Insect Pests of Mango and their Integrated Management
ಭಾರತದಲ್ಲಿ ಮಾವು ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಇದನ್ನು ‘ಹಣ್ಣುಗಳ ರಾಜ’ ಎಂದು ಕರೆಯುತ್ತಾರೆ. ಮಾವು ಉಷ್ಣವಲಯದ ಹಣ್ಣುಗಳಲ್ಲೇ ಪ್ರಮುಖವಾದುದು. ಭಾರತದಲ್ಲಿ, ಉತ್ತರ ಪ್ರದೇಶ ರಾಜ್ಯ ಅತೀ ಮಾವು ಬೆಳೆಯುವ ರಾಜ್ಯವಾಗಿದೆ. ಆಂದ್ರ ಪ್ರದೇಶ, ಬಿಹಾರ ಮತ್ತು ಕರ್ನಾಟಕ ರಾಜ್ಯಗಳು, ದೇಶದ ಮಾವು ಉತ್ಪಾದನೆಯಲ್ಲಿ ಮುಖ್ಯ ಪಾತ್ರವನ್ನುವಹಿಸಿವೆ. ನಮ್ಮ ಕರ್ನಾಟಕ ರಾಜ್ಯದಲ್ಲಿ, ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಹೆಚ್ಚಿನ ಮಾವು ಉತ್ಪಾದಕ ಜಿಲ್ಲೆಗಳಾಗಿವೆ. ಮಾವಿನ ಬೆಳೆಯಲ್ಲಿ ಕೀಟ ಮತ್ತು ರೋಗಗಳ ಹಾವಳಿಯಿಂದ ಹಣ್ಣಿನ ಗುಣಮಟ್ಟವು ಕ್ಷೀಣಿಸುವುದಲ್ಲದೆ ಇಳುವರಿಯಲ್ಲಿಯೂ ಸಾಕಷ್ಟು ನಷ್ಟವುಂಟಾಗುತ್ತದೆ. ಮಾವನ್ನು ಬಾಧಿಸುವ ಪ್ರಮುಖ ಪೀಡೆಗಳೆಂದೆರೆ ಹಣ್ಣು ನೊಣ, ಜಿಗಿ ಹುಳು, ಕಾಂಡ ಕೊರಕ, ಬೂದಿ ರೋಗ, ಚಿಬ್ಬು ರೋಗ/ಹೂ ಅಂಗಮಾರಿ ರೋಗ ಮತ್ತು ದುಂಡಾಣು ಎಲೆಚುಕ್ಕೆ ರೋಗ ಮುಂತಾದವು. ಮಾವಿನ ಬೆಳೆಯನ್ನು ಬಾಧಿಸುವ ಪ್ರಮುಖ ಕೀಟಗಳು ಮತ್ತು ಅವುಗಳ ಸಮಗ್ರ ನಿರ್ವಹಣೆಯ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

1. ಮಾವಿನ ಜಿಗಿ ಹುಳು (Mango Hoppers) :
ದಕ್ಷಿಣ ಭಾರತದಲ್ಲಿ ಈ ಜಿಗಿ ಹುಳು ಕೀಟವು ನವೆಂಬರ್ ನಿಂದ ಫೆಬ್ರವರಿ ತಿಂಗಳವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡು, ಚಿಗುರು ಮತ್ತು ಹೂವು ಬಿಡುವ ಕಾಲಕ್ಕೆ ಸಂತಾನೋತ್ಪತ್ತಿ ಮಾಡಿ ಅಧಿಕ ನಷ್ಟವನ್ನುಂಟುಮಾಡುತ್ತವೆ.
