ತೊಗರಿ ಬೆಳೆ ಕರ್ನಾಟಕದ ಪ್ರಮುಖ ಬೆಳೆಯಾಗಿದ್ದು, ತೊಗರಿ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಕಲಬುರ್ಗಿ, ವಿಜಯಪುರ, ಬೀದರ್, ಯಾದಗಿರಿ,ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳು ತೊಗರಿ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿವೆ. ತೊಗರಿ ಬೆಳೆಗೆ ಅನೇಕ ರೋಗಗಳು ಮತ್ತು ಕೀಟಗಳು ಭಾದಿಸುತ್ತವೆ. ಪ್ರಮುಖ ರೋಗಗಳಾದ ಸೊರಗು ರೋಗ (Wilt), ನಂಜಾಣು ಬಂಜೆ ರೋಗ (Sterility Mosaic Disease), ಒಣ ಬೇರು ಕೊಳೆ ರೋಗ (Dry Root Rot), ಫೈಟೊಫ್ಥೊರಾ ಕಾಂಡ ಕೊಳೆತ (Phytophthora Stem Blight)) ಮತ್ತು ಎಲೆಚುಕ್ಕೆ (Leaf Spots) ರೋಗಗಳು ತೊಗರಿ ಬೆಳೆಯನ್ನು ಹೆಚ್ಚು ಭಾದಿಸುತ್ತಿವೆ. ಈ ರೋಗಗಳ ನಿರ್ವಹಣೆಯಲ್ಲಿ ರೈತರು ವಿಫಲರಾಗಿ, ಅನೇಕ ರೈತರು ಬೆಳೆನಷ್ಟ ಅನುಭವಿಸುತ್ತಿದ್ದಾರೆ ಹಾಗೂ ಸಾಲದ ಭಾದೆಯಲ್ಲಿ ಸಿಲುಕುತ್ತಿದ್ದಾರೆ. ರೋಗಗಳ ಬಗ್ಗೆ ಅಪೂರ್ಣ ಮಾಹಿತಿ ಮತ್ತು ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸದೆ ಇರುವುದು, ಪ್ರತೀ ವರ್ಷದ ಈ ರೋಗಗಳು ಉಲ್ಬಣವಾಗುದಕ್ಕೆ ಕಾರಣವಾಗಿವೆ. ತೊಗರಿ ರೋಗಗಳಲ್ಲೇ, ಅತೀ ಹೆಚ್ಚು ಭಾದಿಸುವ ಸೊರಗು ರೋಗದ ಬಗ್ಗೆ ಸಂಪೂರ್ಣವಾಗಿ ತಿಳಿಸುವುದು ಮತ್ತು ಇದರ ಸಮಗ್ರ ನಿರ್ವಹಣೆ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಯಾವುದೇ ರೋಗವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು, ಮೊದಲು ಆ ರೋಗದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಈ ಕಾರಣದಿಂದ ಲೇಖನದಲ್ಲಿ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ, ದಯವಿಟ್ಟು ಸಂಪೂರ್ಣವಾಗಿ ಓದಿ.
ತೊಗರಿ ಸೊರಗು ರೋಗ : ರೋಗಕಾರಕ?
ಸೊರಗು ರೋಗವನ್ನು ಸ್ಥಳೀಯ ಭಾಷೆಯಲ್ಲಿ ಸಿಡಿ ರೋಗ ಎಂದು ಕರೆಯುತ್ತಾರೆ ಮತ್ತು ಆಂಗ್ಲ ಭಾಷೆಯಲ್ಲಿ ವಿಲ್ಟ್ (Wilt) ಎಂದು ಕರೆಯುತ್ತಾರೆ. ಸೊರಗು ರೋಗ ಒಂದು ಶಿಲೀಂದ್ರ ರೋಗವಾಗಿರುತ್ತದೆ. ಈ ರೋಗ ಫ್ಯುಸಾರಿಯಮ್ ಉದಂ (Fusarium udum) ಎಂಬ ಫಂಗಸ್ ಅಂದರೆ ಶಿಲೀಂದ್ರದಿಂದ ಬರುತ್ತದೆ. ಈ ರೋಗವನ್ನು ಸಕಾಲದಲ್ಲಿ ನಿರ್ವಹಣೆ ಮಾಡದಿದ್ದರೆ ನಂತರದ ವರ್ಷಗಳಲ್ಲಿ 100% ಇಳುವರಿ ನಷ್ಟವನ್ನು ಉಂಟು ಮಾಡುತ್ತದೆ.
