High Yielding Cardamom Varieties in India
ಏಲಕ್ಕಿ ಬೆಳೆಯ ಇಳುವರಿಯನ್ನು ಹೆಚ್ಚಿಸಲು ಅಥವಾ ಹೆಚ್ಚಿನ ಪ್ರಮಾಣದ ಗಳಿಕೆಗಾಗಿ ಅನೇಕ ಸುಧಾರಿತ ಬೇಸಾಯ ಕ್ರಮಗಳು ಅತ್ಯವಶ್ಯಕವಾಗಿರುತ್ತವೆ. ಇವುಗಳಲ್ಲಿ ನೆರಳು ನಿಯಂತ್ರಣ, ನೀರಾವರಿ ಅನುಕೂಲ ವರಿತ ಬೇಸಿಗೆಯಲ್ಲಿ ನೀರು ನಿರ್ವಹಣೆ, ಸಮಯಕ್ಕೆ ಅನುಸಾರವಾಗಿ ಕೊಟ್ಟಿಗೆ ಹಾಗೂ ರಸಗೊಬ್ಬರಗಳ ನಿರ್ವಹಣೆ ಮುಖ್ಯವಾದವುಗಳು. ಹೆಚ್ಚಾಗಿ ವಿವಿಧ ಮರಗಳ ನೆರಳಡಿಯಲ್ಲಿ ಈ ಬೆಳೆಯನ್ನು ಕಾಣಬಹುದಾದರೂ ಅಡಿಕೆ, ತೆಂಗು ಹಾಗೂ ಇನ್ನಿತರ ತೋಟದ ಮಧ್ಯದಲ್ಲಿಯೂ ಕೂಡ ಇದರ ಬೇಸಾಯ ಸಾಮಾನ್ಯವಾಗಿದೆ. ಕ್ರಮಬದ್ಧ ಬೇಸಾಯದ ಸಮಗ್ರ ಚಿತ್ರಣವನ್ನು ಇಲ್ಲಿ ನೀಡಲಾಗಿದೆ.
1.ಹವಾಗುಣ ಮತ್ತು ಮಣ್ಣು :
ಸಾಮಾನ್ಯವಾಗಿ ಏಲಕ್ಕಿಯು ನಮ್ಮ ದೇಶದ ಪಶ್ಚಿಮ ಘಟ್ಟಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಾಣಸಿಗುತ್ತವೆ. ಏಲಕ್ಕಿಯು ಉಪ ಉಷ್ಣವಲಯದ ಬೆಳೆಯಾಗಿದ್ದಾಗಿಯೂ, ನೆರಳಿನಡಿಯಲ್ಲಿ ತಂಪಾಗಿರುವ ಪ್ರದೇಶಗಳು ಮಾತ್ರ ಈ ಬೆಳೆಗೆ ಉತ್ತಮ. ದಕ್ಷಿಣ ಭಾರತದಲ್ಲಿ 8° – 15° ಉತ್ತರ ಅಕ್ಷಾಂಶ ಮತ್ತು 75°- 78° ಪೂರ್ವ ರೇಖಾಂಶದಲ್ಲಿ ಸಣ್ಣ ಏಲಕ್ಕಿ ಬೆಳೆ ಹರಡಿದೆ. ಸಮುದ್ರಮಟ್ಟದಿಂದ ಸುಮಾರು 600 ರಿಂದ 1500 ಮೀಟರ್ ಎತ್ತರದ ಪ್ರದೇಶಕ್ಕೆ ಈ ಬೆಳೆ ಸೂಕ್ತವಾಗಿದ್ದಾಗಿಯೂ, ಉತ್ತಮ ಇಳುವರಿಯನ್ನು 900 ರಿಂದ 1300 ಮೀಟರ್ ಎತ್ತರದ ಪ್ರದೇಶಗಳಲ್ಲಿ ಹೊಂದಲು ಸಾಧ್ಯ. ಸಮುದ್ರಮಟ್ಟದಿಂದ 600 ಮೀಟರ್ ಗಳಿಗಿಂತ ಕಡಿಮೆ ಇದ್ದಲ್ಲಿ ಬೆಳವಣಿಗೆ ಚೆನ್ನಾಗಿ ಬಂದರೂ ಕಾಯಿ ಬಿಡುವುದು ಅತಿ ವಿರಳ. ಅಂತೆಯೇ 1500 ಮೀಟರ್ ದಾಟಿದಲ್ಲಿ ಬೆಳವಣಿಗೆ ಮತ್ತು ಕಾಯಿ ಕಟ್ಟುವಿಕೆ ಎರಡರಲ್ಲೂ ಕುಂಠಿತವಾಗುತ್ತದೆ. ಅತಿ ಇಳಿಜಾರು ಪ್ರದೇಶಗಳು ಅನಾವೃಷ್ಟಿ ಮತ್ತು ಸಾಕಷ್ಟು ನೆರಳಿಲ್ಲದ ಜಾಗಗಳಲ್ಲಿ ಏಲಕ್ಕಿ ಬೆಳೆಯಲಾಗದು. ಬೆಳೆಗೆ ಉಷ್ಣಾಂಶ 10° ಯಿಂದ 35 ಡಿಗ್ರಿ ಸೆಲ್ಸಿಯಸ್ ಸಹಕಾರಿಯಾಗುತ್ತದೆ.
