Cultural Practices for Plant Disease Control
ಕೃಷಿಯಲ್ಲಿ ಬೆಳೆ ನಷ್ಟಕ್ಕೆ ಮುಖ್ಯ ಕಾರಣಗಳು ಕಳೆಗಳು, ರೋಗಗಳು ಮತ್ತು ಕೀಟಗಳು. ಇವುಗಳಲ್ಲಿ ಬೆಳೆಗಳನ್ನು ಕಾಡುವ ರೋಗಗಳು, ಹೆಚ್ಚಿನ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತವೆ. ಇಂತಹ ಸಸ್ಯ ರೋಗಗಳ ನಿರ್ವಹಣೆಗೆ, ಕೇವಲ ರೋಗನಾಶಕಗಳನ್ನು ಉಪಯೋಗಿಸಿದರೆ ಸಾಲದು, ಕೆಲವೊಮ್ಮೆ ಎಷ್ಟೇ ಶಿಲೀಂದ್ರನಾಶಕ ಅಥವ ಬ್ಯಾಕ್ಟೀರಿಯಾನಶಕಗಳನ್ನು ಉಪಯೋಗಿಸಿದರು ರೋಗಗಳು ಹತೋಟಿಗೆ ಬರುವುದಿಲ್ಲ. ಯಾವುದೇ ರೋಗವಾಗಲಿ, ಸಮಗ್ರ ನಿರ್ವಹಣೆಯಿಂದ ಮಾತ್ರ ಯಶಸ್ವಿ ನಿರ್ವಹಣೆ ಸಾಧ್ಯ. ಸಮಗ್ರ ರೋಗ ನಿರ್ವಹಣಾ ಪದ್ಧತಿಯಲ್ಲಿ, ನಾಲ್ಕು ಮುಖ್ಯ ಕ್ರಮಗಳಿವೆ. ಅವುಗಳೆಂದರೆ, ಸಾಂಪ್ರದಾಯಿಕ ಕ್ರಮಗಳು, ಯಾಂತ್ರಿಕ ಕ್ರಮಗಳು, ಜೈವಿಕ ಕ್ರಮಗಳು ಮತ್ತು ರಾಸಾಯನಿಕ ಕ್ರಮಗಳು. ಈ ಲೇಖನದಲ್ಲಿ, ಸಮಗ್ರ ನಿರ್ವಹಣಾ ಪದ್ಧತಿಯಲ್ಲಿ ಮೊದಲ ಕ್ರಮವಾದ, ಸಾಂಪ್ರದಾಯಿಕ ಕ್ರಮಗಳ ಬಗ್ಗೆ ತಿಳಿಯೋಣ. ಈ ಸಾಂಪ್ರದಾಯಿಕ ಕ್ರಮಗಳನ್ನು ಉಪಯೋಗಿಸಿಕೊಂಡು ಯಾವ ರೀತಿಯಲ್ಲಿ ಬೆಳೆಗಳಲ್ಲಿ ರೋಗ ನಿರ್ವಹಣೆ ಮಾಡುವುದು ಎಂದು ತಿಳಿಯೋಣ ಮತ್ತು ಇದರ ಹಿಂದಿನ ವೈಜ್ಞಾನಿಕ ಸತ್ಯವನ್ನು ಸಹ ಕಂಡುಕೊಳ್ಳೋಣ.
ಸಾಂಪ್ರದಾಯಿಕ ಪದ್ಧತಿಗಳಿಂದ ರೋಗ ನಿರ್ವಹಣೆ ಮಾಡುವುದೆಂದರೆ, ನಿಮ್ಮ ಹೊಲ ಅಥವಾ ತೋಟದಲ್ಲಿರುವ ಸಸ್ಯ ರೋಗಾಣುಗಳನ್ನು ಅಭಿವೃದ್ಧಿ ಹೊಂದಲು ಬಿಡದೆ, ಅವುಗಳಿಗೆ ಮಾರಕವಾಗಿರುವ ವಾತಾವರಣವನ್ನು ಹೊಲದಲ್ಲಿ ನಿರ್ಮಿಸುವುದು. ಈ ಪದ್ಧತಿಗಳು ಅಳವಡಿಸಿಕೊಳ್ಳಲು ಸುಲಭ ಮತ್ತು ಖರ್ಚು ತುಂಬಾ ಕಡಿಮೆ ಇರುತ್ತದೆ.

