Tomato : Pest and Diseases and thier Integrated Management
ಟೊಮ್ಯಾಟೊ ಕರ್ನಾಟಕ ರಾಜ್ಯದ ಜನಪ್ರೀಯ ತರಕಾರಿಯಾಗಿದೆ. ಈ ತರಕಾರಿಯು ಎ, ಬಿ ಹಾಗೂ ಸಿ ಜೀವಸತ್ವಗಳನ್ನು ಒದಗಿಸುತ್ತದೆ. ಇದನ್ನು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಗೋಡುಮಣ್ಣು ಈ ಬೆಳೆಗೆ ಸೂಕ್ತ. ತಗ್ಗುಪ್ರದೇಶ, ನೀರು ನಿಲ್ಲುವ ಮತ್ತು ಆಮ್ಲಯುಕ್ತ ಮಣ್ಣಿನ ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ. ಉತ್ತಮ ಬೆಳೆಗೆ ಮಣ್ಣಿನ ರಸಸಾರ 6 ರಿಂದ 7 ಇರಬೇಕು. ಸೊರಗು ರೋಗಪೀಡಿತ ಮಣ್ಣು ಸೂಕ್ತವಲ್ಲ .ಹೆಚ್ಚು ಮಳೆ ಬೀಳುವ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಬೆಳೆ ಉತ್ತಮ ಇಳುವರಿ ಕೊಡುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಬದಲಾದ ಬೆಳೆ ಪದ್ಧತಿಯಿಂದ ಟೊಮ್ಯಾಟೊದ ಬೆಳೆಯಲ್ಲಿ ಕೀಟಗಳ ಬಾಧೆ ಹೆಚ್ಚಾಗಿ ಕಂಡುಬರುತ್ತಿದ್ದು ರೈತರಲ್ಲಿ ಆತಂಕ ಮೂಡಿಸುತ್ತಿದೆ. ಅತಿಯಾದ ರಸಗೊಬ್ಬರ ಪೂರೈಕೆ, ನೀರಿನ ಅಸಮರ್ಪಕ ನಿರ್ವಹಣೆ, ಅಧಿಕ ಇಳುವರಿ ಕೊಡುವ ಕಡಿಮೆ ಸಹಿಷ್ಣುತೆಯುಳ್ಳ ತಳಿಗಳ ಬಳಕೆ, ಅವೈಜ್ಞಾನಿಕ ರಸಾಯನಿಕ ಕೀಟನಾಶಕಗಳ ಬಳಕೆಗಳಿಂದ ಕೀಟಬಾಧೆಗೆ ಪ್ರಮುಖ ಕಾರಣಗಳು. ಈ ನಿಟ್ಟಿನಲ್ಲಿ ಕೀಟನಾಶಕಗಳಿಂದಾಗುವ ದುಷ್ಪರಿಣಾಮಗಳು ಹಾಗೂ ಅವುಗಳ ಪರಿಹಾರಕ್ಕಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ಆದ್ದರಿಂದ ಟೊಮ್ಯಾಟೊದಲ್ಲಿ ಕಂಡುಬರುವ ಪ್ರಮುಖ ರೋಗ/ಕೀಟಬಾಧೆಯ ಬಗ್ಗೆ ಅರಿತು ಕೆಳಕಂಡ ಸಮಗ್ರ ಪೀಡೆ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಸೂಕ್ತ.
I. ರೋಗಗಳು :
1. ಬೂದಿ ರೋಗ (Powdery mildew) :
ರೋಗಾಣು: ಲೆವಿಲ್ಲುಲಾ ಟೌರಿಕಾ (Leveillula taurica)
ರೋಗಾಣು ವಿಧ: ಶಿಲೀಂಧ್ರ (Fungus)
ಹಾನಿಯ ಲಕ್ಷಣ: ಎಲೆಗಳ ಮೇಲ್ಭಾಗದಲ್ಲಿ ಹಳದಿ ಚುಕ್ಕೆಗಳನ್ನು ಕಾಣಬಹುದು, ಕೆಳಭಾಗದಲ್ಲಿ ಬಿಳಿ ಅಥವಾ ಬೂದು ಬಣ್ಣವು ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆ ಹೆಚ್ಚಾದಮೇಲೆ, ಎಳೆಯ ಮೇಲ್ಬಾಗದಲ್ಲೂ ಬೂದಿ ರೋಗ ಕಾಣಿಸಿಕೊಳ್ಳುತ್ತದೆ. ನಂತರ ಎಲೆಗಳು ಒಣಗಲು ಪ್ರಾರಂಭವಾಗುತ್ತವೆ.