ಮಳೆಯ ಪ್ರಮಾಣ ನಿರಂತರ ಆರು ತಿಂಗಳವರೆಗೆ 150 cm ವರೆಗೆ ಸಮನಾಗಿ ಬಂದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ. ಅತಿ ಹೆಚ್ಚು ಇಳುವರಿಯನ್ನು ವರ್ಷದ ಎಲ್ಲಾ ತಿಂಗಳು ಮಳೆ ಬೀಳುವ ಪ್ರದೇಶಗಳು ಮತ್ತು ಉಷ್ಣಾಂಶ 17 ರಿಂದ 25 ಡಿಗ್ರಿ ಸೆಲ್ಸಿಯಸ್ ಇರುವಲ್ಲಿ ಏಲಕ್ಕಿ ಬೆಳೆ ಚೆನ್ನಾಗಿ ಬೆಳೆಯುತ್ತದೆ. ಉಷ್ಣ ಪ್ರದೇಶದ ಹೆಚ್ಚು ಕಾಲ ಒದ್ದೆಯಾಗಿರುವ, ಆದ್ರತೆ ಉಳ್ಳ ಪ್ರದೇಶಗಳು ಅತಿ ಸೂಕ್ತ. ಅಂತೇಯೇ ನೀರಿಲ್ಲದ ಒಣ ಪ್ರದೇಶ, ಜೌಗು ಪ್ರದೇಶ, ಅತಿ ಗಾಳಿ ಇರುವ ಪ್ರದೇಶಗಳು ಸೂಕ್ತವಲ್ಲ.
ಕರ್ನಾಟಕದಲ್ಲಿ ಏಲಕ್ಕಿ ಬೆಳೆ 75 ರಿಂದ 80 ಭಾಗ ಮಳೆಯಾಶ್ರಿತವಾಗಿದೆ. ಘಟ್ಟ ಪ್ರದೇಶದ ಪೂರ್ವ ಭಾಗದಲ್ಲಿ ಬೇಸಿಗೆಯ ಉಷ್ಣಾಂಶ 30° ಸೆಲ್ಸಿಯಸ್ ಗಿಂತ ಹೆಚ್ಚಾಗುತ್ತದೆ. ಗಾಳಿ ಜಾಸ್ತಿ ಇದ್ದು ಮೋಡಕವಿದ ವಾತಾವರಣವಿರುತ್ತದೆ. ಮಳೆಗಾಲದಲ್ಲಿ ಆಗಾಗ್ಗೆ ಮಳೆ ಇಲ್ಲದಿರುವಿಕೆ ಹಾಗೂ ಕಡಿಮೆ ತೇವಾಂಶದಿಂದಾಗಿ ಇಲ್ಲಿನ ಬೆಳೆ ಮೇಲೆ ಪರಿಣಾಮ ಬೀರುತ್ತದೆ. ಘಟ್ಟ ಪ್ರದೇಶದ ಪಶ್ಚಿಮ ಭಾಗದಲ್ಲಿ ಅತಿವ ಗಾಳಿ ಮತ್ತು ಮಳೆ ಹೆಚ್ಚಿರುತ್ತದೆ. ಈ ಘಟ್ಟ ಪ್ರದೇಶಗಳು ಸಾಮಾನ್ಯವಾಗಿ ಹುಳಿ ಮಣ್ಣುಗಳಾಗಿದ್ದು ನಿರಂತರ ಮಳೆಯಿಂದ ಇದರ ಪೋಷಕಾಂಶಗಳ ಪ್ರಮಾಣ ಅತಿ ಕಡಿಮೆಯಾಗಿರುತ್ತದೆ. ಆದರೆ ಮಣ್ಣುಗಳು ನೆರಳು ಮರಗಳ ಎಲೆ, ತರಗು ಮತ್ತು ಕಡ್ಡಿ ಕೊಳೆಯುವಿಕೆಯಿಂದಾಗಿ ತೇವಾಂಶ ಮತ್ತು ಫಲವತ್ತತೆ ಗಳಿಸಿಕೊಂಡಿರುತ್ತವೆ.