ಸೊರಗು ರೋಗದ ಲಕ್ಷಣಗಳು:
ಸೊರಗು ರೋಗ ಬಿತ್ತನೆ ಮಾಡಿದ 45 ರಿಂದ 60 ದಿನಗಳ ನಂತರ ಮೊದಲು ಕಾಣಿಸಿಕೊಳ್ಳುತ್ತದೆ. ರೋಗ ಬಂದಂತಹ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಗಿಡ ಒಣಗುತ್ತದೆ ಆದರೆ ಎಲೆಗಳು ಗಿಡದಲ್ಲೇ ಉಳಿಯುತ್ತವೆ. ಈ ರೋಗ ಹೂ ಬಿಡುವ ಸಂದರ್ಭದಲ್ಲಿ ಹೆಚ್ಚು ಕಂಡು ಬರುತ್ತದೆ ಮತ್ತು ಹೊಲದಲ್ಲಿ ಅಲ್ಲಲ್ಲಿ ಗಿಡಗಳು ಒಣಗಲು ಪ್ರಾರಂಭಿಸುತ್ತವೆ. ಬಾಧಿತ ಗಿಡದ ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ಕಾಂಡದ ಮಧ್ಯ ಭಾಗ ಕಪ್ಪಾಗಿರುತ್ತದೆ. ರೋಗಾಣುವಿಗೆ ಅನುಕೂಲಕರ ವಾತಾವರಣವಿದ್ದಲ್ಲಿ, ಕೆಲವೊಮ್ಮೆ ಬೇರುಗಳ ಮೇಲೆ ತಿಳಿ ಗುಲಾಬಿ ಬಣ್ಣದ ರೋಗಕಾರಕ ಶಿಲೀಂಧ್ರದ ಬೆಳವಣಿಗೆಯನ್ನು ಸಹ ನೋಡಬಹುದು.
ಗಿಡದ ಬೇರಿನ ಒಂದು ಭಾಗಕ್ಕೆ ಮಾತ್ರ ಸೋಂಕು ತಗುಲಿದಾಗ, ಗಿಡದ ಅರ್ಧಭಾಗ ಮೊದಲು ಹಳದಿಯಾಗಿ ಒಣಗುತ್ತದೆ. ರೋಗ ಬಂದಂತಹ ಗಿಡದ ಕಾಂಡದ ಕೆಳಭಾಗದಲ್ಲಿ ನೆರಳೆ ಬಣ್ಣದ ಉದ್ದನೆಯ ಮಚ್ಚೆಯು ಕಂಡು ಬರುತ್ತದೆ. ಶುರು ಹಂತದಲ್ಲಿ ಈ ರೋಗವು ಹೊಲದಲ್ಲಿ ಅಲ್ಲಲ್ಲಿ ತೇಪೆಗಳಂತೆ ಕಾಣಿಸಿಕೊಳ್ಳುತ್ತದೆ.