ಹಾನಿಯ ಲಕ್ಷಣಗಳು : ಪ್ರೌಢ ಮತ್ತು ಅಪ್ಸರೆ ಜಿಗಿಹುಳುಗಳು ಎಲೆಗಳಿಂದ ಹಾಗೂ ಹೂ ಗೊಂಚಲಿನಿಂದ ರಸ ಹೀರುತ್ತವೆ. ಇದರಿಂದ ಎಲೆ ಮತ್ತು ಕಾಯಿಗಳ ಮೇಲೆ ‘ಹನಿಡ್ಯೂ’ ಅಥವಾ ‘ಜೋನಿ’ ಅಥವಾ ಸಿಹಿ ಜೇನಿನಂತಹ ಅಂಟಿನ ಪದಾರ್ಥವನ್ನು ಬಿಡುಗಡೆ ಮಾಡುತ್ತವೆ.
ಇದರಿಂದ ಎಲೆಗಳ ಮೇಲೆ ‘ಕಪ್ಪು ಬೂಷ್ಟ್’ ಶೀಲೀಂಧ್ರ (Sooty Mold) ಬೆಳೆಯುತ್ತದೆ. ಈ ಶೀಲೀಂಧ್ರವು ಎಲೆ ಮತ್ತು ಹೂವು ಗೊಂಚಲುಗಳ ಮೇಲೆ ದಟ್ಟವಾಗಿ ಬೆಳವಣಿಗೆ ಹೊಂದುವುದರಿಂದ ದ್ಯುತಿಸಂಶ್ಲೇಷಣಾ ಕ್ರಿಯೆ ಕುಂಠಿತಗೊಳ್ಳುತ್ತದೆ. ಆಗ ಹೂಗಳ ಸಂಖ್ಯೆ ಕಡಿಮೆಯಾಗಿ ಸರಿಯಾಗಿ ಬೆಳವಣಿಗೆಯಾಗುವ ಮೊದಲೇ ಉದುರಿ ಹೋಗುತ್ತವೆ.

ನಿರ್ವಹಣಾ ಕ್ರಮಗಳು:
- ಗಿಡಗಳನ್ನು ಶಿಫಾರಸ್ಸಿನ ಮೇರೆಗೆ ಸರಿಯಾದ ಅಂತರದಲ್ಲಿ ನೆಡಬೇಕು. ತೋಟಗಳಲ್ಲಿ ನೀರುನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
- ನೆಲದಿಂದ 2-3 ಅಡಿ ಎತ್ತರದಲ್ಲಿರುವ ಗಾಳಿ, ಬೆಳಕು ಸರಾಗವಾಗಿ ಹರಿದಾಡಲು ಅನುಪಯುಕ್ತ ರೆಂಬೆಗಳನ್ನು ಕತ್ತರಿಸುವುದು.
- ಬಾಧೆ ಕಡಿಮೆಯಿದ್ದಾಗ ಶೇ. 5 ಬೇವಿನ ಕಷಾಯ ಸಿಂಪಡಿಸಬೇಕು ಅಥವಾ ಪ್ರತಿ ಲೀಟರ್ ನೀರಿಗೆ 2-3 ಮಿ.ಲೀ. ಬೇವಿನಾಧಾರಿತ ಕೀಟನಾಶಕವನ್ನು ಬೆರಸಿ ಸಿಂಪಡಿಸಬೇಕು.