1. ಬೇಸಿಗೆಯಲ್ಲಿ ಆಳವಾದ ಮಾಗಿ ಉಳುಮೆ :
ಅನೇಕ ಬೆಳೆಗಳಲ್ಲಿ ಕಾಡುವ ರೋಗಗಳಾದ ಸೊರಗು ರೋಗ, ಸಿಡಿ ರೋಗ, ಬುಡ ಕೊಳೆ, ಕಾಂಡ ಕೊಳೆ ರೋಗ, ಸಸಿಕೊಳೆ ರೋಗ, ಅಂಗಮಾರಿ ರೋಗ, ಬೀಜಕೊಳೆ ಮತ್ತು ಜಂತು ಹುಳುಗಳು, ಬೆಳೆಯ ಕಾಲವಧಿ ಮುಗಿದ ಮೇಲೆ ಮಣ್ಣಿನಲ್ಲಿ ಸೇರಿಕೊಂಡು, ತಮ್ಮ ಸಂತಾನೋತ್ಪತ್ತಿಯನ್ನು ಮುಂದುವರೆಸುತ್ತವೆ. ಹೀಗಾಗಿ ಬೇಸಿಗೆಯ ಏಪ್ರಿಲ್ ತಿಂಗಳಲ್ಲಿ ಆಳವಾದ ಮಾಗಿ ಉಳುಮೆ ಮಾಡಿ, ಹೊಲವನ್ನು ಹಾಗೆ ಬಿಟ್ಟರೆ, ಬಿಸಿಲಿನ ತಾಪಕ್ಕೆ ಮಣ್ಣಿನಲ್ಲಿ ಉಷ್ಣಾಂಶ ಹೆಚ್ಚಾಗಿ, ಮಣ್ಣಿನಲ್ಲಿರುವ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ರೋಗಾಣುಗಳು ಮತ್ತು ಜಂತು ಹುಳುಗಳು ನಾಶವಾಗುತ್ತವೆ. ಇದರಿಂದ ಮಣ್ಣಿನಲ್ಲಿ ರೋಗಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಮುಂದಿನ ಬೆಳೆಯ ಕಾಲಾವಧಿಯಲ್ಲಿ ರೋಗದ ತೀವ್ರತೆ ಕಡಿಮೆಯಾಗುತ್ತದೆ. ಯುಗಾದಿ ಹಬ್ಬದ ನಂತರ ಬರುವ ಮೊದಲ ಮಳೆಯ ನಂತರ ಮಾಗಿ ಉಳುಮೆ ಮಾಡಿದರೆ ಉತ್ತಮ ಮತ್ತು ಈ ಉಳುಮೆ ಆಳವಾಗಿರಬೇಕು. ಇದರಿಂದ ಕೇವಲ ರೋಗಾಣುಗಳು ಅಷ್ಟೇ ಅಲ್ಲ, ಕೀಟಗಳ ಕೋಶವಸ್ಥೆ ಹಂತಗಳು, ಜಂತು ಹುಳುಗಳು ಮತ್ತು ಕಳೆ ಬೀಜಗಳು ಸಹ ನಾಶವಾಗುತ್ತವೆ.

