ಭತ್ತದಲ್ಲಿ ಪ್ರಮುಖ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ (Integrated Management of Major Insect Pests and Diseases of Paddy)
ಕರ್ನಾಟಕದಲ್ಲಿ ಭತ್ತದ ಕೃಷಿಯು ಪ್ರಮುಖವಾಗಿದ್ದು, ರಾಯಚೂರು, ಕೊಪ್ಪಳ, ಬಳ್ಳಾರಿ, ಮಂಡ್ಯ, ಮ್ಯೆಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ತೇವಾಂಶವು ಬೆಳೆಗಳಿಗೆ ಕೀಟ ಮತ್ತು ರೋಗಗಳ ಬಾಧೆಯನ್ನು ಹೆಚ್ಚಿಸುತ್ತದೆ. ಹಳದಿ ಕಾಂಡ ಕೊರಕ, ಕಂದು ಜಿಗಿ ಹುಳು, ಎಲೆ ಸುತ್ತುವ ಹುಳು ಹಾಗೂ ಕಣೆ ನೊಣ, ಈ ಭಾಗದಲ್ಲಿ ಪ್ರಮುಖ ಕೀಟಗಳಾಗಿದ್ದು, ಇವು ಸಸ್ಯದ ಬೆಳವಣಿಗೆಯ ಹಂತದಿಂದ ತೆನೆ ಕಟ್ಟುವ ಹಂತದವರೆಗೆ ಹಾನಿ ಉಂಟುಮಾಡುತ್ತವೆ. ಅದೇ ರೀತಿ, ಬೆಂಕಿ ರೋಗ, ಎಲೆಗವಚ ಅಂಗಮಾರಿ ರೋಗ, ಹುಸಿ ಕಾಡಿಗೆ ರೋಗ, ಬ್ಯಾಕ್ಟೀರಿಯಾ ಅಂಗಮಾರಿ ರೋಗಗಳು ಪ್ರಮುಖ ರೋಗಗಳಾಗಿವೆ. ಈ ಕೀಟ ಮತ್ತು ರೋಗಗಳ ಬಾಧೆಯಿಂದಾಗಿ ಭತ್ತದ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಸೂಕ್ತ ಸಮಯದಲ್ಲಿ ರೋಗ ಮತ್ತು ಕೀಟ ನಿರ್ವಹಣೆ ಮಾಡದಿದ್ದರೆ, ಇಳುವರಿಯಲ್ಲಿ 30-70% ವರೆಗೆ ನಷ್ಟ ಉಂಟಾಗಬಹುದು. ಇದರಿಂದಾಗಿ ರೈತರಿಗೆ ಆರ್ಥಿಕ ನಷ್ಟವಾಗುತ್ತದೆ. ಆದ್ದರಿಂದ, ಭತ್ತದ ಬೆಳೆಯಲ್ಲಿ ಇಳುವರಿ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಈ ಕೀಟ ಮತ್ತು ರೋಗಗಳ ನಿರ್ವಹಣೆ ಅತ್ಯಗತ್ಯ.

I. ಭತ್ತದ ಪ್ರಮುಖ ರೋಗಗಳು :
1.ಬೆಂಕಿ ರೋಗ (Blast disease)
ರೋಗಾಣು: ಪೈರಿಕ್ಯುಲೇರಿಯಾ ಒರಿಜೆ (Pyricularia oryzae)
ರೋಗಾಣು ವಿಧ: ಶಿಲೀಂಧ್ರ (Fungus)
ಹಾನಿಯ ಲಕ್ಷಣ: ಎಲೆ, ಗಿಣ್ಣು ಮತ್ತು ಕತ್ತು (ತೆನೆಯ ಕೆಳಗಿನ ಭಾಗ) ಮೇಲೆ ಈ ರೋಗವು ಕಾಣಿಸಿಕೊಳ್ಳುತ್ತದೆ. ಎಲೆಗಳ ಮೇಲೆ ಕಣ್ಣಿನಾಕಾರದ ಬೂದುಬಣ್ಣದ ಕಲೆಗಳು ಕಾಣಿಸಿಕೊಳ್ಳುತ್ತವೆ. ಗಿಣ್ಣುಗಳ ಮೇಲೆ ಕಪ್ಪು ಮಚ್ಚೆಗಳು ಮೂಡಿ ನಂತರ ಒಡೆದುಹೋಗುತ್ತವೆ. ಕತ್ತಿನ ಮೇಲೆ ಕಪ್ಪು ಬಣ್ಣದ ಕಲೆಗಳು ಮೂಡಿ ತೆನೆ ಮುರಿದು ಜೋತುಬೀಳುತ್ತದೆ.