- ಬಾಧೆ ಜಾಸ್ತಿ ಇದ್ದಾಗ ಈ ಕೆಳಗಿನ ಯಾವುದಾದರೊಂದು ಕೀಟನಾಶಕವನ್ನು ಸಿಂಪಡಿಸುವುದು. ಬುಪ್ರೊಫೆಜಿನ್ 25% SC (Buprofezin 25%SC) @ 2ml/L (ಕಾಯುವ ಅವಧಿ: 20 ದಿನಗಳು) ಅಥವಾ ಡೆಲ್ಟಾಮೆಥ್ರಿನ್ 02.80 % EC (Deltamethrin 02.80 % EC) @ 0.5 ml/L (ಕಾ.ಅ: 01 ದಿನ) ಅಥವಾ ಫ್ಲೋನಿಕಾಮಿಡ್ 50 % WG (Flonicamid 50% WG) @ 0.4 ml/L (ಕಾ.ಅ: 15 ದಿನಗಳು) ಅಥವಾ ಇಮಿಡಾಕ್ಲೋಪ್ರಿಡ್ 17.80 % SL (Imidacloprid 17.80% SL) @ 0.4 ml/L (ಕಾ.ಅ:45 ದಿನಗಳು) ಅಥವಾ ಆಕ್ಸಿಡೆಮೆಟಾನ್–ಮೀಥೈಲ್ 25 % EC (Oxydemeton-methyl 25% SC) @ 1 ml/L ಅಥವಾ ಪೈಮೆಟ್ರೋಜಿನ್ 50% WG (Pymetrozine 50% WG) @ 0.3 ml/L (ಕಾ.ಅ: 36 ದಿನಗಳು) ಅಥವಾ ಟೋಲ್ಫೆನ್ಪಿರಾಡ್ 15 % EC (Tolfenpyrad 15% EC) @ 2 ml/L (ಕಾ.ಅ: 07 ದಿನಗಳು) ಅಥವಾ ಟ್ರೈಫ್ಲುಮೆಜೋಪೈರಿಮ್ 10% SC (Triflumezopyrim 10% SC) @ 0.24 ಮಿ.ಲಿ/ಲೀ (ಕಾ.ಅ: 30 ದಿನಗಳು).
- ಕಪ್ಪು ಬೂಷ್ಟ್ (ಶಿಲೀಂಧ್ರ) ಹರಡುವುದನ್ನು ನಿಯಂತ್ರಿಸಲು ಪ್ರತಿ ಲೀಟರ್ ನೀರಿಗೆ 10 ಗ್ರಾಂ ಸ್ಟಾರ್ಚ್ (Starch) ಬೆರಸಿ ಸಿಂಪಡಿಸಬೇಕು.
2. ಹಣ್ಣಿನ ನೊಣ (Fruit Fly):
ಈ ಕೀಟವು ಬಹುಭಕ್ಷಕವಾಗಿದ್ದು, ಹೆಣ್ಣು ನೊಣಗಳು ಮೊಟ್ಟೆಗಳನ್ನು ದೊರೆಗಾಯಿಗಳಲ್ಲಿ ಇಡುತ್ತವೆ. ಈ ಕೀಟವು ಮನೆಯ ನೊಣಕ್ಕಿಂತ ಸಣ್ಣದಿರುತ್ತದೆ. ಇವುಗಳ ಪ್ರಭಾವ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ತೀವ್ರವಾಗಿದ್ದು, ಬಾಧೆಗೊಳಗಾದ ಹಣ್ಣುಗಳು ನೆಲಕ್ಕೆ ಬೀಳುತ್ತವೆ.
ಹಾನಿಯ ಲಕ್ಷಣಗಳು : ನೊಣದ ಮರಿಗಳು ಅರೆಮಾಗಿದ ಹಣ್ಣುಗಳನ್ನು ಕೊರೆಯುವುದರಿಂದ ಹಣ್ಣುಗಳಲ್ಲಿ ಕೊಳೆತ ಚುಕ್ಕೆಗಳು ಉಂಟಾಗುತ್ತದೆ. ಹಣ್ಣುಗಳಿಂದ ರಸವು ಸೋರುತ್ತಿದ್ದು, ಹಣ್ಣುಗಳಲ್ಲಿ ಕಂದುಬಣ್ಣದ ಕೊಳೆತ ಮಚ್ಚೆಗಳು ಉಂಟಾಗುತ್ತವೆ. ಹಣ್ಣುಗಳಿಂದ ಒಂದು ರೀತಿಯ ಕೊಳೆತ ವಾಸನೆ ಬರುತ್ತದೆ. ಹಣ್ಣುಗಳು ಕೊಳೆತು ಕ್ರಮೇಣ ಮರದಿಂದ ಬಿದ್ದು ಹೋಗುತ್ತವೆ.