2. ಮೊದಲ ಅಂಗಮಾರಿ ರೋಗ (Early blight):
ರೋಗಾಣು: ಆಲ್ಟರ್ನೇರಿಯಾ ಸೋಲಾನಿ (Alternaria solani)
ರೋಗಾಣು ವಿಧ: ಶಿಲೀಂಧ್ರ (Fungus)
ಹಾನಿಯ ಲಕ್ಷಣ: ಮೊದಲು ಕಂದು ಬಣ್ಣದ ವೃತ್ತಾಕಾರದ ಚುಕ್ಕೆಗಳು ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ನಂತರ ಚುಕ್ಕೆಗಳು ಒಂದಕ್ಕೊಂದು ಸೇರಿ ಎಲೆಗಳು ಸಂಪೂರ್ಣವಾಗಿ ಒಣಗಲು ಪ್ರಾರಂಭಿಸುತ್ತವೆ.
3. ಕೊನೆಯ ಅಂಗಮಾರಿ ರೋಗ (Late blight) :
ರೋಗಾಣು: ಫೈಟೊಫ್ಥೊರಾ ಇನ್ಫೆಸ್ಟನ್ಸ್ (Phytophthora infestans)
ರೋಗಾಣು ವಿಧ: ಶಿಲೀಂಧ್ರ (Fungus)
ಹಾನಿಯ ಲಕ್ಷಣ: ಈ ರೋಗದಲ್ಲಿ ಮೊದಲಿಗೆ ತೇವಾಂಶಯುಕ್ತ ಚುಕ್ಕೆಗಳನ್ನು ಕಾಣಬಹುದು ನಂತರ ಎಲೆಯ ತುಂಬಾ ಅವೃತಗೊಂಡು ಕಂದು ಬಣ್ಣದಿಂದ ಕಪ್ಪಾಗುತ್ತದೆ. ಗಿಡದ ರೆಂಬೆಗಳು ಒಣಗಲು ಪ್ರಾರಂಭಿಸುತ್ತವೆ.

4. ಸೊರಗು ರೋಗ (Fausarium wilt) :
ರೋಗಾಣು: ಫ್ಯುಸಾರಿಯಮ್ ಆಕ್ಸಿಸ್ಪೊರಮ್ f. sp. ಲೈಕೋಪರ್ಸಿಸಿ (Fusarium oxysporum f. sp. lycopersici)
ರೋಗಾಣು ವಿಧ: ಶಿಲೀಂಧ್ರ (Fungus)
ಹಾನಿಯ ಲಕ್ಷಣ: ಎಲೆಗಳು ಹಳದಿಯಾಗಿ ಕ್ರಮೇಣವಾಗಿ ಗಿಡ ಒಣಗುತ್ತದೆ. ಕಾಂಡವನ್ನು ಸೀಳಿ ನೋಡಿದಾಗ ಅಂಗಾಂಶ ಕಪ್ಪು ಅಥವಾ ಕಂದು ಬಣ್ಣದಲ್ಲಿರುತ್ತದೆ.
5. ಎಲೆ ಮುದುರು ರೋಗ (Leaf curl virus Disease)
ರೋಗಾಣು: ಟೊಮೆಟೊ ಎಲೆ ಸುರುಳಿ ವೈರಸ್ (Tomato leaf curl virus (TLCV))
ರೋಗಾಣು ವಿಧ: ವೈರಸ್ (Virus)
ಹಾನಿಯ ಲಕ್ಷಣ: ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಪೊದೆಯಾಕಾರದಲಿ ಎಲೆಗಳು ಮುದುಡಿಕೊಂಡಿರುತ್ತವೆ. ಎಲೆಗಳ ಗಾತ್ರ ಕಡಿಮೆಯಾಗಿ ಸರಿಯಾಗಿ ಕಾಯಿಗಳು ಕಟ್ಟುವುದಿಲ್ಲ.

