Diseases of Coconut and their Integrated Management
ತೆಂಗು ಕರ್ನಾಟಕದ ಪ್ರಮುಖ ಬೆಳೆಗಳಲ್ಲಿ ಒಂದು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ವಿವಿಧ ರೋಗಗಳು ತೆಂಗಿನ ತೋಟಗಳ ಉತ್ಪಾದನೆ ಹಾಗೂ ಗುಣಮಟ್ಟವನ್ನು ಕುಗ್ಗಿಸುತ್ತಿವೆ. ಈ ರೋಗಗಳಲ್ಲಿ ಅಣಬೆ ರೋಗ, ಸುಳಿ ಕೊಳೆಯುವ ರೋಗ, ಕಾಂಡ ಸೋರುವ ರೋಗ ಮತ್ತು ಎಲೆ ಚುಕ್ಕೆ ರೋಗಗಳು ಮುಖ್ಯವಾದವು. ಹವಾಮಾನ ಬದಲಾವಣೆ ಮತ್ತು ಅಸಮರ್ಪಕ ಪೋಷಕಾಂಶಗಳ ನಿರ್ವಹಣೆ, ಇವು ಈ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತಿವೆ. ಆದ್ದರಿಂದ, ಸರಿಯಾದ ನಿರ್ಧಾರ, ತಡೆಗಟ್ಟುವ ಕ್ರಮಗಳು ಮತ್ತು ಸಮಗ್ರ ಸಸ್ಯ ಸಂರಕ್ಷಣೆ ಕ್ರಮಗಳನ್ನು ಅನುಸರಿಸುವುದು ತೆಂಗಿನ ಮರಗಳ ಆರೋಗ್ಯಕರ ಬೆಳವಣಿಗೆಗೆ ಮತ್ತು ಅಧಿಕ ಉತ್ಪಾದನೆಗೆ ಅತ್ಯವಶ್ಯಕವಾಗಿದೆ.
1.ಸುಳಿ ಕೊಳೆ ರೋಗ (Bud Rot)
ಹಾನಿಯ ಲಕ್ಷಣ:
- ಪ್ರಾರಂಭದಲ್ಲಿ ಸುಳಿಯ ಸುತ್ತ ಒಂದೆರಡು ಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
- ಸುಳಿಯಲ್ಲಿನ ಎಳೆಯ ಗರಿಗಳ ದಿಂಡು ಹಾಗೂ ಸುಳಿಯ ಮೃದುವಾದ ಭಾಗವು ಕೊಳೆತು ದುರ್ವಾಸನೆ ಬೀರುತ್ತವೆ.
- ಕೊಳೆತ ಸುಳಿಯನ್ನು ಹೊರಗೆಳೆದರೆ ಸುಲಭವಾಗಿ ಕಿತ್ತು ಬರುತ್ತದೆ.
- ರೋಗ ತೀವ್ರವಾದಲ್ಲಿ ಸಂಪೂರ್ಣ ಮರವೇ ಸಾಯುತ್ತದೆ

ನಿರ್ವಹಣಾ ಕ್ರಮಗಳು:
- ರೋಗ ತಗುಲಿದ ಭಾಗವನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛಗೊಳಿಸಬೇಕು.
- ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಸೂಕ್ತ ಬಸಿಗಾಲುವೆ ವ್ಯವಸ್ಥೆ ಮಾಡುವುದು
- ಮರಗಳ ನಡುವೆ ಸರಿಯಾದ ಅಂತರವನ್ನು ಕಾಪಾಡಿಕೊಳ್ಳಿ.
- ಸ್ವಚ್ಛಗೊಳಿಸಿದ ಭಾಗಕ್ಕೆ ಪ್ರತಿ ಲೀಟರ್ ನೀರಿಗೆ 2.5 ಗ್ರಾಂ. ಮೆಟಲಾಕ್ಸಿಲ್ ಎಂ.ಝಡ್. ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಶೇ. 1ರ ಬೋರ್ಡೋ ದ್ರಾವಣವನ್ನು ತಯಾರಿಸಿ, ಸುಳಿ ಭಾಗಕ್ಕೆ ಹಾಕುವುದು.