ಸೊರಗು ರೋಗಕ್ಕೆ ಅನುಕೂಲಕರ ವಾತಾವರಣ:
ಸೊರಗು ರೋಗವು 17 ರಿಂದ 25 ಡಿಗ್ರಿ ಸೆಲ್ಸಿಯಸ್ ಮಣ್ಣಿನ ತಾಪಮಾನದಲ್ಲಿ ಹೆಚ್ಚಾಗಿ ಹರಡುತ್ತದೆ. ಬೆಳೆ ಪರಿವರ್ತನೆ ಮಾಡದೆ ಪ್ರತೀ ವರ್ಷ ತೊಗರಿ ಬೆಳೆಯನ್ನೇ ಬೆಳೆದಲ್ಲಿ ಈ ರೋಗ ತೀವ್ರವಾಗಿ ಕಾಣಿಸಿಕೊಳ್ಳುತ್ತದೆ.
ರೋಗದ ಹರಡುವಿಕೆ:
ಈ ರೋಗ ಪ್ರಮುಖವಾಗಿ ಮಣ್ಣು ಮತ್ತು ಬೀಜದಿಂದ ಹರಡುತ್ತದೆ. ಈ ರೋಗಾಣು ಒಂದು ಬೆಳೆಯ ಕಾಲದಲ್ಲಿ ಸುಮಾರು ಮೂರು ಮೀಟರ್ ನಷ್ಟು ಮಣ್ಣಿನಲ್ಲಿ ಹರಡುತ್ತದೆ. ಫ್ಯುಸಾರಿಯಮ್ ರೋಗಾಣು ತನ್ನ ಸಂತಾನವನ್ನು ಮೂರು ರೀತಿಯ ಬೀಜಕಣಗಳಾಗಿ ಮುಂದುವರೆಸುತ್ತದೆ. ಮೈಕ್ರೋ ಕೊನಿಡಿಯ (Micro-conidia) ಮತ್ತು ಮ್ಯಾಕ್ರೋ ಕೊನಿಡಿಯ (Macro-conidia) ಎಂಬ ಬೀಜಕಣಗಳು ಸೊರಗು ರೋಗವನ್ನು ಮಣ್ಣಿನಲ್ಲಿ ಹರಡುತ್ತವೆ. ಕ್ಲಮೈಡೋಸ್ಪೋರ್ (Chlamydospore) ಎಂಬ ಬೀಜಕಣ ಮಣ್ಣಿನಲ್ಲಿ ಸುಮಾರು 8 ರಿಂದ 10 ವರ್ಷಗಳ ಕಾಲ ಜೀವಿಸುತ್ತದೆ. ತೊಗರಿ ಬೆಳೆ ಹಾಕಿದಾಗ ಇವು ರೋಗವನ್ನು ಉಂಟು ಮಾಡುತ್ತವೆ.
ಸೊರಗು ರೋಗ ಬಂದಂತಹ ತೊಗರಿ ಕಡ್ಡಿಗಳಲ್ಲಿ, ಈ ರೋಗಾಣು ಹೊಲದಲ್ಲೇ ಉಳಿಯುತ್ತದೆ. ಮೊದಲಿಗೆ ಈ ರೋಗಾಣು ಮಣ್ಣಿನಲ್ಲಿರುವ ಬೀಜ ಕಣಗಳಿಂದ ಮತ್ತು ಸೋಂಕಿತ ತೊಗರಿ ಬೀಜಗಳಿಂದ ಹರಡುತ್ತದೆ. ಈ ರೋಗಾಣು ಹೊಲದಲ್ಲಿ ನೀರು ಮತ್ತು ಕೃಷಿ ಯಂತ್ರೋಪಕರಣಗಳ (ನೇಗಿಲು, ಟ್ರ್ಯಾಕ್ಟರ್) ಮೂಲಕ ಹರಡುತ್ತದೆ.

ಸಮಗ್ರ ರೋಗ ನಿರ್ವಹಣಾ ಕ್ರಮಗಳು:
ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಸೊರಗು ರೋಗವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬಹುದು.