2. ತಳಿಗಳು :
ಏಲಕ್ಕಿಯ ಎಲ್ಲೆಟೇರಿಯ ವರ್ಗದಲ್ಲಿ ಮೂರು ವಿವಿಧ ಉಪ ವರ್ಗಗಳನ್ನು ಗುರುತಿಸಲಾಗಿದ್ದು ಇವು ಆಯಾ ಪ್ರದೇಶದ ಹವಾಮಾನ, ಮಣ್ಣು ಮತ್ತು ಇತರೆ ಬೇಸಾಯ ಪದ್ಧತಿಗಳಿಗೆ ಹೊಂದಿಕೊಂಡು ಅಧಿಕ ಇಳುವರಿ ಕೊಡಬಲ್ಲವೂ. ಮಲಬಾರ್, ಮೈಸೂರ್, ವಳುಕ್ಕ, ಹೀಗೆ ಮೂರು ಉಪ ವರ್ಗಗಳನ್ನು ಎಲ್ಲೆಟೇರಿಯ ಹೊಂದಿದ್ದು, ಕರ್ನಾಟಕದಲ್ಲಿ ಮಲಬಾರ್ ವರ್ಗಕ್ಕೆ ಸೇರಿದ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ರಾಜ್ಯದ ಕೃಷಿ ವಿಶ್ವವಿದ್ಯಾಲಯದಿಂದ ಮಲೆನಾಡು ಭಾಗದ ಬೆಳೆಗಾರರಿಗೆ ಮಲಬಾರ್ ವರ್ಗಕ್ಕೆ ಸೇರಿದ ಮೂಡಿಗೆರೆ-1 (M-1), ಮೂಡಿಗೆರೆ-2 (M-2) ಹಾಗೂ ಮೂಡಿಗೆರೆ-3 (M-3) ತಳಿಗಳನ್ನು 1984, 1993 ಹಾಗೂ 1909ರಲ್ಲಿ ಬಿಡುಗಡೆ ಮಾಡಲಾಯಿತು.
ಸಂಬಾರ ಮಂಡಳಿ, ಸಕಲೇಶಪುರದಿಂದ ಎಸ್. ಕೆ .ಪಿ.-14 (SKP-14) ಹಾಗೂ ಕೊಡಗಿನ ಅಪ್ಪಂಗಲದಿಂದ ಸಿಸಿಎಸ್-1 (CCS-1), ಆರ್ ಆರ್-1 (RR-1) ಮತ್ತು ಎನ್ ಕೆ-12 (NK-12) ತಳಿಗಳು ಮಲೆನಾಡು ಪ್ರದೇಶದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿವೆ. ಇತ್ತೀಚೆಗೆ ವಳುಕ್ಕ ಉಪ ವರ್ಗಕ್ಕೆ ಸೇರಿದ ನೆಲ್ಯಾಣಿ ಗ್ರೀನ್ ಗೋಲ್ಡ್ (Nelyani Green Gold) ಎಂಬ ತಳಿಯನ್ನು ಕೂಡ ಕೆಲವು ಬೆಳೆಗಾರರು ಬೆಳೆಯುತ್ತಿದ್ದಾರೆ. ವಳುಕ್ಕ ಉಪ ವರ್ಗಕ್ಕೆ ಸೇರಿದ ಇತರ ಗೋಲ್ಡ್, ಕಾರ್ಡಮಂ ವಂಡರ್, ಪನಿಕುಲಂಗರ – ನಂ.1, ವ್ಯಾಲಿ ಗ್ರೀನ್ ಗೋಲ್ಡ್, ಪಲಕುಜಿ ಗ್ರೀನ್, ಇನ್ನು ಮುಂತಾದ ತಳಿಗಳು ಕೇರಳದಲ್ಲಿ ಇವೆ.