II. ಕೀಟಗಳು :
6. ಬಿಳಿ ನೊಣ (White fly) :
ಕೀಟದ ವೈಜ್ಞಾನಿಕ ಹೆಸರು : ಬೆಮಿಸಿಯಾ ಟಬಾಸಿ (Bemisia tabaci)
ಹಾನಿಯ ಲಕ್ಷಣ: ಬಿಳಿ ನೊಣಗಳು ಎಲೆಗಳ ಕೆಳಭಾಗದಿಂದ ರಸ ಹೀರುತ್ತವೆ. ಇದರಿಂದಾಗಿ ಎಲೆಗಳು ತಿಳಿ ಹಳದಿ ಬಣ್ಣವಾಗಿ ತಿರುಗಿ ಕೆಳಮುಖವಾಗಿ ಮುರುಟಾಗುತ್ತವೆ. ಈ ಕೀಟವು ಎಲೆ ಮುರುಟು/ ಮುದುಡು ವೈರಸ್ ರೋಗವನ್ನು ಹರಡುತ್ತವೆ.

7. ಹಣ್ಣಿನ ನೊಣ (Fruit fly) :
ಕೀಟದ ವೈಜ್ಞಾನಿಕ ಹೆಸರು : ಬ್ಯಾಕ್ಟ್ರೋಸೆರಾ ಡೋರ್ಸಾಲಿಸ್ (Bactrocera dorsalis)
ಹಾನಿಯ ಲಕ್ಷಣ: ಹುಳುಗಳು ಕಾಯಿಗಳ ತಿರುಳನ್ನು ಕೊರೆದು ತಿನ್ನುತ್ತವೆ ಆದ್ದರಿಂದ ಬಾಧೆಗೆ ತುತ್ತಾದ ಹಣ್ಣುಗಳ ಗುಣಮಟ್ಟ ಕಡಿಮೆಯಾಗುತ್ತದೆ
8. ಸೂಜಿ ಹುಳು / ಎಲೆ ಸುರಂಗ ಹುಳು (Pin worm) :
ಕೀಟದ ವೈಜ್ಞಾನಿಕ ಹೆಸರು : ಟುಟಾ ಅಬ್ಸೊಲುಟಾ (Tuta absoluta)
ಹಾನಿಯ ಲಕ್ಷಣ: ಈ ಕೀಟವು ಹಸಿರು ಪದಾರ್ಥವನ್ನು ಕೆರೆದು ತಿನ್ನುವುದರಿಂದ ಎಲೆಯ ಮೇಲೆ ಸುರಂಗಗಳನ್ನು ಮತ್ತು ಜಾಲರಿಯಂತಹ ಪದರವನ್ನು ಕಾಣಬಹುದು. ಮರಿಹುಳುಗಳು ಕಾಯಿಗಳ ತೊಟ್ಟಿನ ಕೆಳಭಾಗದಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ ಸ್ವಲ್ಪ ಪ್ರಮಾಣದಲ್ಲಿ ತಿರುಳನ್ನು ತಿಂದು ನಾಶ ಮಾಡುತ್ತದೆ
8. ಹಣ್ಣು/ ಕಾಯಿ ಕೊರಕ (Fruit borer) :
ಕೀಟದ ವೈಜ್ಞಾನಿಕ ಹೆಸರು : ಹೆಲಿಕೊವರ್ಪಾ ಆರ್ಮಿಗೆರಾ (Helicoverpa armigera)
ಹಾನಿಯ ಲಕ್ಷಣ: ಮೊದಲ ಹಂತದ ಮರಿ ಹುಳುಗಳು ಹೂವಿನ ಮೊಗ್ಗುಗಳನ್ನು ಮತ್ತು ಹೂವನ್ನು ತಿನ್ನುತ್ತವೆ. ನಂತರ ಮರಿಹುಳುಗಳು ಹಣ್ಣನ್ನು ಕೊರೆದು ಒಳ ಭಾಗವನ್ನು ತಿನ್ನುತ್ತವೆ. ಅಂತಹ ಹಣ್ಣುಗಳು ನಂತರ ಕೊಳೆಯುತ್ತವೆ.

ಸಮಗ್ರ ಪೀಡೆ ನಿರ್ವಹಣಾ ಕ್ರಮಗಳು
I. ಸಾಂಪ್ರದಾಯಿಕ ನಿಯಂತ್ರಣ ವಿಧಾನಗಳು
- ಕೀಟಗಳು ಮತ್ತು ರೋಗಗಳು ಹರಡುವುದನ್ನು ತಪ್ಪಿಸಲು, ಬೆಳೆ ಪರಿವರ್ತನೆ ಮಾಡುವುದು ಸೂಕ್ತ. ಟೊಮೆಟೊ ನಂತರ ಮೆಣಸಿನಕಾಯಿ, ಬದನೆಕಾಯಿ, ಎಲೆಕೋಸು ಮತ್ತು ಹೂಕೋಸು ಬೆಳೆಗಳನ್ನು ಬೆಳೆಯಬಾರದು. ಬದಲಿಗೆ ಜೋಳ, ರಾಗಿ ಮತ್ತು ಇತರ ದ್ವಿದಳ ದಾನ್ಯಗಳನ್ನು ಬೆಳೆಯುವುದು ಉತ್ತಮ.