2. ಬೆಳೆ ಪರಿವರ್ತನೆ:
ಹೊಲದಲ್ಲಿ ಪ್ರತೀ ಕಾಲದಲ್ಲಿ ಒಂದೇ ಬೆಳೆ ಬೆಳೆಯುತ್ತಿದ್ದರೆ, ರೋಗಗಳ ತೀವ್ರತೆ ಹೆಚ್ಚಾಗುತ್ತಾ ಹೋಗುತ್ತದೆ. ರೋಗಾಣುಗಳಿಗೆ ವರ್ಷದ ಎಲ್ಲಾ ಕಾಲದಲ್ಲಿ ಆಶ್ರಯ ಸಸ್ಯ (ಆಹಾರ) ಸಿಗುವುದರಿಂದ, ಅವುಗಳ ಸಂತಾನೋತ್ಪತ್ತಿ ಮಿತಿ ಮೀರುತ್ತದೆ. ನಂತರ ರೋಗಗಳು ವಿನಾಶಕಾರಿಯಾಗಿ ಬಡಗುತ್ತವೆ. ನೀವು ಯಾವುದೇ ರಾಸಾಯನಿಕ ಔಷಧಿಗಳನ್ನು, ಎಷ್ಟು ಬಾರಿ ಸಿಂಪಡಿಸಿದರು, ಅದು ಪ್ರಯೋಜನಕ್ಕೆ ಬರುವುದಿಲ್ಲ. ಮುಖ್ಯವಾಗಿ ಮಣ್ಣಿನಿಂದ ಬರುವ ರೋಗಗಳು ಉಲ್ಬಣಗೊಂಡಾಗ, ಬೆಳೆ ಪರಿವರ್ತನೆ ಒಂದು ಬ್ರಹ್ಮಾಸ್ತ್ರವಿದ್ದಂತೆ. ಉದಾಹರಣೆಗೆ ಟೊಮೆಟೊ ಬೆಳೆಯಲ್ಲಿ ಅಂಗಮಾರಿ ರೋಗ ತೀವ್ರವಾದಾಗ, ಮುಂದಿನ ಸೀಸನ್ ನಲ್ಲಿ ಮತ್ತೆ ಟೊಮೆಟೊ ಅಥವಾ ಆಲೂಗಡ್ಡೆ ಹಾಕಿದರೆ, ಮತ್ತೆ ಅಂಗಮಾರಿ ರೋಗ ಸ್ಪೋಟಗೊಂಡು, ನಿರ್ವಹಣೆ ಮಾಡಲು ಅಸಾಧ್ಯವಾಗುತ್ತದೆ. ಬೆಳೆ ಪರಿವರ್ತನೆ ಎಂದರೆ, ಒಂದೇ ಬೆಳೆಯನ್ನು ಅಥವಾ ಒಂದೇ ಜಾತಿಯ ಬೆಳೆಯನ್ನು, ಒಂದೇ ಸ್ಥಳದಲ್ಲಿ, ಪದೇ ಪದೇ ಬೆಳೆಯದೇ, ಬೇರೆ ಬೆಳೆಯೊಂದಿಗೆ ಪರಿವರ್ತನೆ ಮಾಡುವುದು.
ಉದಾಹರಣೆಗೆ ಟೊಮೆಟೊ, ಆಲೂಗಡ್ಡೆ, ಬದನೆ, ಮೆಣಸಿನಕಾಯಿ ಈ ಎಲ್ಲಾ ತರಕಾರಿಗಳು ಒಂದೇ ಜಾತಿಗೆ ಸೇರುತ್ತವೆ. ಸೌತೇಕಾಯಿ, ಕುಂಬಳಕಾಯಿ, ಹಾಗಲಕಾಯಿ, ಸೋರೆಕಾಯಿ ಇವುಗಳೆಲ್ಲ ಒಂದೇ ಜಾತಿಗೆ ಸೇರುತ್ತವೆ. ಒಂದೇ ಬೆಳೆ ಅಥವಾ ಒಂದೇ ಜಾತಿಯ ಬೆಳೆಗಳನ್ನು, ಒಂದೇ ಸ್ಥಳದಲ್ಲಿ ಪದೇ ಪದೇ ಬೆಳೆಯಬಾರದು. ಉದಾಹರಣೆಗೆ ನಿಮ್ಮ ಹೊಲದಲ್ಲಿ ಸೊರಗು ರೋಗ ಇದ್ದರೆ, ಮುಂದಿನ ಬೆಳೆಯಾಗಿ ಜೋಳ ಅಥವಾ ದ್ವಿದಳ ಧಾನ್ಯಗಳನ್ನು ಹಾಕಿ. ದ್ವಿದಳ ಧಾನ್ಯಗಳೊಂದಿಗೆ ಬೆಳೆ ಪರಿವರ್ತನೆ ಮಾಡುವುದರಿಂದ, ಮಣ್ಣಿನ ಫಲವತ್ತತೆ ಕೂಡ ಹೆಚ್ಚುತ್ತದೆ.

3. ಹೊಲವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು.