i) ಮೂಡಿಗೆರೆ-1 (M-1) :
ಈ ತಳಿಯನ್ನು ಮೂಡಿಗೆರೆ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿದೆ. ಇದನ್ನು 1984ರಲ್ಲಿ ಬಿಡುಗಡೆ ಮಾಡಲಾಯಿತು. ಇದು ನಿರ್ಲಿಂಗಾಭಿವೃದ್ಧಿಯಿಂದ ಬಂದ ತಳಿ. ಈ ತಳಿ 3 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದರ ಕಂದುಗಳು ಹಸಿರಾಗಿದ್ದು, ಎಲೆಗಳ ಕೆಳಭಾಗ ರೋಮಯುಕ್ತವಾಗಿದೆ. ಹೂವಿನ ಗೊಂಚಲು ಅರ್ಧ ಮೀಟರ್ ನಷ್ಟು ಉದ್ದ ಬೆಳೆಯುತ್ತದೆ ಹಾಗೂ ಇದರಲ್ಲಿ ಗಿಣ್ಣುಗಳು ಒತ್ತಾಗಿದ್ದು, ಇದರಿಂದ ಪ್ರತಿ ಹೂವಿನ ಗೊಂಚಲಿನಲ್ಲಿ ಕಾಯಿಗಳು ಹೊತ್ತಾಗಿ ಬರುತ್ತವೆ. ಕಾಯಿಗಳು ದುಂಡಾಗಿದ್ದು ಮಧ್ಯದ ಗಾತ್ರದಲ್ಲಿರುತ್ತವೆ. ಬೀಜದಲ್ಲಿ ತೈಲದ ಪ್ರಮಾಣ 7-8% ಇದ್ದು, ಸಿನಿಯೋಲ್, ಟರ್ ಫಿನೈಲ್ ಮತ್ತು ಓಲಿಯೋ ರೆಜಿನ್ ಅಂಶಗಳು ಕ್ರಮವಾಗಿ ಶೇಕಡ 50 ,37 ಮತ್ತು 15 ಗಳಷ್ಟಿರುತ್ತವೆ.
| ತಳಿ | M-1 |
| ಬೀಜದಲ್ಲಿ ತೈಲದ ಪ್ರಮಾಣ | 7-8% |
| ಸಿನಿಯೋಲ್ | 50% |
| ಟರ್ ಫಿನೈಲ್ | 37% |
| ಓಲಿಯೋ ರೆಜಿನ್ | 15% |
| ಇಳುವರಿ | 275 ಕೆ.ಜಿ/ಹೆಕ್ಟೇರ್ |
ii) ಮೂಡಿಗೆರೆ 2 (M-2):
ಈ ತಳಿಯನ್ನು ಮುಡಿಗೆರೆ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿದೆ. ಇದನ್ನು 1993ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಕೂಡ ನಿರ್ಲಿಂಗಾಭಿವೃದ್ಧಿಯಿಂದ ಬಂದ ತಳಿ. ಈ ತಳಿ 3 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಮೂಡಿಗೆರೆ-1 ತಳಿಗಿಂತ ಹೆಚ್ಚು ಕಂದುಗಳು ಬರುತ್ತವೆ ಹಾಗೂ ನೋಡಲು ದಪ್ಪವಾಗಿರುತ್ತವೆ. ಎಲೆಗಳ ಕೆಳಭಾಗ ರೋಮರಹಿತವಾಗಿರುತ್ತವೆ. ಹೂವಿನ ಗೊಂಚಲು ಒಂದು ಮೀಟರ್ ನಷ್ಟು ಉದ್ದ ಬೆಳೆಯುತ್ತದೆ ಹಾಗೂ ಇದರಲ್ಲಿ ಗಿಣ್ಣುಗಳು ಒತ್ತಾಗಿರುವುದಿಲ್ಲ. ಆದರೆ ಪ್ರತಿ ಗೆಣ್ಣಿನಲ್ಲಿ ಹೂವುಗಳು ಒತ್ತಾಗಿದ್ದು ಗೊಂಚಲಿನಲ್ಲಿ ಕಾಯಿಗಳು ಒತ್ತಾಗಿ ಬರುತ್ತವೆ. ಕಾಯಿಗಳು ದುಂಡಾಗಿದ್ದು ಮಧ್ಯಮ ಗಾತ್ರದಲ್ಲಿರುತ್ತವೆ. ಬೀಜದಲ್ಲಿ ತೈಲದ ಪ್ರಮಾಣ ಶೇಖಡ 8ರಷ್ಟಿದ್ದು, ಸಿನಿಯೋಲ್, ಟರ್ ಫಿನೈಲ್ ಮತ್ತು ಓಲಿಯೋ ರೆಜಿನ್ ಅಂಶಗಳು ಕ್ರಮವಾಗಿ ಶೇಕಡ 45, 38 ಮತ್ತು 11ರಷ್ಟಿರುತ್ತದೆ.