- ಮಣ್ಣಿನಿಂದ ಹರಡುವ ರೋಗಕಾರಕಗಳು ಮತ್ತು ಕೀಟಗಳ ಕೋಶಾವಸ್ಥೆಯನ್ನು ಸೂರ್ಯನ ಬೆಳಕು ಮತ್ತು ನೈಸರ್ಗಿಕ ಶತ್ರುಗಳಿಗೆ ಒಡ್ಡಲು ಬೇಸಿಗೆಯಲ್ಲಿ ಆಳವಾದ ಉಳುಮೆ ಮಾಡುವುದು ಸೂಕ್ತ.
- ಟೊಮ್ಯಾಟೋ ಹೊಲದ ಸುತ್ತಲೂ ಬಲೆ ಬೆಳೆಯಾಗಿ 5-6 ಸಾಲುಗಳು ಜೋಳವನ್ನು ಬೆಳೆಯುವುದರಿಂದ ರಸ ಹೀರುವ ಕೀಟಗಳು (ಬಿಳಿನೊಣ, ಥ್ರಿಪ್ಸ್ ಮತ್ತು ಸಸ್ಯಹೇನು) ಹತೋಟಿಗೆ ಬರುತ್ತವೆ. ಜೋಳವನ್ನು ಟೊಮ್ಯಾಟೋ ನಾಟಿ ಮಾಡುವ ತಿಂಗಳ ಮೊದಲು ಹಾಕಬೇಕು.
- ರೋಗರಹಿತ (ವೈರಸ್ ರೋಗ ಮುಕ್ತ ) ಮತ್ತು ಕೀಟರಹಿತ (ಬಿಳಿನೊಣ / ಸೂಜಿ ಹುಳು ಮುಕ್ತ) ಆರೋಗ್ಯವಂತ ಬೀಜಗಳನ್ನು ಅಥವಾ ಸಸಿಗಳನ್ನು ಬಳಸಬೇಕು.
II. ಯಾಂತ್ರಿಕ ನಿಯಂತ್ರಣ ವಿಧಾನಗಳು
- ಟೊಮೆಟೊದಲ್ಲಿ ಬಿಳಿ ನೊಣಗಳ ಪ್ರವೇಶ ಮತ್ತು ಎಲೆ ಮುದುರು ರೋಗ ಹರಡುವುದನ್ನು ತಪ್ಪಿಸಲು ನರ್ಸರಿ ಹಾಸಿಗೆಗಳಲ್ಲಿ (ಬೆಡ್ ಗಳಲ್ಲಿ) ನೈಲಾನ್ ಬಲೆಯನ್ನು (100-ಮೆಶ್) ಬಳಸುವುದು.
- ಮಣ್ಣಿನಲ್ಲಿ ಕೀಟಗಳ (ಬಿಳಿ ನೊಣ) ಕೋಶಾವಸ್ಥೆಯನ್ನು ಕಡಿಮೆ ಮಾಡಲು, ಕೀಟಗಳನ್ನು ಹಿಮ್ಮೆಟ್ಟಿಸಲು ಮತ್ತು ಕಳೆಗಳ ಬೆಳವಣಿಗೆಯನ್ನು ತಪ್ಪಿಸಲು ಬೆಳ್ಳಿ ಬಣ್ಣದ (ಸಿಲ್ವರ್ ಪಾಲಿಥಿನ್ ಹಾಳೆಗಳು – 25-30 ಮೈಕ್ರಾನ್) ಪ್ಲಾಸ್ಟಿಕ್ ಮಲ್ಚಿಂಗ್ ಮಾಡುವುದು ಉತ್ತಮ.
- ಕೀಟಭಕ್ಷಕ ಪಕ್ಷಿಗಳನ್ನು ಆಕರ್ಷಿಸಲು ಪ್ರತಿ ಹೆಕ್ಟೇರ್ಗೆ 15-20 ಬರ್ಡ್ ಪರ್ಚ್ಗಳನ್ನು (T or V ಆಕಾರದ ಕೋಲುಗಳು) ಸ್ಥಾಪಿಸಿಸಬೇಕು.