ಹೊಲದಲ್ಲಿ ರೋಗಬಾಧಿತ ಸಸ್ಯಭಾಗಗಳು ಬಿದ್ದಿದರೆ, ಅವುಗಳನ್ನು ತೆಗೆದು ಹಾಕಿ ನಾಶಪಡಿಸಿ. ಅವುಗಳನ್ನು ಹಾಗೆಯೇ ಬಿಟ್ಟರೆ, ರೋಗಾಣು ಹೊಲದಲ್ಲಿಯೇ ಇದ್ದುಕೊಂಡು, ಬೇರೆಯ ಸಸ್ಯಗಳಿಗೆ ಹರಡುತ್ತವೆ. ಹೊಲದಲ್ಲಿ ಅಥವಾ ತೋಟದಲ್ಲಿ ಕಳೆಗಳು ಹೆಚ್ಚಾದರೆ, ರೋಗಾಣುಗಳ ಅಭಿವೃದ್ಧಿಗೆ ಉತ್ತಮ ವಾತಾವರಣ ಸಿಕ್ಕಂತಾಗುತ್ತದೆ. ಇದರಿಂದ ರೋಗಾಣುಗಳು ಬೇಗನೆ ಅಭಿವೃದ್ಧಿ ಹೊಂದಿ, ಹೊಲ ಅಥವಾ ತೋಟದಲ್ಲಿ ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ. ತೋಟ ಅಥವಾ ಹೊಲ ಕಳೆಮುಕ್ತವಾಗಿದ್ದರೆ, ರೋಗ ನಿರ್ವಹಣೆ ಸುಲಭವಾಗುತ್ತದೆ. ಅನೇಕಸಲ ಕಳೆಗಳು, ರೋಗಾಣುಗಳ ಆಶ್ರಯ ಸಸ್ಯಗಳಾಗುತ್ತವೆ. ರೋಗಾಣುಗಳು ಕಳೆಗಳ ಮೇಲೆ ಆಶ್ರಯ ಪಡೆದು, ಮುಖ್ಯಬೆಳೆಗೆ ಸುಲಭವಾಗಿ ಹರಡುತ್ತವೆ. ಕೆಲವರು ತೋಟದಲ್ಲಿ ಕಳೆಯನ್ನು ಹಾಗೆಯೇ ಬಿಡಬೇಕು ಎಂದು ವಾದಿಸುತ್ತಾರೆ. ಆದರೆ ಮರದ ಸುತ್ತ ಕಳೆಗಳನ್ನು ಹಾಗೆಯೇ ಬಿಟ್ಟರೆ, ನೀವು ಹಾಕಿದ ಗೊಬ್ಬರವನ್ನು ಕಳೆಗಳು ಉಪಯೋಗಿಸಿಕೊಳ್ಳುತ್ತವೆ. ಇದರಿಂದ ಬೆಳೆಯ ಇಳುವರಿ ಕುಂಠಿತವಾಗುತ್ತದೆ.
ಉದಾಹರಣೆಗೆ : ಅಡಿಕೆ ಮತ್ತು ಬಾಳೆಯಲ್ಲಿ ಎಲೆಚುಕ್ಕೆ ರೋಗದಿಂದ ಸಂಪೂರ್ಣ ರೋಗಬಾದಿತ ಎಲೆಗಳನ್ನು ಕಿತ್ತು, ಸುಟ್ಟುಹಾಕಿ ನಂತರ ಶಿಲೀಂದ್ರನಾಶಕಗಳನ್ನು ಸಿಂಪಡಿಸಬೇಕು. ಹಾಗೆಯೇ ಸಿಂಪಡಿಸಿದರೆ ಯಾವುದೇ ಕಾರಣಕ್ಕೂ ಎಲೆಚುಕ್ಕೆ ರೋಗ ಹತೋಟಿಗೆ ಬರುವುದಿಲ್ಲ.

4. ಸರಿಯಾದ ಅಂತರದಲ್ಲಿ ಬಿತ್ತನೆ ಅಥವಾ ನಾಟಿ ಮಾಡಿ.
