣಗಳಲ್ಲಿ ಇದು ಒಂದು ಕಾರಣ ಅಂತ ಹೇಳಬಹುದು.
2022 ರಲ್ಲಿ ಭಾರಿ ಮಳೆ ಬಂದು ತೋಟಗಳಲ್ಲಿ ನೀರು ನಿಂತು, 2023ರಲ್ಲಿ ಮಳೆ ಕಡಿಮೆಯಾಗಿ ಬರ ಪರಿಸ್ಥಿತಿ ಬಂತು, 2024ರಲ್ಲಿ ವಾತಾವರಣದ ತಾಪಮಾನ ಹೆಚ್ಚಾಯಿತು. 2023ರಲ್ಲಿ ಆಗಾಗಲೇ ಬಂದಿದ್ದ ಸುರುಳಿ ಬಿಳಿ ನೊಣದ ತೀವ್ರತೆ ಇನ್ನೂ ಹೆಚ್ಚಾಯಿತು. ಇದರಿಂದ ಗರಿಗಳೆಲ್ಲ ಕಪ್ಪು ಬಿಳುಪಾಗಿ ಸಸ್ಯದ ದ್ಯುತಿ ಸಂಶ್ಲೇಷಣೆ ಕ್ರಿಯೆ ಅಂದರೆ ಆಹಾರ ತಯಾರಿಸಲು ಸಸ್ಯದಲ್ಲಿ ಹಸಿರು ಭಾಗ ಕಡಿಮೆ ಆಯಿತು. ಈ ಕೀಟಕ್ಕೆ ತುಂಬಾ ಜನ ರೈತರು ತಲೆ ಕೆಡಿಸಿಕೊಳ್ಳದೆ ಹಾಗೆ ಸುಮ್ಮನಾದರು. ಹಾಗೆಯೇ ತಮಿಳುನಾಡು, ಕೇರಳ & ಕರ್ನಾಟಕದಲ್ಲಿ ಕಪ್ಪು ತಲೆ ಹುಳುವಿನ ಬಾಧೆ ವೀಪರೀತವಾಯಿತು. ಈ ಹುಳುಗಳು ಗರಿಗಳ ಕೆಳಭಾಗವನ್ನು ಕೆರೆದು ತಿಂದು ಗರಿಗಳು ಒಣಗುವಂತೆ ಮಾಡಿಬಿಟ್ಟವು. ಇದನ್ನು ಕೂಡ ರೈತರು ಗಂಭೀರವಾಗಿ ಪರಿಗಣಿಸಲಿಲ್ಲ. ಕೆಲವೊಂದಿಷ್ಟು ರೈತರು ಗೋನಿಯೋಜಸ್ (Goniozus) ಎಂಬ ಪರತಂತ್ರ ಹುಳುಗಳನ್ನು ಕೃಷಿ ಇಲಾಖೆಯಿಂದ ತಂದು ತೋಟಗಳಿಗೆ ಬಿಟ್ಟರು ಆದರೆ ಇನ್ನು ಕೆಲವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಆ ವರ್ಷ ಕೊಬ್ಬರಿಯ ಬೆಲೆ ತುಂಬಾ ಕಡಿಮೆ ಇತ್ತು. ಈಗ ಕೊಬ್ಬರಿಯ ಬೆಲೆ ಹೆಚ್ಚು ಇರೋದಕ್ಕೆ ಈ ರೋಗಗಳು & ಕೀಟಗಳು, ಟಿ.ವಿ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿವೆ.
2022ರಲ್ಲಿ ಕರ್ನಾಟಕದಲ್ಲಿ 1,474 mm ಮಳೆಯಾಗುತ್ತದೆ, ಇದು ಸಾಮಾನ್ಯ ಮಳೆ ಗಿಂತ 28% ಹೆಚ್ಚಾಗಿರುತ್ತದೆ. 2023ರಲ್ಲಿ 872 mm ಮಳೆಯಾಗುತ್ತದೆ. ಇದು ಸಾಮಾನ್ಯ ಮಳೆಗಿಂತ 24% ಕಡಿಮೆ ಇರುತ್ತೆ ಅಂದರೆ ಬರಗಾಲ ಶುರುವಾಗುತ್ತೆ. 2024ರಲ್ಲಿ 1175 mm ಮಳೆ ಆಗುತ್ತದೆ, ಇದು ಕೂಡ ಸಾಮಾನ್ಯ ಮಳೆ ಗಿಂತ ಸ್ವಲ್ಪ ಜಾಸ್ತಿ ಇರುತ್ತೆ. ಈ ರೀತಿ ಸರಣಿ ಮಳೆ ಮತ್ತು ಉಷ್ಣಾಂಶದ ವ್ಯತ್ಯಯದಿಂದ ತೆಂಗಿನ ಮರದಲ್ಲಿ ಅಣಬೆ ರೋಗ, ಎಲೆ ಚುಕ್ಕಿ ರೋಗ & ಕಾಂಡದ ರಸ ಸೋರುವ ರೋಗಗಳು ಹೆಚ್ಚಾಗುತ್ತಾ ಹೋಗುತ್ತವೆ. ಆದರೆ ಇವುಗಳ ಹತೋಟಿಗೆ ನಮ್ಮ ಅನೇಕ ರೈತರು ಪ್ರಯತ್ನ ಮಾಡಲಿಲ್ಲ ಕಾರಣ ಅವರಿಗೆ ಸರಿಯಾಗಿ ಮಾಹಿತಿ ಇರುವುದಿಲ್ಲ ಅಥವಾ ಬೆಲೆ ಕಡಿಮೆ ಇರುವುದರಿಂದ ಅವರಿಗೆ ಆಸಕ್ತಿ ಇರದಿರುವುದು.