- ಹೆಚ್ಚು ಮಳೆ ಬೀಳುವ ಪ್ರದೇಶವಾದ್ದಲ್ಲಿ ಶೇ.10ರ ಬೋರ್ಡೋ ಮುಲಾಮ್ ಲೇಪಿಸಬೇಕು ಅಥವಾ ಶೇ.3ರ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಸುಳಿ ಭಾಗಕ್ಕೆ ಇಡುವುದು.
- ಪ್ರತಿ ಮರಕ್ಕೆ ವರ್ಷಕ್ಕೆ 5 ಕಿ.ಗ್ರಾಂ. ಬೇವಿನ ಹಿಂಡಿ ಮತ್ತು 50 ಗ್ರಾಂ. ಟ್ರೈಕೋಡರ್ಮ ಜೈವಿಕ ಶಿಲೀಂದ್ರನಾಶಕ + 50 ಗ್ರಾಂ, ಸೂಡೋಮೊನಾಸ್ ಫ್ಲೋರೋಸೆನ್ಸ್ ಜೈವಿಕ ಪುಡಿಯನ್ನು 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಮರದ ಸುತ್ತಲೂ ಅಗೆದು ಮಣ್ಣಿಗೆ ಹಾಕುವುದು.
2. ಅಣಬೆ ರೋಗ (Ganoderma Wilt)
ಇತ್ತೀಚಿನ ವರ್ಷಗಳಲ್ಲಿ, ಕರ್ನಾಟದ ವಿವಿಧ ಜಿಲ್ಲೆಗಳಲ್ಲಿ ತೆಂಗು ಬೆಳೆಯಲ್ಲಿ ಅಣಬೆ ರೋಗ ವೇಗವಾಗಿ ಹರಡುತ್ತಿದೆ. ಮೊದಲ ರೋಗಲಕ್ಷಣ ಕಾಣಿಸಿಕೊಂಡ ತಕ್ಷಣ, ನಿರ್ವಹಣೆ ಶುರುಮಾಡಿದರೆ ಮಾತ್ರ, ಮರವನ್ನು ಉಳಿಸಲು ಸಾಧ್ಯ. ರೋಗ ಸುಳಿಗೆ ತಲುಪಿದರೆ ನಿರ್ವಹಣೆ ಕಷ್ಟವಾಗುತ್ತದೆ. ಹೀಗಾಗಿ ಶುರುಹಂತದಲ್ಲೇ ರೋಗನಿರ್ವಹಣೆ ಮಾಡಿದರೆ, ರೋಗ ನಿರ್ವಹಣೆಯಲ್ಲಿ ಯಶಸ್ಸು ಕಾಣಲು ಸಾಧ್ಯ.
ಹಾನಿಯ ಲಕ್ಷಣ:
- ರೋಗ ಬಂದಂತಹ ಗಿಡಗಳ ಕೆಳಭಾಗದ ಎಲೆಗಳು ಹಳದಿಯಾಗುತ್ತವೆ.
- ನಂತರ ಒಳಭಾಗದ ಎಲೆಗಳ ಮೇಲೂ ರೋಗ ಹರಡಿ ಎಲೆಗಳು ಜೋತು ಬೀಳುತ್ತವೆ.
- ರೋಗದ ತೀವ್ರತೆ ಹೆಚ್ಚಾದಲ್ಲಿ ಎಲೆಗಳು, ಹೂ ಮತ್ತು ಕಾಯಿಗಳು ಬೀಳುತ್ತವೆ. ಕೊನೆಯ ಹಂತದಲ್ಲಿ ಸುಳಿ ಸಣ್ಣದಾಗಿ ಗರಿಗಳಿಲ್ಲದೆ ಗಿಡ ಬೋಳಾಗಿ ಕಾಣುತ್ತದೆ.