| ತಳಿ | M-2 |
| ಬೀಜದಲ್ಲಿ ತೈಲದ ಪ್ರಮಾಣ | 8% |
| ಸಿನಿಯೋಲ್ | 45% |
| ಟರ್ ಫಿನೈಲ್ | 38% |
| ಓಲಿಯೋ ರೆಜಿನ್ | 11% |
| ಇಳುವರಿ | 476 ಕೆ.ಜಿ/ಹೆಕ್ಟೇರ್ |
iii) ಮೂಡಿಗೆರೆ 3 (M-3):
ಈ ತಳಿಯನ್ನು ಮೂಡಿಗೆರೆ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿದೆ. ಇದನ್ನು 2009ರಲ್ಲಿ ಬಿಡುಗಡೆ ಮಾಡಲಾಯಿತು. ಇದು ಕೂಡ ನಿರ್ಲಿಂಗಾಭಿವೃದ್ಧಿಯಿಂದ ಬಂದ ತಳಿ. ಬಹುತೇಕ ಮೂಡಿಗೆರೆ-2 ತಳಿಯನ್ನೇ ಹೋಲುವ ಈ ತಳಿಯಿಂದ ಹೆಕ್ಟರ್ ಗೆ 350 ರಿಂದ 400 ಕೆ.ಜಿ. ಏಲಕ್ಕಿ ಹಣ್ಣು ಪಡೆಯಬಹುದಾಗಿದೆ. ಕಾಯಿಗಳು ದೀರ್ಘಾಯುತವಾಗಿದ್ದು, ಮಧ್ಯಮ ಗಾತ್ರದಲ್ಲಿರುತ್ತವೆ. ಬೀಜದಲ್ಲಿ ತೈಲದ ಪ್ರಮಾಣ ಶೇಖಡಾ 6.8 ರಷ್ಟಿದ್ದು, ಸೀನಿಯೋಲ್, ಟರ್ ಪಿನೈಲ್ ಮತ್ತು ಓಲಿಯೋ ರೆಜಿನ್ ಅಂಶಗಳು ಕ್ರಮವಾಗಿ 45%, 44% ಮತ್ತು 9% ಇರುತ್ತವೆ.