ಯಾವುದೇ ಬೆಳೆಯಾಗಲಿ, ಶಿಫಾರಸ್ಸು ಮಾಡಿದ ಅಂತರದಲ್ಲಿ ಹಾಕಬೇಕು. ಸಸ್ಯದಿಂದ ಸಸ್ಯಕ್ಕೆ ಮತ್ತು ಸಾಲಿನಿಂದ ಸಾಲಿಗೆ ಶಿಫಾರಸ್ಸು ಮಾಡಿದ ಅಂತರವನ್ನೇ ಪಾಲಿಸಬೇಕು. ಸಸ್ಯಗಳ ಸಂಖ್ಯೆ ಹೆಚ್ಚಾದ ಕೂಡಲೇ ಇಳುವರಿ ಹೆಚ್ಚಾಗುವುದಿಲ್ಲ. ಸಸ್ಯಗಳ ಮಧ್ಯೆ ಅಂತರ ತುಂಬ ಕಡಿಮೆಯಾದರೆ, ಪೋಷಕಾಂಶಗಳಿಗಾಗಿ ಸಸ್ಯಗಳ ಮಧ್ಯೆ ಪೈಪೋಟಿ ನಡೆದು, ಇಳುವರಿ ಕಡಿಮೆ ಯಾಗುತ್ತದೆ. ಮುಖ್ಯವಾಗಿ ಅಡಿಕೆ, ದಾಳಿಂಬೆ, ತೆಂಗು ಮತ್ತು ಇತರ ತೋಟಗಾರಿಕಾ ಬೆಳೆಗಳಲ್ಲಿ, ಸಸ್ಯಗಳ ನಡುವೆ ಅಂತರ ಕಡಿಮೆ ಯಾದರೆ, ಅನೇಕ ರೋಗಗಳು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಬೇಗನೆ ಹರಡುತ್ತದೆ. ಆಗ ಕಡಿಮೆ ಸಮಯದಲ್ಲಿ, ಇಡೀ ತೋಟಕ್ಕೆ ರೋಗ ಬಹುಬೇಗನೆ ಹರಡಿದಾಗ, ರೋಗನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ.
ಉದಾಹರಣೆಗೆ:: ತೆಂಗು ಬೆಳೆಯಲ್ಲಿ ಅಣಬೆ ರೋಗ ಮತ್ತು ಸುಳಿಕೊಳೆ ರೋಗಗಳು, ಮರದಿಂದ ಮರಕ್ಕೆ ಅಂತರ ಕಡಿಮೆ ಇದ್ದಾಗ, ಈ ರೋಗಗಳು ಬೇಗನೆ ಇಡೀ ತೋಟಕ್ಕೆ ಹರಡುತ್ತವೆ.

5. ಆರೋಗ್ಯವಂತ ಬೀಜ/ಸಸಿಗಳನ್ನು ಉಪಯೋಗಿಸಿ:
ಅನೇಕ ರೋಗಗಳು, ಬೀಜಗಳಿಂದ ಮತ್ತು ಸಸಿಗಳಿಂದ ಹರಡುತ್ತವೆ. ಹೀಗಾಗಿ ಬಿತ್ತನೆ ಅಥವಾ ನಾಟಿ ಮಾಡುವಾಗ ಬೀಜ ಮತ್ತು ಸಸಿಗಳನ್ನು ಪರಿಶೀಲಿಸಿ ನಂತರ ಬಿತ್ತನೆ ಮತ್ತು ನಾಟಿ ಮಾಡುವುದು ಉತ್ತಮ.
ಉದಾಹರಣೆಗೆ : ಭತ್ತದಲ್ಲಿ ಬೆಂಕಿ ರೋಗ ಬೀಜದಿಂದಲೇ ಮುಖ್ಯವಾಗಿ ಬರುತ್ತದೆ, ಹೀಗಾಗಿ ಆರೋಗ್ಯವಂತ ಬೀಜಗಳನ್ನು ಉಪಯೋಗಿಸಬೇಕಾಗುತ್ತದೆ ಇಲ್ಲವೇ ಬೀಜೋಪಚಾರ ಮಾಡಿ ನಂತರ ಉಪಯೋಗಿಸಬೇಕು.
ಉದಾಹರಣೆಗೆ : ಟೊಮೆಟೊ ಸಸಿಗಳಲ್ಲಿ ಎಲೆ ಮುದುರು ನಂಜಾಣು ರೋಗ ಮೊದಲೇ ಇದ್ದರೆ, ಇಂತಹ ಸಸಿಗಳನ್ನು ಹೊಲದಲ್ಲಿ ನಾಟಿ ಮಾಡಿ, ಯಾವುದೇ ಔಷಧಿ ಸಿಂಪಡಿಸಿದರು, ಈ ರೋಗ ನಿರ್ವಹಣೆಯಾಗುವುದಿಲ್ಲ.