- ಮರದ ಬುಡದ ಮೇಲಿಂದ 3-4 ಅಡಿ ಎತ್ತರದಲ್ಲಿ ಕಂದುಬಣ್ಣದ ಅಂಟು ದ್ರವ ಸೋರಲು ಪ್ರಾರಂಭವಾಗುತ್ತದೆ.
- ಅಂತಹ ಜಾಗಗಳಲ್ಲಿ ಅಣಬೆ ಶಿಲೀಂದ್ರ ಬೆಳೆಯುತ್ತದೆ. ರೋಗವು 40 ವರ್ಷ ಹಾಗೂ ಹೆಚ್ಚಿನ ವಯಸ್ಸಾದ ಮರಗಳಲ್ಲಿ ಹೆಚ್ಚು.

ನಿರ್ವಹಣಾ ಕ್ರಮಗಳು:
- ರೋಗದ ಸಮಗ್ರ ಹತೋಟಿಗೆ ಗಿಡಗಳ ವೀಕ್ಷಣೆ ಅತಿ ಮುಖ್ಯ ಹಾಗೂ ಮೊದಲಿನ ರೋಗ ಲಕ್ಷಣಗಳನ್ನು ಗಮನಿಸಿ, ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
- ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಸೂಕ್ತ ಬಸಿಗಾಲುವೆ ವ್ಯವಸ್ಥೆ ಮಾಡುವುದು. ಅಣಬೆ ರೋಗಕ್ಕೆ ತುತ್ತಾಗಿ ಸತ್ತ ಮರಗಳನ್ನು ತೆಗೆದು ಸುಡಬೇಕು. ಪ್ರತಿ ಮರಕ್ಕೆ ವರ್ಷಕ್ಕೆ 5 ಕಿ.ಗ್ರಾಂ. ಬೇವಿನ ಹಿಂಡಿ ಹಾಕಬೇಕು.
- ರೋಗವು ಒಂದು ಮರದಿಂದ ಮತ್ತೊಂದು ಮರಕ್ಕೆ ಬೇರುಗಳ ಮೂಲಕ ಹರಡುವುದರಿಂದ ಬೇರುಗಳ ಸಂಪರ್ಕ ತಪ್ಪಿಸಲು ರೋಗ ತಗುಲಿದ ಮರದ ಸುತ್ತಲೂ ಒಂದು ಅಡಿ ಅಗಲ ಮತ್ತು ಮೂರು ಅಡಿ ಆಳದ ಕಂದಕವನ್ನು ತೆಗೆದು ಪ್ರತಿ ಲೀ. ನೀರಿಗೆ 3 ಗ್ರಾಂ ಕಾಪರ್ ಅಕ್ಸಿ ಕ್ಲೋರೈಡ್ ಬೆರೆಸಿದ 10 ಲೀ. ದ್ರಾವಣವನ್ನು ಅಥವಾ ಶೇ. 1 ಬೋರ್ಡಾ ದ್ರಾವಣವನ್ನು ಕಂದಕದಲ್ಲಿ ಹಾಕಿ ನಂತರ ಮಣ್ಣು ಮುಚ್ಚುವುದು.
- ತೋಟದಲ್ಲಿ ಪದೇ ಪದೇ ಅಗೆತ ಮಾಡದೆ ಬೇರುಗಳಿಗೆ ಹಾನಿಯಾಗದಂತೆ ನೋಡಿ ಕೊಳ್ಳಬೇಕು.
- ರೋಗ ತಗುಲಿದ ತೋಟಗಳಲ್ಲಿ ಸಸಿಗಳನ್ನು ಬೆಳೆಸಿ ಬೇರೆ ಬೇರೆ ತೋಟಗಳಿಗೆ ವರ್ಗಾಯಿಸಬಾರದು.