| ತಳಿ | M-3 |
| ಬೀಜದಲ್ಲಿ ತೈಲದ ಪ್ರಮಾಣ | 6.8 % |
| ಸಿನಿಯೋಲ್ | 45 % |
| ಟರ್ ಫಿನೈಲ್ | 44 % |
| ಓಲಿಯೋ ರೆಜಿನ್ | 9 % |
| ಇಳುವರಿ | 490 ಕೆ.ಜಿ/ಹೆಕ್ಟೇರ್ |
iv) ಎಸ್ ಕೆ ಪಿ 14 (ಐಸಿ ಆರ್ ಐ 3) / SKP-14 :
ಇದು ಸಂಬಾರ ಮಂಡಳಿ, ಸಕಲೇಶಪುರದಿಂದ ಅಭಿವೃದ್ಧಿ ಹೊಂದಿದ ತಳಿ. ಇದು ಕೂಡ ನಿರ್ಲಿಂಗಾಭಿವೃದ್ಧಿಯಿಂದ ಬಂದ ತಳಿ ಹಾಗೂ 2.5 ರಿಂದ 3 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಇದರ ಹುಸಿ ಕಾಂಡಗಳು ಹಸಿರಾಗಿದ್ದು, ಭೂಮಿಯಿಂದ ಸ್ವಲ್ಪ ಓರೆಯಾಗಿ ಬೆಳೆಯುತ್ತವೆ. ಇದರಿಂದ ಸ್ವಲ್ಪ ಜಾಸ್ತಿ ಜಾಗ ಹಿಡಿದಂತೆ ಭಾಸವಾಗುತ್ತದೆ. ಕಾಯಿಗಳು ದಪ್ಪವಾಗಿ ದೀರ್ಘಾಯುತದಿಂದ ದುಂಡಾಗಿದ್ದು, ಮಧ್ಯಮದಿಂದ ಹೆಚ್ಚು ಗಾತ್ರ ಹೊಂದಿವೆ.
| ತಳಿ | SKP-14 |
| ಬೀಜದಲ್ಲಿ ತೈಲದ ಪ್ರಮಾಣ | 6.6 % |
| ಇಳುವರಿ | 599 ಕೆ.ಜಿ/ಹೆಕ್ಟೇರ್ |
v) ಸಿ ಸಿ ಎಸ್ 1(ಐ ಐ ಎಸ್ ಆರ್_ ಸುಹಾಸಿನಿ) / IISR Suhasini :
ಇದು ಕೊಡಗಿನ ಅಪ್ಪಂಗಳದಿಂದ ಅಭಿವೃದ್ಧಿ ಹೊಂದಿದ ತಳಿ. ಈ ತಳಿ ಪ್ರದೇಶವಾರು ಹೆಚ್ಚಿನ ಸಂಖ್ಯೆಯ ಗಿಡಗಳನ್ನು ಹಾಕಲು ಸೂಕ್ತವಾಗಿದೆ. ಉದ್ದವಾದ ಪುಷ್ಪಮಂಜರಿಗಳಿದ್ದು, ದಪ್ಪವಾದ ದೀರ್ಘಾಯುತವಾದ ಕಾಯಿಗಳನ್ನು ಹೊಂದಿವೆ.
| ತಳಿ | IISR Suhasini |
| ಬೀಜದಲ್ಲಿ ತೈಲದ ಪ್ರಮಾಣ | 8.7 % |
| ಇಳುವರಿ | 400 ಕೆ.ಜಿ/ಹೆಕ್ಟೇರ್ |
vi) ಆರ್ ಆರ್ 1(ಐ ಐ ಎಸ್ ಆರ್– ಅವಿನಾಶ್) / IISR Avinash :
ಇದು ಕೂಡ ಕೊಡಗಿನ ಅಪ್ಪಂಗಳದಿಂದ ಅಭಿವೃದ್ಧಿ ಹೊಂದಿದ ತಳಿ. ಇದು ಗಡ್ಡೆ ಕೊಳೆ ರೋಗ ನಿರೋಧಕ ಶಕ್ತಿ ಹೊಂದಿದೆ. ಅಂತಹ ಪ್ರದೇಶದಿಂದ ಆಯ್ದ ತಳಿಯಾಗಿದೆ.
| ತಳಿ | IISR Avinash |
| ಬೀಜದಲ್ಲಿ ತೈಲದ ಪ್ರಮಾಣ | 6.7 % |
| ಇಳುವರಿ | 960 ಕೆ.ಜಿ/ಹೆಕ್ಟೇರ್ |
vii) ಎನ್ ಕೆ ಇ 12 (ಐ ಐ ಎಸ್ ಆರ್ –ವಿಜೇತ) / IISR Vijetha :
ಇದು ಕೂಡ ಕೊಡಗಿನ ಅಪ್ಪಂಗಳದಿಂದ ಅಭಿವೃದ್ಧಿ ಹೊಂದಿದ ತಳಿ. ಇದು ನೆರಳು ಅತಿ ಹೆಚ್ಚು ಇರುವ ಪ್ರದೇಶಕ್ಕೆ ಸೂಕ್ತವಾಗಿದೆ. ಇದರ ಕಾಯಿಗಳು ದೀರ್ಘಾಯುತವಾಗಿವೆ. ಇದು ಕಟ್ಟೆ ಅಥವಾ ಮೊಜಾಯಿಕ್ ನಂಜಾಣು ರೋಗ ನಿರೋಧಕ ಶಕ್ತಿ ಹೊಂದಿದೆ.