ನಿರ್ವಹಣಾ ಕ್ರಮಗಳು:
- ಈ ಕೀಟದ ಹತೋಟಿಯನ್ನು ಸಾಮೂಹಿಕವಾಗಿ ಎಲ್ಲ ರೈತರು ಕೈಗೊಳ್ಳಬೇಕು.
- ಮರದ ಬುಡದ ಸುತ್ತ ಮಣ್ಣನ್ನು ಅಗೆದು ಕೋಶಗಳನ್ನು ನಾಶಪಡಿಸುವುದು.
- ನೆಲದಲ್ಲಿ ಬಿದ್ದ ಕೊಳೆತ ಹಣ್ಣುಗಳನ್ನು ಆರಿಸಿ, ಗುಂಡಿಯನ್ನು ತೆಗೆದು ಅದರಲ್ಲಿ ಹಾಕಿ, ಮಣ್ಣಿನಿಂದ ಮುಚ್ಚಬೇಕು.
- ಬೇಸಿಗೆಯಲ್ಲಿ ಆಳವಾದ ಉಳುಮೆಯನ್ನು ಮಾಡಿ ಮತ್ತು ಕೆಳಗೆ ಬಿದ್ದ ಕೀಟ ಹಾಗೂ ಬಾಧಿತ ಹಣ್ಣುಗಳನ್ನು ಆರಿಸಿ ನಾಶಪಡಿಸಬಹುದು.
- ಮಿಥೈಲ್ ಯುಜಿನಾಲ್ (Methyl eugenol) ಬಳಸಿ ಮೋಹಕ ಬಲೆಗಳನ್ನು ಎಕರೆಗೆ 10 ರಂತೆ ಅಳವಡಿಸಿ ಹಣ್ಣಿನ ನೊಣಗಳನ್ನು ಅಳವಡಿಸಿ, ಹಣ್ಣಿನ ನೊಣಗಳನ್ನು ಸೆರೆಹಿಡಿದು ಸಾಯಿಸಬೇಕು. 1 ಲೀಟರ್ ನೀರಿಗೆ 1 ಮಿ.ಲೀ. ಮಿಥೈಲ್ ಯುಜಿನಾಲ್ (Methyl eugenol) ಮತ್ತು 1 ಮಿ.ಲೀ. ಮೆಲಾಥಿಯಾನ್ 50 ಇ.ಸಿ. (Malathion 50% EC) ಸೇರಿಸಿ ಪ್ರತಿ ಬಲೆಗೆ 100 ಮಿ.ಲೀ. ದ್ರಾವಣ ಹಾಕುವುದು. (ಸೂಚನೆ: ಕಾಯಿಗಳು ನಿಂಬೆ ಗಾತ್ರಕ್ಕೆ ಬಂದಾಗಲೇ ಮೋಹಕ ಬಳೆಗಳನ್ನು ಹಾಕತಕ್ಕದ್ದು, ತಡವಾಗಿ ಬಳಸಿದರೆ ಇದರ ಪರಿಣಾಮ ಕಡಿಮೆಯಾಗುತ್ತದೆ).
- ಪ್ರತಿ ಲೀಟರ್ ನೀರಿಗೆ 1.7 ಮಿ.ಲೀ. ಡೈಮಿಥೋಯೇಟ್ 30% EC (Dimethoate 30% EC) ಅನ್ನು ದೊರೆಗಾಯಿ ಹಂತದಲ್ಲಿ ಕಾಯಿಗಳ ಮತ್ತು ಎಲೆಗಳ ಮೇಲೆ ಸಿಂಪಡಿಸಬೇಕು.