- ಪ್ರತಿ ಮರಕ್ಕೆ 50 ಗ್ರಾಂ ಟ್ರೈಕೋಡರ್ಮ + 50 ಗ್ರಾಂ. ಸೂಡೋಮೊನಾಸ್ ಫ್ಲೋರೋಸೆನ್ಸ್ ಜೈವಿಕ ಶಿಲೀಂಧ್ರನಾಶಕಗಳನ್ನು 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಮರದ ಸುತ್ತಲೂ ತೆಗೆದು ಮಣ್ಣಿಗೆ ಹಾಕುವುದು. (ಪ್ರತೀ ಮರಕ್ಕೆ ಮೂರು ತಿಂಗಳಿಗೊಮ್ಮೆ ಹಾಕುವುದು).
- ರೋಗದ ಲಕ್ಷಣ ಕಂಡ ತಕ್ಷಣ ಪ್ರತಿ ಗಿಡಕ್ಕೆ 3 ಮಿ.ಲೀ. ಹೆಕ್ಸಾಕೋನಜೋಲ್ 5% EC ಶಿಲೀಂಧ್ರ ನಾಶಕವನ್ನು 100 ಮಿ.ಲೀ. ನೀರಿನಲ್ಲಿ ಬೆರೆಸಿ ಬೇರಿನ ಮುಖಾಂತರ ಮೂರು ತಿಂಗಳಿಗೊಮ್ಮೆ 2-3 ಬಾರಿ ರೋಗದ ತೀವ್ರತೆಗನುಗುಣವಾಗಿ ಕೊಡಬೇಕು.
ಸೂಚನೆ : ಶಿಲೀಂಧ್ರ ನಾಶಕ ಉಪಚರಿಸಿದ ಮೇಲೆ ಕನಿಷ್ಠ 45 ದಿನಗಳು ಕಾಯಿಗಳನ್ನು ಎಳನೀರಿಗಾಗಲಿ ಅಥವಾ ಅಡುಗೆಗಾಗಲೀ ಬಳಸಬಾರದು.
3.ಕಾಂಡ ಸೋರುವ ರೋಗ (Stem Bleeding)
ಹಾನಿಯ ಲಕ್ಷಣ:
- ಪ್ರಾರಂಭದಲ್ಲಿ ಕಾಂಡದ ಕೆಳಭಾಗದಲ್ಲಿ ಅಲ್ಲಲ್ಲಿ ಬಿರುಕುಗಳಾಗಿ ಗಾಯಗಳಾಗುವುವು.
- ಈ ಗಾಯಗಳಿಂದ ಕೆಂಪು ಮಿಶ್ರಿತ ಕಂದು ಬಣ್ಣದ ಅಂಟು ದ್ರವ ಸೋರುವುದು.
- ನಂತರ ಅಂಟು ದ್ರವ, ತೊಗಟೆಯ ಮೇಲೆ ಒಣಗಿ ಕಪ್ಪು ಬಣ್ಣಕ್ಕೆ ತಿರುಗುವುದು.
- ಈ ರೋಗಕ್ಕೆ ತುತ್ತಾದ ಮರಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಹೂವುಗಳು ಹಾಗೂ ಕಾಯಿಗಳು ಉದುರುತ್ತವೆ.
- ರೋಗ ತೀವ್ರವಾದಾಗ ಮರದ ಬೆಳವಣಿಗೆ ಕುಂಠಿತವಾಗಿ ಸುಳಿ ಸಣ್ಣದಾಗಿ ಇಳುವರಿ ಕಡಿಮೆಯಾಗುತ್ತದೆ.
- ಸರಿಯಾದ ನಿರ್ವಹಣೆ ಇಲ್ಲದ ತೋಟಗಳಲ್ಲಿ ಅದರಲ್ಲಿಯೂ ಮಣ್ಣಿನಲ್ಲಿ ಹೆಚ್ಚು ತೇವಾಂಶ, ಆಮ್ಮಿಯತೆ, ಅಸಮರ್ಪಕ ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಹಾಗೂ ವಾತಾವರಣದ ವೈಪರೀತ್ಯದಿಂದ ರೋಗದ ತೀವ್ರತೆ ಹೆಚ್ಚಾಗುತ್ತದೆ.