- ಬೆಳೆ ಕಟಾವಾದ ನಂತರ ರೋಗಕ್ಕೆ ತುತ್ತಾದಂತಹ ಕೂಳೆ ಬೇರುಗಳನ್ನು ಕಿತ್ತು ಸುಟ್ಟು ಹಾಕಬೇಕು. ಇದರಿಂದ ಹೊಲದಲ್ಲಿ ರೋಗ ಹರಡುವುದು ಕಡಿಮೆಯಾಗುತ್ತದೆ.
- ಬೇಸಿಗೆಯಲ್ಲಿ ಆಳವಾದ ಮಾಗಿ ಉಳಿಮೆ ಮಾಡಬೇಕು. ಇದರಿಂದ ಸುಪ್ತಾವಸ್ಥೆಯಲ್ಲಿ ಇರುವ ಶಿಲೀಂದ್ರ ರೋಗಾಣುವಿನ ಬೀಜಕಣಗಳು ಬಿಸಿಲಿನ ಶಾಖಕ್ಕೆ ನಾಶವಾಗುತ್ತವೆ.
- ಪ್ರತೀ ವರ್ಷ ತೊಗರಿ ಬೆಳೆಯನ್ನೇ ಬೆಳೆಯದೆ, ಏಕದಳ ಧಾನ್ಯ ಬೆಳೆಗಳೊಂದಿಗೆ (ಉದಾಹರಣೆ: ಜೋಳ, ಸಜ್ಜೆ, ರಾಗಿ ಇತ್ಯಾದಿ) ಬೆಳೆ ಪರಿವರ್ತನೆ ಮಾಡುವುದು ಉತ್ತಮ.
- ಬಿತ್ತನೆಗೆ ಮೊದಲು, 4 ಕೆ.ಜಿ. ಟ್ರೈಕೋಡರ್ಮ ವಿರಿಡೆ ಅಥವಾ ಟ್ರೈಕೋಡರ್ಮ ಹಾರ್ಜಿಯಾನಂ ಎಂಬ ಜೈವಿಕ ರೋಗನಾಶಕವನ್ನು 200 ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರದೊಂದಿಗೆ ಒಂದು ವಾರಗಳ ಕಾಲ ಅಭಿವೃದ್ಧಿಪಡಿಸಿ, ಒಂದು ಎಕರೆ ಭೂಮಿಗೆ ಸಂಜೆಯ ಸಮಯದಲ್ಲಿ ಹಾಕಬೇಕು. ಇದರಿಂದ ಮಣ್ಣಿನಲ್ಲಿರುವ ರೋಗಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ.
- ತೊಗರಿ ಬೆಳೆಯ ಜೊತೆ ಜೋಳವನ್ನು ಮಿಶ್ರ ಬೆಳೆ ಅಥವಾ ಅಂತರ ಬೆಳೆಯಾಗಿ ಬೆಳೆಯಬೇಕು ಇದರಿಂದ ರೋಗದ ತೀವ್ರತೆ ಕಡಿಮೆಯಾಗುತ್ತದೆ.

- ಹೊಲದಲ್ಲಿ ಸೊರಗು ರೋಗದ ಭಾದೆ ತೀವ್ರವಾಗಿದ್ದಲ್ಲಿ, ಸೊರಗು ರೋಗ ನಿರೋಧಕ ತಳಿಗಳನ್ನು ಬೆಳೆಯುವುದು ಸೂಕ್ತ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, BRG5 ಮತ್ತು BRG3 ಎಂಬ ಸೊರಗು ರೋಗ ನಿರೋಧಕ ತಳಿಗಳನ್ನು ಬಿಡುಗಡೆ ಮಾಡಿದೆ. ಕೃಷಿ ಸಂಶೋಧನ ಕೇಂದ್ರ ಗುಲ್ಬರ್ಗ TS3R ಮತ್ತು GRG881 ಎಂಬ ಸೊರಗು ರೋಗ ನಿರೋಧಕ ತಳಿಗಳನ್ನು ಬಿಡುಗಡೆ ಮಾಡಿದೆ. ಆಂಧ್ರಪ್ರದೇಶದ ಕೃಷಿ ವಿಶ್ವವಿದ್ಯಾನಿಲಯ ತಿರುಪತಿ ಕಂದಿ 59 ಮತ್ತು ಕೃಷ್ಣ ಎಂಬ ತಳಿಗಳನ್ನು ಬಿಡುಗಡೆ ಮಾಡಿದೆ.