2. ಹುಸಿ ಕಾಡಿಗೆ ರೋಗ (False smut)
ರೋಗಾಣು: ಉಸ್ಟಿಲಜಿನೋಡಿಯಾ ವೈರೆನ್ಸ್ (Ustilaginoidea virens)
ರೋಗಾಣು ವಿಧ: ಶಿಲೀಂಧ್ರ (Fungus)
ಹಾನಿಯ ಲಕ್ಷಣ: ಹೂ ಬಿಡುವ ಮತ್ತು ಕಾಳು ಕಟ್ಟುವ ಹಂತದಲ್ಲಿ ಈ ರೋಗ ಕಂಡುಬರುತ್ತದೆ. ಕಾಳುಗಳು ಬಿಳಿ ಅಥವಾ ಹಸಿರು ಬಣ್ಣದ ಗಂಟುಗಳಾಗಿ ಮಾರ್ಪಡುತ್ತವೆ. ಈ ಗಂಟುಗಳು ನಂತರ ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇದು ನೇರವಾಗಿ ಧಾನ್ಯದ ಗುಣಮಟ್ಟಕ್ಕೆ ಹಾನಿ ಮಾಡುತ್ತದೆ.

3. ಎಲೆಗವಚ ಅಂಗಮಾರಿ ರೋಗ (Sheath Blight)
ರೋಗಾಣು: ರೈಜೋಕ್ಟೋನಿಯಾ ಸೋಲಾನಿ (Rhizoctonia solani)
ರೋಗಾಣು ವಿಧ: ಶಿಲೀಂಧ್ರ (Fungus)
ಹಾನಿಯ ಲಕ್ಷಣ: ಇದು ರೋಗವು ಭತ್ತದ ಕವಚದ ಮೇಲೆ ಕಾಣಿಸಿಕೊಳ್ಳುತ್ತದೆ. ನೀರಿನ ಮಟ್ಟಕ್ಕೆ ಹತ್ತಿರದಲ್ಲಿ, ಕವಚದ ಮೇಲೆ ಬೂದು-ಹಸಿರು ಬಣ್ಣದ ಕಲೆಗಳು ಕಾಣಿಸಿಕೊಳ್ಳುತ್ತವೆ. ರೋಗ ತೀವ್ರವಾದಂತೆ, ಈ ಕಲೆಗಳು ದೊಡ್ಡದಾಗಿ, ಹಳದಿ ಮತ್ತು ಕಂದು ಬಣ್ಣಕ್ಕೆ ತಿರುಗುತ್ತವೆ. ಇದು ಎಲೆಗೂ ಹರಡುತ್ತದೆ. ತೀವ್ರತರದಲ್ಲಿ ರೋಗವು ಸಸ್ಯಕ್ಕೆ ಪೋಷಕಾಂಶಗಳ ಪೂರೈಕೆಯನ್ನು ತಡೆಯುತ್ತದೆ.