ನಿರ್ವಹಣಾ ಕ್ರಮಗಳು:
- ಮರಗಳಿಗೆ ಗಾಯಗಳಾಗದಂತೆ ಎಚ್ಚರಿಕೆ ವಹಿಸಬೇಕು.
- ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಸೂಕ್ತ ಬಸಿಗಾಲುವೆ ವ್ಯವಸ್ಥೆ ಮಾಡುವುದು.
- ಶಿಫಾರಸ್ಸು ಮಾಡಿರುವ ರಸಗೊಬ್ಬರಗಳ ಜೊತೆಗೆ ಪ್ರತಿ ಗಿಡಕ್ಕೆ 5 ಕಿ.ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಕೊಡುವುದರಿಂದ ಗಿಡಕ್ಕೆ ರೋಗ ತಡೆದುಕೊಳ್ಳುವ ಶಕ್ತಿ ಹೆಚ್ಚುತ್ತದೆ.
- ರಸ ಸೋರುವ ಪ್ರದೇಶವನ್ನು ಹರಿತವಾದ ಉಪಕರಣದಿಂದ ಕೆತ್ತಿ ನಂತರ ಕೆತ್ತಿದ ಭಾಗಕ್ಕೆ ಶೇ.10 ಬೋರ್ಡೋ ಮುಲಾಮ್ ಅಥವಾ ಶೇ. 3ರ ತಾಮ್ರದ ಆಕ್ಸಿಕ್ಲೋರೈಡ್ ಮುಲಾಮು ಹಚ್ಚುವುದು.
- ಪ್ರತಿ ಗಿಡಕ್ಕೆ 3 ಮಿ.ಲೀ. ಹೆಕ್ಸಾಕೊನಾಜಲ್ 5% SC ಶಿಲೀಂದ್ರನಾಶಕವನ್ನು 100 ಮಿ.ಲೀ. ನೀರಿನಲ್ಲಿ ಬೆರೆಸಿ ಬೇರಿನ ಮೂಲಕ ಕೊಡಬೇಕು. ಈ ರೀತಿ ಉಪಚಾರ 3 ತಿಂಗಳಿಗೊಮ್ಮೆ ವರ್ಷದಲ್ಲಿ 4 ಸಲ ಮಾಡುವುದು.
- ಸೂಚನೆ : ಶಿಲೀಂಧ್ರ ನಾಶಕ ಉಪಚರಿಸಿದ ಮೇಲೆ ಕನಿಷ್ಠ 45 ದಿನಗಳು ಕಾಯಿಗಳನ್ನು ಎಳನೀರಿಗಾಗಲಿ ಅಥವಾ ಅಡುಗೆಗಾಗಲೀ ಬಳಸಬಾರದು.
ಪ್ರಮುಖ ಸೂಚನೆ: ಈ ರೋಗಗಳ ನಿರ್ವಹಣೆಯಲ್ಲಿ ಒಂದು ಅಥವಾ ಎರಡು ವಿಧಾನಗಳ ಮೇಲೆ ಮಾತ್ರ ಅವಲಂಬಿತವಾಗದೆ, ಸಮಗ್ರ ವಿಧಾನಗಳನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ
4. ಎಲೆ ಚುಕ್ಕೆ ರೋಗ (Leaf spot/blight)
ಹಾನಿಯ ಲಕ್ಷಣ:
- ಪೆಸ್ಟರೋಷಿಯ ಪಾಮೇರಮ್ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ತೆಂಗು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿಯೂ ಕಂಡುಬರುತ್ತದೆ
- ಪ್ರಾರಂಭದಲ್ಲಿ ತೆಂಗಿನ ಮರದ ಹೊರಭಾಗದ ಬಲಿತ ಗರಿಗಳಲ್ಲಿ ಬೂದು ಬಣ್ಣದಿಂದ ಸುತ್ತುವರೆದ ಅತಿ ಚಿಕ್ಕ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
- ಈ ಚುಕ್ಕೆಗಳು ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ.