| ತಳಿ | IISR Vijetha |
| ಬೀಜದಲ್ಲಿ ತೈಲದ ಪ್ರಮಾಣ | 7.9 % |
| ಇಳುವರಿ | 643 ಕೆ.ಜಿ/ಹೆಕ್ಟೇರ್ |
viii) ಐಸಿ ಆರ್ ಐ 1 (ICRI-1) :
ಇದು ಸಂಬಾರ ಮಂಡಳಿಯ ಕೊಡುಗೆ. ಕೇರಳದ ಮೈಲಾಡಂಪಾರದಿಂದ ಅಭಿವೃದ್ಧಿ ಹೊಂದಿದ ತಳಿ. ಇದು ಬೇಗ ಮಾಗುವ ತಳಿಯಾಗಿದ್ದು, ಗಿಣ್ಣುಗಳಲ್ಲಿ ಹೂವುಗಳು ಒತ್ತಾಗಿ ಬರುತ್ತವೆ. ಪುಷ್ಪ ಮಂಜರಿಗಳ ಗೊಂಚಲಿನ ಉದ್ದ ಮಧ್ಯಮ ವಾಗಿದ್ದು, ಗೋಳಾಕಾರದ ದಪ್ಪವಾದ ಹಸಿರು ಕಾಯಿಗಳನ್ನು ಹೊಂದಿರುತ್ತವೆ.
| ತಳಿ | ICRI-1 |
| ಬೀಜದಲ್ಲಿ ತೈಲದ ಪ್ರಮಾಣ | 8.3 % |
| ಇಳುವರಿ | 656 ಕೆ.ಜಿ/ಹೆಕ್ಟೇರ್ |
ix) ಐಸಿಆರ್ ಐ-4 (ICRI-4):
ಇದೂ ಕೂಡ ಕೇರಳದ ಮೈಲಾಡಂಪಾರದಿಂದ ಅಭಿವೃದ್ಧಿ ಹೊಂದಿದ ತಳಿ. ಇದು ಸಹ ಬೇಗ ಮಾಗುವ ತಳಿಯಾಗಿದ್ದು ಕಡಿಮೆ ಮಳೆ ಬೀಳುವ ಪ್ರದೇಶಗಳಿಗೆ ಸೂಕ್ತವಾಗಿದೆ. ರೋಮವಿಲ್ಲದ ಎಲೆಗಳನ್ನು ಹೊಂದಿದ್ದು, ಪುಷ್ಪಮಂಜರಿಗಳ ಗೊಂಚಲಿನ ಸಂಖ್ಯೆ ಮಧ್ಯಮ ಸಂಖ್ಯೆಯಲ್ಲಿದ್ದು, ಗೋಳಾಕಾರದ ದಪ್ಪವಾದ ಗಿಳಿ ಹಸಿರು ಕಾಯಿಗಳನ್ನು ಹೊಂದಿರುತ್ತದೆ.
| ತಳಿ | ICRI-4 |
| ಬೀಜದಲ್ಲಿ ತೈಲದ ಪ್ರಮಾಣ | 6.4 % |
| ಇಳುವರಿ | 456 ಕೆ.ಜಿ/ಹೆಕ್ಟೇರ್ |
x) ಪಿ ವಿ-1 (PV-1) :
ಇದು ಕೇರಳ ಕೃಷಿ ವಿಶ್ವವಿದ್ಯಾನಿಲಯದ ಪಂಪಡಂಪಾರದಿಂದ ಅಭಿವೃದ್ಧಿ ಹೊಂದಿದ ತಳಿ. ಇದು ಕೂಡ ಬೇಗ ಮಾಗುವ ತಳಿಯಾಗಿದ್ದು, ಪುಷ್ಪ ಮಂಜರಿ ಕಡಿಮೆ ಉದ್ದ ಹೊಂದಿದ್ದು, ಗೆಣ್ಣುಗಳು ಒತ್ತಾಗಿರುತ್ತವೆ. ಕೊಂಚ ಬಾಗಿದ ತಿಳಿ ಹಸಿರು ಬಣ್ಣದ ಅಂಡಾಕಾರದ ಕಾಯಿಗಳನ್ನು ಹೊಂದಿರುತ್ತದೆ.