- ಬಿಳಿನೊಣ & ಜಿಗಿಹುಳುಗಳ ನಿರ್ವಹಣೆಗಾಗಿ ಹಳದಿ ಜಿಗುಟು / ಅಂಟು ಬಲೆಗಳನ್ನು ಹಾಕುವುದು (ಪ್ರತೀ ಎಕರೆಗೆ 20 ರಂತೆ). ಅಂಟು ಬಲೆಗಳನ್ನು ಬೆಳೆಯಿಂದ 1 ಅಡಿ ಎತ್ತರದಲ್ಲಿ ಕಟ್ಟಬೇಕು.
- ಮೋಹಕ ಬಲೆಗಳ ಅಳವಡಿಸುವಿಕೆ : ಸೂಜಿ ಹುಳು (ಟ್ಯೂಟ ಲ್ಯೂರ್) ಮತ್ತು ಹಣ್ಣು/ಕಾಯಿ ಕೊರಕ (ಹೆಲಿ ಲ್ಯೂರ್) ಕೀಟಗಳ ನಿರ್ವಹಿಣೆಗಾಗಿ ಪ್ರತೀ ಎಕರೆಗೆ 20 ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು. ಬೆಳೆ ಮೇಲಾವರಣದಿಂದ 2 ಅಡಿ ಎತ್ತರದಲ್ಲಿ ಬಲೆಗಳನ್ನು ಅಳವಡಿಸಬೇಕು. ಸಿಕ್ಕಿಬಿದ್ದ ಪತಂಗವನ್ನು ಸಂಗ್ರಹಿಸಬೇಕು ಮತ್ತು ನಿಯಮಿತ ಮಧ್ಯಂತರಗಳಲ್ಲಿ ನಾಶಪಡಿಸಬೇಕು.
- ಸೂಜಿ ಹುಳು ಮತ್ತು ಇತರ ಕೀಟಗಳ ನಿರ್ವಹಣೆಗಾಗಿ ಪ್ರತೀ ಎಕರೆಗೆ 1 – 2 ರಂತೆ ಬೆಳಕಿನ ಬಲೆಯನ್ನು ಅಳವಡಿಸಬೇಕು.
- ಹಣ್ಣು ನೊಣಗಳ ನಿರ್ವಹಣೆಗಾಗಿ ಹಣ್ಣು ನೊಣ ಬಲೆಗಳನ್ನು (ಕ್ಯೂ ಲ್ಯೂರ್) ಪ್ರತೀ ಎಕರೆಗೆ 10 ರಂತೆ ಅಳವಡಿಸಬೇಕು.
- ಶುರುಹಂತದಲ್ಲಿ ಎಲೆಮುದುರು ರೋಗ ಕಾಣಿಸಿಕೊಂಡ ತಕ್ಷಣ, ಅಂತಹ ಗಿಡಗಳನ್ನು ತೆಗೆದು ಸುಟ್ಟುಹಾಕಿ, ನಂತರ ಸೂಕ್ತವಾದ ಕೀಟನಾಶಕವನ್ನು ಸಿಂಪಡಿಸಬೇಕು. ಇದರಿಂದ ವೈರಸ್ ರೋಗ ಹರಡುವುದು ಕಡಿಮೆಯಾಗುತ್ತದೆ.
III. ಜೈವಿಕ ನಿಯಂತ್ರಣ ವಿಧಾನಗಳು
- ಜೈವಿಕ ರೋಗನಾಶಕಗಳಾದ, ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ ಅಥವಾ ಟ್ರೈಕೊಡರ್ಮಾ ಹಾರ್ಜಿಯಾನಮ್ನೊಂದಿಗೆ ಬೀಜೋಪಚಾರ ಮಾಡುವುದು. ಪ್ರತೀ ಕೆ.ಜಿ. ಬೀಜಕ್ಕೆ 10 ಗ್ರಾಂ ಜೈವಿಕ ರೋಗನಾಶಕದೊಂದಿಗೆ ಬೀಜಪಚಾರ ಮಾಡಿ, ಬೀಜಗಳನ್ನು ನೆರಳಿನಲ್ಲಿ ಅರ್ಧ ಗಂಟೆ ಒಣಗಿಸಿ, ಬಿತ್ತನೆ ಮಾಡುವುದು.
- ನಾಟಿ ಮಾಡುವ ಮೊದಲು 10-15 ನಿಮಿಷಗಳ ಕಾಲ ಸಸಿಗಳನ್ನು ಜೈವಿಕ ರೋಗನಾಶಕವಾದ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ ನೊಂದಿಗೆ (@10 ಗ್ರಾಂ / ಲೀ) ಅದ್ದಿ ನಾಟಿಮಾಡುವುದು.