- ರೋಗದ ತೀವ್ರತೆ ಹೆಚ್ಚಾದಾಗ ಗರಿಗಳೆಲ್ಲಾ ಒಣಗಿಹೋಗಿ ಮರದ ಬೆಳವಣೆಗೆ ಹಾಗೂ ಕಾಯಿಗಳ ಇಳುವರಿಯ ಕುಂಠಿತವಾಗುತ್ತದೆ.
- ಮರವನ್ನು ದೂರದಿಂದ ನೋಡಿದಾಗ, ತೀವ್ರವಾಗಿ ಎಲೆಚುಕ್ಕೆ ರೋಗಕ್ಕೆ ಭಾದೆಗೊಳಗಾದ ಮರಗಳು ಮತ್ತು ಕಪ್ಪು ತಲೆ ಹುಳು ಭಾದಿತ ಮರಗಳು ನೋಡಲು ಒಂದೇ ತರಹ ಕಾಣುತ್ತವೆ. ಈ ಎರಡು ಪೀಡೆಗಳ ಭಾದಿತ ಮರಗಳ ಗರಿಗಳು ಒಣಗುತ್ತವೆ. ಹೀಗಾಗಿ ಹತ್ತಿರದಿಂದ ಪರಿಶೀಲಿಸಿ ಕೀಟ ಅಥವಾ ರೋಗದ ಭಾದೆಯನ್ನು ಗುರುತಿಸಬೇಕು.

ನಿರ್ವಹಣಾ ಕ್ರಮಗಳು:
- ತೀವ್ರವಾಗಿ ಬಾಧೆಗೊಳಗಾದ ಮರಗಳ ಗರಿಗಳನ್ನು ಕಿತ್ತು ಸುಡಬೇಕು.
- ಪ್ರತಿ ಮರಕ್ಕೆ ವರ್ಷಕ್ಕೆ 5 ಕಿ.ಗ್ರಾಂ. ಬೇವಿನ ಹಿಂಡಿ ಮತ್ತು 50 ಗ್ರಾಂ. ಟ್ರೈಕೋಡರ್ಮ ಜೈವಿಕ ಶಿಲೀಂದ್ರನಾಶಕ + 50 ಗ್ರಾಂ, ಸೂಡೋಮೊನಾಸ್ ಫ್ಲೋರೋಸೆನ್ಸ್ ಜೈವಿಕ ಪುಡಿಯನ್ನು 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ ಮರದ ಸುತ್ತಲೂ ಅಗೆದು ಮಣ್ಣಿಗೆ ಹಾಕುವುದು.
- ಮಣ್ಣಿನಲ್ಲಿ ಪೊಟ್ಯಾಸಿಯಂ ಪೋಷಕಾಂಶ ಕೊರತೆಯಾಗಿದ್ದರೆ, ಪ್ರತೀ ಮರಕ್ಕೆ, 2 ಕೆ.ಜಿ. ಪೊಟಾಷ್ ಗೊಬ್ಬರವನ್ನು ಎರಡು ಕಂತುಗಳಾಗಿ ಪ್ರತೀ ವರ್ಷ ಕೊಡುವುದು.
- ರೋಗದ ಲಕ್ಷಣ ಕಂಡು ಬಂದಾಗ 2 ಗ್ರಾಂ. ಮ್ಯಾಂಕೋಜೆಬ್ 75% WP ಅಥವಾ 3 ಗ್ರಾಂ, ತಾಮ್ರದ ಆಕ್ಸಿಕ್ಲೋರೈಡ್ 50% WP ಶಿಲೀಂಧ್ರನಾಶಕವನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಮೇಲೆ ಸಿಂಪಡಿಸಬೇಕು.
ಪ್ರಮುಖ ಸೂಚನೆ: ಈ ರೋಗಗಳ ನಿರ್ವಹಣೆಯಲ್ಲಿ ಒಂದು ಅಥವಾ ಎರಡು ವಿಧಾನಗಳ ಮೇಲೆ ಮಾತ್ರ ಅವಲಂಬಿತವಾಗದೆ, ಸಮಗ್ರ ವಿಧಾನಗಳನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