II. ಭತ್ತದ ಪ್ರಮುಖ ಕೀಟಗಳು :
1. ಹಳದಿ ಕಾಂಡ ಕೊರಕ (Stem borer)
ಕೀಟದ ವೈಜ್ಞಾನಿಕ ಹೆಸರು: ಸಿರ್ಪೋಫಾಗಾ ಇನ್ಸರ್ಟುಲಾಸ್ (Scirpophaga incertulas)
ಹಾನಿಯ ಲಕ್ಷಣ: ಈ ಕೀಟದ ಮರಿಹುಳುಗಳು ಸಸಿಯ ಕಾಂಡವನ್ನು ಕೊರೆದು ತಿನ್ನುತ್ತವೆ. ಇದರಿಂದಾಗಿ ಸಸಿಗಳು ಒಣಗಿದಂತೆ ಕಾಣುತ್ತವೆ. ಸಸಿ ಹಂತದಲ್ಲಿ “ಡೆಡ್ ಹಾರ್ಟ್” (ಒಣಗಿದ ಕಾಂಡ) ಮತ್ತು ತೆನೆ ಕಟ್ಟುವ ಹಂತದಲ್ಲಿ “ವೈಟ್ ಹೆಡ್” (ಬಿಳಿ ತೆನೆ) ಲಕ್ಷಣಗಳು ಕಂಡುಬರುತ್ತವೆ. ಹಳದಿ ಕಾಂಡ ಕೊರಕವು ಹೆಚ್ಚು ಹಾನಿ ಉಂಟು ಮಾಡುತ್ತದೆ.

2. ಕಣೆ ನೊಣ (Gall midge)
ಕೀಟದ ವೈಜ್ಞಾನಿಕ ಹೆಸರು: ಆರ್ಸಿಯೋಲಿಯಾ ಒರಿಜೆ (Orseolia oryzae)
ಹಾನಿಯ ಲಕ್ಷಣ: ಈ ಕೀಟದ ಮರಿಹುಳುಗಳು ಸಸ್ಯದ ಬುಡಕ್ಕೆ ಬಂದು ಕಾಂಡದ ಕುಡಿಗಳನ್ನು ತಿನ್ನುತ್ತವೆ. ಇದರಿಂದ ಹಾನಿಗೊಳಗಾದ ಕಾಂಡವು ಬೆಳ್ಳಿಯಂತೆ ಹೊಳೆಯುವ ಮತ್ತು ಉದ್ದವಾದ ಕೊಳವೆಯಾಗಿ ಮಾರ್ಪಾಡಾಗುತ್ತದೆ. ಇದಕ್ಕೆ ‘ಸಿಲ್ವರ್ ಶೂಟ್’ ಅಥವಾ ‘ಬೆಳ್ಳಿ ಹೂ’ ಎಂದು ಕರೆಯುತ್ತಾರೆ. ಈ ರೀತಿಯ ಹಾನಿಗೊಳಗಾದ ಸಸ್ಯಗಳು ತೆನೆ ಕಟ್ಟುವುದಿಲ್ಲ.

ಭತ್ತದಲ್ಲಿ ಸಮಗ್ರ ಪೀಡೆ ನಿರ್ವಹಣಾ ಕ್ರಮಗಳು:
I. ಸಾಂಪ್ರದಾಯಿಕ ನಿಯಂತ್ರಣ ವಿಧಾನಗಳು
- ಕಟಾವಿನ ನಂತರ ಭತ್ತದ ಕೂಳೆಯನ್ನು ಆಳವಾಗಿ ಉಳುಮೆ ಮಾಡಿ.
- ರೋಗ ನಿರೋಧಕ ಶಕ್ತಿ ಹೊಂದಿರುವ ತಳಿಗಳನ್ನು ಆಯ್ದುಕೊಳ್ಳುವುದು.
- ರೋಗ ಮತ್ತು ಕೀಟ ಮುಕ್ತ ಶುದ್ಧ ಬೀಜವನ್ನು ಬಳಸುವುದು
- ಗದ್ದೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಹುಲ್ಲು ಜಾತಿಯ ಕಳೆಗಳನ್ನು ಮತ್ತು ಕಾಡು ಭತ್ತವನ್ನು ನಿಯಂತ್ರಿಸಬೇಕು.
- ಶೀಘ್ರವಾಗಿ ಪಕ್ವವಾಗುವ ಭತ್ತದ ತಳಿಗಳ ಬಳಕೆ ಮಾಡುವುದು.
- ಅತಿಯಾದ ಸಾರಜನಕ ಪೋಷಕಾಂಶ ಕೊಡಬಾರದು.