3. ಕಾಂಡ ಕೊರಕ (Stem Borer):
ಹಾನಿಯ ಲಕ್ಷಣಗಳು: ಮರಿಹುಳುಗಳು ಕಾಂಡ ಮತ್ತು ರೆಂಬೆಗಳನ್ನು ಕೊರೆದು ಸುರಂಗಗಳನ್ನು ಮಾಡುವುದರಿಂದ ಕೊರೆದ ಭಾಗದಿಂದ ಮರದ ಪುಡಿ ಮತ್ತು ನಾರು ಉದುರುತ್ತಿರುತ್ತದೆ. ಕಾಂಡದ ಒಳಭಾಗದಲ್ಲಿ ಅಡ್ಡಾದಿಡ್ಡಿ ಸುರಂಗಗಳನ್ನು ರೆಂಬೆಗಳು ಒಣಗಿ ಮರಗಳು ಕ್ರಮೇಣ ಬೆಳವಣಿಗೆ ಹೊಂದದೆ ಕೆಲವು ವರ್ಷಗಳ ನಂತರ ಸಂಪೂರ್ಣವಾಗಿ ಒಣಗಿಹೋಗುತ್ತವೆ.

ನಿರ್ವಹಣಾ ಕ್ರಮಗಳು:
- ಸುರಂಗಗಳಲ್ಲಿ/ರಂಧ್ರಗಳಲ್ಲಿ ಗಟ್ಟಿಯಾದ ತಂತಿಯನ್ನು ಚುಚ್ಚಿ ಮರಿಗಳನ್ನು ಹೊರತೆಗೆದು ಸಾಯಿಸುವುದು ಉತ್ತಮ. ಈ ರಂಧ್ರದೊಳಗೆ ಸೀಮೆಎಣ್ಣೆ ಅಥವಾ ಫಾರ್ಮಲಿನ್ ಅನ್ನು ಸುರಿದು ನಂತರ ರಂಧ್ರವನ್ನು ಹತ್ತಿಯಿಂದ ಮುಚ್ಚಬೇಕು.
- ಫೆನಾಲ್ (Phenyl) ಮತ್ತು ನೀರನ್ನು ಸಮ ಪ್ರಮಾಣದ ಮಿಶ್ರಣ ಮಾಡಿ ಸಿರಂಜ್ನಿಂದ ರಂಧ್ರದೊಳಗೆ ಸೇರಿಸಿ ರಂಧ್ರವನ್ನು ಮಣ್ಣಿನಿಂದ ಅಥವಾ ಹೊಸದಾಗಿ ಬೇಯಿಸಿದ ಸುಣ್ಣದಿಂದ ತುಂಬಿಸಬೇಕು.
- ಪುಡಿ ಉದುರುತ್ತಿರುವ ರಂಧ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ರಂಧ್ರಗಳನ್ನು ಹಸಿ ಮಣ್ಣಿನಿಂದ ಮುಚ್ಚಿ, ಪುಡಿ ಉದುರುತ್ತಿರುವ ರಂಧ್ರದ ಮೂಲಕ ಸಿರಿಂಜ್ನಿಂದ ಪ್ರತಿ ಲೀಟರ್ ನೀರಿಗೆ 5 ಮಿ.ಲೀ. ಕ್ವಿನಾಲ್ಫಾಸ್ 50 EC (Quinalphos 50% EC) ಬೆರಸಿ ಹಾಕಬೇಕು.
4. ಶಲ್ಕಕೀಟ (Scale):
ಹಾನಿಯ ಲಕ್ಷಣಗಳು: ಅಪ್ಸರೆ ಮತ್ತು ಪ್ರೌಢ ಶಲ್ಕ ಕೀಟಗಳು ಎಲೆಗಳಿಂದ ರಸ ಹೀರುವುದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಒಣಗಿಹೋಗುತ್ತವೆ. ಬೆಳವಣಿಗೆ ಕುಂಠಿತವಾಗುತ್ತದೆ. ಈ ಕೀಟಗಳು ಜೇನಿನಂತಹ ದ್ರವವನ್ನು (Honeydew) ಸ್ರವಿಸುವುದರಿಂದ ಎಲೆಗಳಲ್ಲಿ ಕಪ್ಪು ಬೂಷ್ಟು ಬೆಳೆಯುತ್ತದೆ. ಉಷ್ಣತೆ ಜಾಸ್ತಿಯಿದ್ದಾಗ ಈ ಕೀಟಗಳ ಬಾಧೆ ಜಾಸ್ತಿ.