- ಸೊರಗು ರೋಗ ಬೀಜಗಳಿಂದ ಹರಡುವುದರಿಂದ ಬೀಜೋಪಚಾರ ತುಂಬಾ ಮುಖ್ಯ. ಬಿತ್ತನೆಗೆ ಮುನ್ನ ಟ್ರೈಕೋಡರ್ಮ ಜೈವಿಕ ರೋಗನಾಶಕದೊಂದಿಗೆ @ 10 ಗ್ರಾಂ ಪ್ರತಿ Kg ತೊಗರಿ ಬೀಜದೊಂದಿಗೆ ಅಥವಾ ಕಾರ್ಬೆಂಡಜಿಮ್ 50% WP ಶಿಲೀಂಧ್ರನಾಶಕದೊಂದಿಗೆ @ 2 ಗ್ರಾಂ ಪ್ರತಿ Kg ಬೀಜದೊಂದಿಗೆ ಅಥವಾ ಕಾರ್ಬಾಕ್ಸಿನ್+ಥೈರಾಮ್ 37.5% DS ಶಿಲೀಂಧ್ರನಾಶಕದೊಂದಿಗೆ @ 4 ಗ್ರಾಂ ಪ್ರತಿ Kg ಬೀಜದೊಂದಿಗೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಇದರಿಂದ ಬೀಜದಲ್ಲಿರುವ ರೋಗಾಣು ನಾಶವಾಗುತ್ತದೆ.
- ಹೊಲದಲ್ಲಿ ಸೊರಗು ರೋಗ ಕಾಣಿಸಿಕೊಂಡ ತಕ್ಷಣ, ರೋಗದ ಗಿಡಗಳನ್ನು ಕಿತ್ತು ಸುಟ್ಟು ಹಾಕಬೇಕು. ನಂತರ ರೋಗದ ಗಿಡಕ್ಕೆ ಮತ್ತು ಅದರ ಸುತ್ತಮುತ್ತಲಿನ ಗಿಡಗಳಿಗೆ ಕಾರ್ಬೆಂಡಜಿಮ್ 50% WP @ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ, ಗಿಡದ ಬುಡದ ಸುತ್ತ ಸುರಿಯಬೇಕು.
- ಹೊಲದಲ್ಲಿ ಸರಿಯಾಗಿ ಬಸಿಗಾಲುವೆಗಳನ್ನು ನಿರ್ಮಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೊಲದಲ್ಲಿ ನೀರು ನಿಂತರೆ, ಈ ರೋಗ ಬೇಗನೆ ಹರಡುತ್ತದೆ.
ಸೊರಗು ರೋಗವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಬೇಕೆಂದರೆ, ಮೇಲೆ ತಿಳಿಸಿದ ಎಲ್ಲಾ ಕ್ರಮಗಳನ್ನು ಪಾಲಿಸಬೇಕು. ಕೇವಲ ಒಂದೆರಡು ಕ್ರಮಗಳನ್ನು ಅನುಸರಿಸಿದರೆ ಈ ರೋಗ ಹತೋಟಿಯಾಗುವುದಿಲ್ಲ. ವರ್ಷದಿಂದ ವರ್ಷಕ್ಕೆ ಈ ರೋಗ ಮಣ್ಣಿನಲ್ಲಿ ಹರಡುತ್ತಾ ಹೋಗುತ್ತದೆ. ಹೀಗಾಗಿ ಸಕಾಲದಲ್ಲಿ ತಪ್ಪದೆ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.