- ಎಲ್ಲ ರೈತರು ಒಟ್ಟಿಗೆ ನಾಟಿ ಮಾಡುವುದರಿಂದ ಕೀಟಗಳ ನಿರ್ವಹಣೆ ಸುಲಭವಾಗುತ್ತದೆ.
- ನಾಟಿ ಮಾಡುವಾಗ ಗಿಡದಿಂದ ಗಿಡಕ್ಕೆ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು.
II. ಯಾಂತ್ರಿಕ ನಿಯಂತ್ರಣ ವಿಧಾನಗಳು
- ಕಾಂಡ ಕೊರಕ ಕೀಟಕ್ಕೆ, ಫೆರೋಮೋನ್ ಬಲೆಗಳನ್ನು (ಲಿಂಗಾಕರ್ಷಕ ಬಲೆ) ಪ್ರತಿ ಎಕರೆಗೆ 8-10 ರಂತೆ ಅಳವಡಿಸಬೇಕು.
- ನಾಟಿಗೆ ಮೊದಲು ಸಸಿಗಳ ತುದಿ ಗರಿಗಳನ್ನು ಕತ್ತರಿಸುವುದರಿಂದ ಕಾಂಡ ಕೊರಕ ಕೀಟದ ಮೊಟ್ಟೆಗಳನ್ನು ನಾಶಪಡಿಸಬಹುದು.
- ಬೆಳ್ಳಿ ಬಣ್ಣದ ಕೊಳವೆಗಳ (ಸಿಲ್ವರ್ ಶೂಟ್ಸ್) ಲಕ್ಷಣಗಳು ಕಂಡುಬಂದಾಗ ಅಂತಹ ಸಸ್ಯಗಳನ್ನು ಕಿತ್ತು ನಾಶಪಡಿಸಬೇಕು.
- ಗದ್ದೆಯಲ್ಲಿ 5-7 ದಿನಗಳ ಕಾಲ ನೀರನ್ನು ಬಸಿಯುವುದರಿಂದ ಕಣೆ ನೊಣ ಕೀಟದ ಜೀವನಚಕ್ರಕ್ಕೆ ಅಡ್ಡಿಯಾಗುತ್ತದೆ.
- ಶುರು ಹಂತದಲ್ಲಿ ಕಾಡಿಗೆ ರೋಗಗ್ರಸ್ತ ತೆನೆಗಳ ನಾಶ:
III. ಜೈವಿಕ ನಿಯಂತ್ರಣ ವಿಧಾನಗಳು
- ಸೂಡೋಮೊನಾಸ್ ಫ್ಲೋರೆಸೆನ್ಸ್ ಜೈವಿಕ ರೋಗನಾಶಕದೊಂದಿಗೆ ಬೀಜೋಪಚಾರ ಮಾಡುವುದು (10g/ಕೆಜಿ ಬೀಜಗಳು) & ಬೆಳೆಗೆ ಸಿಂಪಡಣೆ (5g/L).
- ಟ್ರೈಕೋಡರ್ಮಾ ವಿರಿಡೆ ಜೈವಿಕ ರೋಗನಾಶಕವನ್ನು ಕೊಟ್ಟಿಗೆ ಗೊಬ್ಬರದೊಂದಿಗೆ ಅಭಿವೃದ್ಧಿ ಪಡಿಸಿ ಬಿತ್ತನೆಗೆ ಮುನ್ನ ಭೂಮಿಗೆ ಹಾಕುವುದು.
- ಟ್ರೈಕೊಗ್ರಾಮಾ ಮೊಟ್ಟೆ ಪರತಂತ್ರ ಜೀವಿ ಕಾರ್ಡ್ಗಳನ್ನು ನಾಟಿ ಮಾಡಿದ ಒಂದು ತಿಂಗಳಿನಿಂದ ಪ್ರತಿ ವಾರ ಪ್ರತಿ ಹೆಕ್ಟೇರ್ಗೆ 25,000 ರಂತೆ ಐದು ವಾರಗಳ ಕಾಲ ಗದ್ದೆಯಲ್ಲಿ ಬಿಡಬೇಕು.