ನಿರ್ವಹಣಾ ಕ್ರಮಗಳು:
- ಬಾಧಿತ ಗಿಡಗಳ ಭಾಗಗಳನ್ನು ಕೀಟಗಳ ಸಹಿತ ಆಯ್ದು ಸುಡಬೇಕು.
- ಬಾಧೆ ಕಡಿಮೆಯಿದ್ದಾಗ ಶೇ. 5 ರ ಬೇವಿನ ಕಷಾಯ ಸಿಂಪಡಿಸಬೇಕು ಅಥವಾ ಪ್ರತಿ ಲೀಟರ್ ನೀರಿಗೆ 2-3 ಮಿ.ಲೀ. ಬೇವಿನಾಧಾರಿತ ಕೀಟನಾಶಕವನ್ನು ಸಿಂಪಡಿಸಬೇಕು.
5. ಎಲೆ ಗಂಟು ಮಾಡುವ ಹುಳು (Gall Midge):
ಹಾನಿಯ ಲಕ್ಷಣಗಳು: ಈ ಕೀಟಗಳು ಎಲೆಗಳ ಅಡಿಯಲ್ಲಿ ಮೊಟ್ಟೆಗಳನ್ನು ಇಟ್ಟಿರುತ್ತವೆ. ಮೊಟ್ಟೆಗಳಿಂದ ಹೊರಬರುವ ಮರಿಗಳು ಎಲೆಗಳ ಅಂಗಾಂಶಗಳನ್ನು ಕೊರೆದು ಎಲೆಗಳ ಎರಡು ಪದರಗಳ ನಡುವೆ ಕೊರೆಯುವುದರಿಂದ ಎಲೆಗಳ ಮೇಲ್ಮನಲ್ಲಿ ಗಂಟುಗಳು ಉಂಟಾಗುತ್ತವೆ. ಎಲೆಗಳು ಆಕಾರವನ್ನು ಕಳೆದುಕೊಂಡು ಕ್ರಮೇಣ ಉದುರಿ ಹೋಗುತ್ತವೆ. ಇದರಿಂದ ಎಲೆಗಳು ಬಾಡಿ ಉದುರಿಹೋಗುತ್ತವೆ.

ನಿರ್ವಹಣಾ ಕ್ರಮಗಳು:
- ಗಂಟುಗಳನ್ನು ಕೀಟಗಳ ಸಹಿತ ಕಿತ್ತು ನಾಶಪಡಿಸಬೇಕು.
- ಮಣ್ಣನ್ನು ಸಡಿಲಗೊಳಿಸಿ ಕೀಟಗಳ ಹಂತಗಳನ್ನು ಸಾಯಿಸಬೇಕು.
- ಬಾಧೆ ಜಾಸ್ತಿಯಿದ್ದಾಗ, 0.3 ಮಿ. ಲೀ. ಇಮಿಡಾಕ್ಲೋಪ್ರಿಡ್ 17.8 SL (Imidacloprid 17.8% SL) ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು.
ರೈತರಿಗೆ ವಿಶೇಷ ಸೂಚನೆ : ಕೇವಲ ಕೀಟನಾಶಕ ಸಿಂಪಡಿಸುವ ಮೂಲಕ ಕೀಟಗಳ ನಿರ್ವಹಣೆ ಸಾದ್ಯವಿಲ್ಲ. ಸಮಗ್ರ ನಿರ್ವಹಣಾ ಪದ್ದತಿಗಳನ್ನು ಅನುಸರಿಸಿದರೆ ಮಾತ್ರ ಸಂಪೂರ್ಣ ನಿರ್ವಹಣೆ ಸಾದ್ಯ. ಸಮಗ್ರ ನಿರ್ವಹಣೆ – ಸರಿಯಾದ ನಿರ್ವಹಣೆ.