ಈ ರೋಗಗಳು ಇವತ್ತು ಶುರು ಆದ ರೋಗಗಳು ಅಲ್ಲ 2023ರಿಂದಾನು ಬಾಧಿಸುತಿದ್ದಾವೆ. ಹಾಗೆ ಸಣ್ಣದಾಗಿ ಬೇರಿನಿಂದ ಕಾಂಡದಿಂದ ಶುರುವಾಗಿದ್ದ ರೋಗ, ಈಗ ಸುಳಿಯವರೆಗೂ ಕೂಡ ಬಂದು ತಲುಪಿದೆ, ಗಿಡಗಳ ಗರಿಗಳು ಜೊತ್ತು ಬಿದ್ದು ಮರಗಳು ಸಾಯುತ್ತಾ ಇದ್ದಾವೆ. ಇದು ಕರ್ನಾಟಕ ರಾಜ್ಯದ ಸಮಸ್ಯೆ ಮಾತ್ರ ಅಲ್ಲ, ತಮಿಳುನಾಡು & ಕೇರಳ ರಾಜ್ಯಗಳಲ್ಲೂ ಕೂಡ ಇದೇ ಪರಿಸ್ಥಿತಿ ಬಂದಿದೆ. ಹೀಗಾಗಿ ಎಲ್ಲಾ ರಾಜ್ಯಗಳಲ್ಲೂ ಇಳುವರಿ ಕಡಿಮೆ ಆಗಿದೆ, ಇದರಿಂದ ಪೂರೈಕೆ ಕಡಿಮೆಯಾಗಿದೆ, ಬೆಲೆ ಏರಿಕೆ ಹೆಚ್ಚಾಗಿದೆ.
ತೆಂಗು ಬೆಳೆಗಾರರಿಗೆ ಸಲಹೆ?
ಇನ್ನಾದರೂ ತೆಂಗು ಬೆಳೆಗಾರರು ಎಚ್ಚೆತ್ತುಕೊಂಡು ತೋಟಗಳಿಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಹೆಚ್ಚು ಗಮನಹರಿಸಬೇಕು. ಮಣ್ಣು ಪರೀಕ್ಷೆ ಮಾಡಿಸಿ ಸಾರಜನಕ ರಂಜಕ ಪೊಟ್ಯಾಶಿಯಂ ಬೋರಾನ್ ಕ್ಯಾಲ್ಸಿಯಂ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಕೊಡಬೇಕು & ಬೇವಿನ ಹಿಂಡಿ ಕೊಟ್ಟಿಗೆ ಗೊಬ್ಬರಗಳನ್ನು ಮರಗಳಿಗೆ ಹಾಕಬೇಕು. ರೋಗ ಮತ್ತು ಕೀಟಗಳ ನಿರ್ವಹಣೆಯನ್ನು ಶುರು ಮಾಡಬೇಕು ಮತ್ತು ಸರಿಯಾಗಿ ಮಾಡಬೇಕು, ಮೊದಲು ಗಿಡಗಳನ್ನು ಉಳಿಸಿಕೊಳ್ಳಬೇಕು. ಬೆಲೆ ಏರಿಕೆ ಆಗೋದಕ್ಕೆ ಹಲವಾರು ಕಾರಣಗಳಿದ್ದಾವೆ, ಇವುಗಳನ್ನು ನಿಭಾಯಿಸಿಕೊಂಡು ರೈತರು ಉತ್ತಮ ಇಳುವರಿ ಮತ್ತು ಲಾಭ ಪಡೆಯುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ
Good