- ಗ್ಯಾಲ್ ಮಿಡ್ಜ್ ಕೀಟದ ಸ್ವಾಭಾವಿಕ ಶತ್ರುಗಳಾದ ಪ್ಲಾಟಿಗ್ಯಾಸ್ಟರ್ ಜಿಗ್ನಿ ಎಂಬ ಪರತಂತ್ರ ಜೀವಿಗಳು ಗದ್ದೆಯಲ್ಲಿ ವೃದ್ಧಿಯಾಗಲು ಅವಕಾಶ ಮಾಡಿಕೊಡಬೇಕು.
IV. ರಾಸಾಯನಿಕ ನಿಯಂತ್ರಣ ವಿಧಾನಗಳು
- ಕೀಟ ಅಥವಾ ರೋಗದ ಭಾದೆಯೂ ತೀವ್ರವಾದಾಗ ಈ ಕೆಳಗಿನ CIB&RC ನೊಂದಾಯಿತ ಪೀಡೆನಾಶಕಗಳನ್ನು ಪೀಡೆಗೆ ಅನುಸಾರವಾಗಿ ಬಳಸುವುದು.
| ಪೀಡೆ | ಪೀಡೆನಾಶಕ |
| ಬೆಂಕಿ ರೋಗ | ಕಾರ್ಪ್ರೊಪಮಿಡ್ 27.8% SC @ 1 ಮಿ.ಲೀ/ಲೀ ಅಥವಾ ಎಡಿಫೆನ್ಫಾಸ್ 50% EC @ 0.6 ಮಿ.ಲೀ/ಲೀ ಅಥವಾ ಐಸೋಪ್ರೊಥಿಯೋಲೇನ್ 40% EC @ 1.5 ಮಿ.ಲೀ/ಲೀ ಅಥವಾ ಕಾರ್ಬೆಂಡಾಜಿಂ 50% WP @ 2 ಗ್ರಾಂ/ಲೀ ಅಥವಾ ಕಿಟಾಜಿನ್ 48% EC @ 2 ಮಿ.ಲೀ/ಲೀ ಅಥವಾ ಪಿಕೋಕ್ಸಿಸ್ಟ್ರೋಬಿನ್ 22.52% SC @ 1.2 ಮಿ.ಲೀ/ಲೀ ಅ |
| ಹುಸಿ ಕಾಡಿಗೆ ರೋಗ | ಕಾಪರ್ ಹೈಡ್ರಾಕ್ಸೈಡ್ 53.8% DF @ 3 ಗ್ರಾಂ/ಲೀ ಅಥವಾ ಅಥವಾ ಕಾಪರ್ ಹೈಡ್ರಾಕ್ಸೈಡ್ 77% WP @ 2.5 ಗ್ರಾಂ/ಲೀ ಅಥವಾ ಫ್ಲೂಒಪೈರಂ 17.7% w/w + ಟೆಬ್ಯೂಕೋನಾಜೋಲ್ 17.7% w/w SC @ 1 ಮಿ.ಲೀ/ಲೀ ಅಥವಾ ಪಿಕೋಕ್ಸಿಸ್ಟ್ರೋಬಿನ್ 7.05% + ಪ್ರೊಪಿಕೋನಾಜೋಲ್ 11.7% SC @ 2 ಮಿ.ಲೀ/ಲೀ |
| ಎಲೆಗವಚ ಅಂಗಮಾರಿ ರೋಗ | ಡೈಫೆನೋಕೋನಾಜೋಲ್ 25% EC @ 0.5 ಮಿ.ಲೀ/ಲೀ ಅಥವಾ ಹೆಕ್ಸಾಕೋನಾಜೋಲ್ 5% EC @ 2 ಮಿ.ಲೀ/ಲೀ ಅಥವಾ ಪೆನ್ಸಿಕ್ಯುರಾನ್ 22.9% SC @ 1.5 ಮಿ.ಲೀ/ಲೀ ಅಥವಾ ಪ್ರೊಪಿಕೋನಾಜೋಲ್ 25% EC @ 1 ಮಿ.ಲೀ/ಲೀ ಅಥವಾ ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೋಕೋನಾಜೋಲ್ 11.4% SC @ 1 ಮಿ.ಲೀ/ಲೀ |