| ತಳಿ | PV-1 |
| ಬೀಜದಲ್ಲಿ ತೈಲದ ಪ್ರಮಾಣ | 6.8 % |
| ಇಳುವರಿ | 260 ಕೆ.ಜಿ/ಹೆಕ್ಟೇರ್ |
xi) ಪಿ ವಿ-2 (PV-2) :
ಇದು ಕೂಡ ಕೇರಳದ ಪಂಪಡಂಪಾರದಿಂದ ಅಭಿವೃದ್ಧಿ ಹೊಂದಿದ ತಳಿ. ಇದು ಪಿ.ವಿ-1 ತಳಿಯ ತೆರೆದ ಪರಾಗಸ್ಪರ್ಶದಿಂದ ರೂಪಗೊಂಡ ತಳಿ. ಇದು ಬೇಗ ಮಾಗುವ ತಳಿಯಾಗಿದ್ದು, ಗೋಳಾಕಾರದ ದಪ್ಪವಾದ ಹಸಿರು ಕಾಯಿಗಳನ್ನು ಹೊಂದಿರುತ್ತದೆ. ಹಸಿ ಕಾಯಿಗಳನ್ನು ಒಣಗಿಸಿದಾಗ, ಲಭ್ಯವಾಗುವ ಒಣ ಕಾಯಿಗಳ ಪ್ರಮಾಣ ಉಳಿದ ತಳಿಗಳಿಗಿಂತ ಅಧಿಕವಾಗಿರುತ್ತದೆ. ಈ ತಳಿ ತ್ರಿಪ್ಸ್, ಕಾಯಿ ಮತ್ತು ತೆಂಡೆ ಕೊಳೆ ರೋಗಗಳಿಗೆ ನಿರೋಧಕ ಶಕ್ತಿ ಹೊಂದಿದೆ ಎನ್ನಲಾಗಿದೆ.
| ತಳಿ | PV-2 |
| ಬೀಜದಲ್ಲಿ ತೈಲದ ಪ್ರಮಾಣ | 10.5 % |
| ಇಳುವರಿ | 982 ಕೆ.ಜಿ/ಹೆಕ್ಟೇರ್ |
xii) ಪಿ -6 (P-6) :
ಇದು ಬೇಸಿಗೆಯಲ್ಲಿ ನೀರಿಲ್ಲದಿದ್ದರೂ, ಶುಷ್ಕ ಹವಾಮಾನವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುವ ತಳಿಯಾಗಿದೆ.
xiii) ನೆಲ್ಯಾಣಿ /Njallani Green Gold :
ಇದು ವಳುಕ್ಕ ಉಪ ವರ್ಗಕ್ಕೆ ಸೇರಿದ ತಳಿ. ಕೇರಳದಲ್ಲಿ ಅತ್ಯಂತ ಹೆಚ್ಚಿನ ಇಳುವರಿ ಯನ್ನು ಕೊಡುತ್ತಿರುವ ತಳಿ. ಅತೀ ಹೆಚ್ಚು ಕಾಂಡಗಳನ್ನು ಹೊಂದಿದೆ. ಕಾಯಿಗಳು ದಪ್ಪ & ದುಂಡಾಗಿದ್ದು, ಆಕರ್ಷಕ ಹಸಿರು ಬಣ್ಣದಲ್ಲಿ ಇರುತ್ತವೆ. ಇತ್ತೀಚೆಗೆ ಈ ತಳಿಯನ್ನು ಕರ್ನಾಟಕದಲ್ಲಿ ಕೆಲವರು ಕೆಲವು ವರ್ಷಗಳಿಂದ ಬೆಳೆಯುತ್ತಿದ್ದಾರೆ.
| ತಳಿ | Njallani Green Gold |
| ಇಳುವರಿ | 3000 ಕೆ.ಜಿ/ಹೆಕ್ಟೇರ್ |