ಉದಾಹರಣೆಗೆ: ಕಬ್ಬು ಬೆಳೆಯಲ್ಲಿ, ರೋಗಭಾದಿತ ಕಬ್ಬಿನ ತುಂಡುಗಳನ್ನು ನಾಟಿಗೆ ಬಳಸಿದರೆ, ನಾಟಿಯ ನಂತರ ರೋಗ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ.

6. ಸಮತೋಲಿತ ಪೋಷಕಾಂಶ ನಿರ್ವಹಣೆ:
ಭಾರತದ ಕೃಷಿಯಲ್ಲಿ ಮುಖ್ಯ ಸಮಸ್ಯೆ ಎಂದರೆ, ಅಸಮರ್ಪಕ ಗೊಬ್ಬರಗಳ ಬಳಕೆ. ಒಂದೆಡೆ ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಮಣ್ಣಿನ ಆರೋಗ್ಯ ನಾಶವಾಗುತ್ತಿದ್ದಾರೆ, ಇನ್ನೊಂದು ಕಡೆ ಸರಿಯಾಗಿ ಗೊಬ್ಬರಗಳನ್ನು ಬಳಸದೆ, ಅನೇಕ ರೈತರು ಅಧಿಕ ಇಳುವರಿ ಪಡೆಯದೆ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ದೇಶದ ಬಹುತೇಕ ರೈತರು ಕೇವಲ ಯೂರಿಯಾ ಗೊಬ್ಬರವನ್ನೇ ಅವಲಂಬಿಸಿದ್ದಾರೆ. ಎಷ್ಟೋ ರೈತರು ಕೇವಲ ಯೂರಿಯಾ ಗೊಬ್ಬರವನ್ನು ಅಷ್ಟೇ ಬಳಸುತ್ತಾರೆ. ಅನೇಕ ರೈತರಿಗೆ ಸಸ್ಯ ಪೋಷಕಾಂಶಗಳ ಬಗ್ಗೆ ಅರಿವು ಕಡಿಮೆ ಇದೆ. ಇನ್ನೂ ಕೆಲವು ರೈತರು, ಅಗತ್ಯಕ್ಕೆ ಮೀರಿ ರಸಗೊಬ್ಬರಗಳನ್ನು ಬಳಸುತ್ತಾರೆ. ಕೃಷಿ ವಿಜ್ಞಾನಿಗಳು ಮಾಡಿದ ಗೊಬ್ಬರಗಳ ಶಿಫಾರಸ್ಸನ್ನು ಪಾಲಿಸುವವರು ಕೇವಲ ಬೆರಳೆಣಿಕೆಯಷ್ಟು ರೈತರು ಮಾತ್ರ.
ಶಿಫಾರಸ್ಸಿಗಿಂದ, ಅತೀಯಾಗಿ ಸಾರಜನಕ ಗೊಬ್ಬರಗಳನ್ನು (ಯೂರಿಯಾ, ಅಮೋನಿಯಂ ಸಲ್ಫೇಟ್) ಬಳಸುವುದರಿಂದ, ಎಲೆಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಯಾಗಿ, ರೋಗಗಳು ಬೇಗನೆ ಆವರಿಸಿಕೊಳ್ಳುತ್ತವೆ ಮತ್ತು ಬೇಗನೆ ಹರಡುತ್ತವೆ. ಎಷ್ಟೋ ಜನರು ಪೊಟ್ಯಾಷಿಯಂ/ಪೊಟ್ಯಾಷ್ ಪೋಷಕಾಂಶವನ್ನೇ ಮರೆತಿದ್ದಾರೆ. ಪೊಟ್ಯಾಷಿಯಂ ಒಂದು ಮುಖ್ಯ ಪೋಷಕಾಂಶ, ಇದು ಸಸ್ಯಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಸ್ಯಗಳಿಗೆ ಮುಖ್ಯವಾಗಿ 3 ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಬೇಕಾಗುತ್ತವೆ. ಅವುಗಳೆಂದರೆ ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ ಪೋಷಕಾಂಶಗಳು, ಈ ಪೋಷಕಾಂಶಗಳು ಕೊರತೆಯಾದರೆ, ಇಳುವರಿ ನಷ್ಟ ಕಟ್ಟಿಟ್ಟ ಬುತ್ತಿ. ಹೀಗಾಗಿ ವಿಜ್ಞಾನಿಗಳು ಶಿಫಾರಸ್ಸು ಮಾಡಿರುವಂತೆ, ಪ್ರತೀ ಬೆಳೆಗೆ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಪೋಷಕಾಂಶಗಳನ್ನು ನಿರ್ವಹಣೆ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

7. ಸರಿಯಾದ ನೀರಿನ ನಿರ್ವಹಣೆ:
ಅಗತ್ಯಕ್ಕೆ ತಕ್ಕಂತೆ ಬೆಳೆಗಳಿಗೆ ನೀರನ್ನು ಹಾಯಿಸುವುದು ಸೂಕ್ತ. ಕೆಲವೊಮ್ಮೆ ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿ ನೀರು ಕೊಟ್ಟಾಗ, ಬೇರುಕೊಳೆ ರೋಗ, ಕಾಂಡ ಕೊಳೆ ಮತ್ತು ಇತರೆ ರೋಗಗಳು ಹೆಚ್ಚಾಗುತ್ತವೆ. ಉದಾಹರಣೆ 1 : ಟೊಮೆಟೊ ಬೆಳೆಯಲ್ಲಿ ಕೊನೆ ಅಂಗಮಾರಿ ರೋಗ ಬಂದಾಗ, ಹೆಚ್ಚು ನೀರು ಹಾಯಿಸಿದರೆ ಅಂಗಮಾರಿ ರೋಗ ಹೊಲಕ್ಕೆ ಬೇಗನೆ ಹರಡುತ್ತದೆ.
ಉದಾಹರಣೆ 2: ಜೋಳದ ಬೆಳೆ ಹೂವಿನ ಹಂತಕ್ಕೆ ಬಂದಾಗ, ನೀರು ಕೊಡದಿದ್ದರೆ, ಕಪ್ಪು ಕಾಂಡ ಕೊಳೆ ರೋಗ ಬೇಗನೆ ಸಂಪೂರ್ಣ ಹೊಲಕ್ಕೆ ಹರಡುತ್ತದೆ.
ಉದಾಹರಣೆ 3 : ಆಲೂಗಡ್ಡೆಯಲ್ಲಿ ಅಂಗಮಾರಿ ರೋಗ ಬಂದಮೇಲೆ, ಸ್ಪ್ರಿಂಕ್ಲರ್ (ತುಂತುರು) ನೀರಾವರಿ ಕೊಟ್ಟರೆ, ಅಂಗಮಾರಿ ರೋಗ ಬಹುಬೇಗನೆ ಹೊಲದಲ್ಲಿ ಹರಡುತ್ತದೆ.

ಯಾವುದೇ ರೋಗವನ್ನು ಕೇವಲ ರಾಸಾಯನಿಕ ಔಷಧಿಗಳನ್ನು ಸಿಂಪಡಿಸಿ ಯಶಸ್ವಿಯಾಗಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಮಗ್ರ ನಿರ್ವಹಣಾ ಪದ್ಧತಿಗಳನ್ನು ಅನುಸರಿಸುವುದು ಉತ್ತಮ. ಇದರಲ್ಲಿ ಮೊದಲ ಹೆಜ್ಜೆಯಾದ, ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸುವುದರಿಂದ, ನಿಮ್ಮ ಹೊಲ ಅಥವಾ ತೋಟದಲ್ಲಿ ರೋಗಾಣುಗಳು ಸಂಖ್ಯೆ ದುರ್ಬಲಗೊಂಡು, ರೋಗದ ತೀವ್ರತೆ ಕಡಿಮೆಯಾಗುತ್ತದೆ. ಈ ಪದ್ಧತಿಗಳೊಂದಿಗೆ, ಯಾಂತ್ರಿಕ, ಜೈವಿಕ ಮತ್ತು ರಾಸಾಯನಿಕ ಪದ್ಧತಿಗಳನ್ನು ಅನುಸರಿಸಿದರೆ, ಯಾವುದೇ ರೋಗವಾಗಲಿ, ಯಶಸ್ವಿಯಾಗಿ ನಿರ್ವಹಣೆಯಾಗುತ್ತದೆ.