| ಹಳದಿ ಕಾಂಡ ಕೊರಕ | ಬಿಫೆಂಥ್ರಿನ್ 08.80% CS @ 1 ಮಿ.ಲೀ/ಲೀ ಅಥವಾ ಬಿಫೆಂಥ್ರಿನ್ 10% EC @ 1 ಮಿ.ಲೀ/ಲೀ ಅಥವಾ ಕಾರ್ಬೋಫ್ಯೂರಾನ್ 03% CG @ 10 ಕೆ.ಜಿ/ಏಕರೆ ಅಥವಾ ಕ್ಲೋರಾಂಟ್ರಾನಿಲಿಪ್ರೋಲ್ 00.40% GR @ 4 ಕೆ.ಜಿ/ಏಕರೆ ಅಥವಾ ಕ್ರೋಮಾಫೆನೋಜೈಡ್ 80% WP @ 0.25 ಗ್ರಾಂ/ಲೀ ಅಥವಾ ಫೆನ್ಪ್ರೋಪಾತ್ರಿನ್ 30% EC @ 0.66 ಗ್ರಾಂ/ಲೀ ಅಥವಾ ಲ್ಯಾಂಬ್ಡಾ-ಸೈಹಲೋತ್ರಿನ್ 05% EC @ 0.62 ಮಿ.ಲೀ/ಲೀ ಅಥವಾ ಕ್ವಿನಾಲ್ಫೋಸ್ 05% GR @ 2 ಕೆ.ಜಿ/ಏಕರೆ |
| ಕಣೆ ನೊಣ | ಕಾರ್ಬೋಫ್ಯೂರಾನ್ 03% CG @ 10 ಕೆ.ಜಿ/ಏಕರೆ ಅಥವಾ ಕಾರ್ಬೋಸುಲ್ಫಾನ್ 06% GR @ 6.6 ಕೆ.ಜಿ/ಏಕರೆ ಅಥವಾ ಕಾರ್ಬೋಸುಲ್ಫಾನ್ 25% EC @ 1 ಮಿ.ಲೀ/ಲೀ ಅಥವಾ ಕ್ಲೋರ್ಪೈರಿಫಾಸ್ 10% GR @ 4 ಕೆ.ಜಿ/ಏಕರೆ ಅಥವಾ ಎಥೋಫೆನೋಪ್ರಾಕ್ಸ್ 10% EC @ 1 ಮಿ.ಲೀ/ಲೀ ಅಥವಾ ಫಿಪ್ರೊನಿಲ್ 05% SC @ 2 ಮಿ.ಲೀ/ಲೀ ಅಥವಾ ಫಿಪ್ರೊನಿಲ್ 00.30% GR @ 10 ಕೆ.ಜಿ/ಏಕರೆ ಅಥವಾ ಲ್ಯಾಂಬ್ಡಾ-ಸೈಹಲೋತ್ರಿನ್ 02.50% EC @ 1 ಮಿ.ಲೀ/ಲೀ ಅಥವಾ ಕ್ವಿನಾಲ್ಫೋಸ್ 05% GR @ 2 ಕೆ.ಜಿ/ಏಕರೆ ಅಥವಾ ಬಿಫೆಂಥ್ರಿನ್ 10% + ಥಿಯಾಮೆಥಾಕ್ಸಾಮ್ 5% SE @ 1 ಮಿ.ಲೀ/ಲೀ |
ಪ್ರಮುಖ ಸೂಚನೆ: ಈ ರೋಗಗಳ ನಿರ್ವಹಣೆಯಲ್ಲಿ ಒಂದು ಅಥವಾ ಎರಡು ವಿಧಾನಗಳ ಮೇಲೆ ಮಾತ್ರ ಅವಲಂಬಿತವಾಗದೆ, ಸಮಗ್ರ ವಿಧಾನಗಳನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ
ಸಮಗ್ರ ನಿರ್ವಹಣೆ – ಸರಿಯಾದ ನಿರ್ವಹಣೆ