- ಕೊಟ್ಟಿಗೆ ಗೊಬ್ಬರದ (1 ಟನ್/ಎಕರೆ) ಜೊತೆ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ (2 ಕೆ. ಜಿ), ಟ್ರೈಕೋಡರ್ಮಾ ಹಾರ್ಜಿಯಾನಮ್ (2 ಕೆ. ಜಿ) ಮತ್ತು ಮೆಟಾರೈಜಿಯಂ ಅನಿಸೋಪ್ಲಿಯೆ (2 ಕೆ. ಜಿ), ಜೈವಿಕ ಪೀಡೆನಾಶಕಗಳನ್ನು ಅಭಿವೃದ್ದಿಪಡಿಸಿ, ಬಿತ್ತನೆಗೆ ಮುನ್ನ ಭೂಮಿಗೆ ಹಾಕುವುದರಿಂದ ಮಣ್ಣಿನಲ್ಲಿರುವ ಶಿಲೀಂಧ್ರ ರೋಗಾಣುಗಳು, ಕೀಟಗಳ ಹಂತಗಳು ಮತ್ತು ನೆಮಟೋಡ್ಗಳು (ಜಂತು ಹುಳು) ನಾಶವಾಗುತ್ತವೆ.
- ಪ್ರತೀ ಎಕರೆಗೆ 200 ಕೆ. ಜಿ. ಬೇವಿನ ಹಿಂಡಿಯನ್ನು ನಾಟಿ ಮಾಡುವ ಮೊದಲು ಭೂಮಿಗೆ ಹಾಕುವುದರಿಂದ ಜಂತು ಹುಳು, ಅನೇಕ ರೋಗ, ಮತ್ತು ಕೀಟಗಳು ಹತೋಟಿಗೆ ಬರುತ್ತವೆ.
- ಸೂಜಿ ಹುಳು ನಿರ್ವಹಣೆಗಾಗಿ ಮೊಟ್ಟೆ-ಪರಾವಲಂಬಿ ಕೀಟಗಳಾದ ಟ್ರೈಕೋಗ್ರಾಮಾ ಅಕೇಯಾ ಅಥವಾ ಟ್ರೈಕೋಗ್ರಾಮಾ ಪ್ರಿಟಿಯೊಸಮ್ ಗಳನ್ನು 6 ಬಾರಿ @ 50,000/ಹೆಕ್ಟೇರ್ಗೆ 7 ದಿನಗಳ ಮಧ್ಯಂತರದಲ್ಲಿ ಬಿಡುಗಡೆ ಮಾಡುವುದು. ಬಿಡುಗಡೆ ಅವಧಿಯಲ್ಲಿ & ವಾರದ ವರೆಗೆ ಯಾವುದೇ ಕೀಟನಾಶಕ ಸಿಂಪಡಿಸಬಾರದು.
- ರಸ ಹೀರುವ ಕೀಟಗಳ ವಿರುದ್ಧ ಜೈವಿಕ ಕೀಟನಾಶಕಗಳಾದ, ಬ್ಯೂವೇರಿಯಾ ಬಾಸ್ಸಿಯಾನಾ / ಲೆಕನಿಸಿಲಿಯಮ್ ಲೆಕನಿ / ಮೆಟಹಾರ್ಜಿಯಂ ಅನಿಸೊಪ್ಲಿಯಾ ಅನ್ನು (5 ಗ್ರಾಂ ಪ್ರತೀ ಲೀ ನೀರಿಗೆ) ಸಿಂಪಡಿಸುವುದು.
- ಹಣ್ಣು ಕೊರೆಯುವ ಹುಳುಗಳು ವಿರುದ್ಧ ನಾಟಿ ಮಾಡಿದ 28, 35 ಮತ್ತು 42 ದಿನಗಳ ನಂತರ ಸಂಜೆ ವೇಳೆಯಲ್ಲಿ 1% ಬೆಲ್ಲದೊಂದಿಗೆ HaNPV 250 LE (ಪ್ರತೀ ಎಕರೆಗೆ) ಜೈವಿಕ ಕೀಟನಾಶಕವನ್ನು ಸಿಂಪಡಿಸುವುದು.
- ಕೀಟಗಳ ಭಾದೆ ಶುರುಹಂತದಲ್ಲಿದ್ದರೆ, 2 ಮಿ.ಲೀ ಅಜಾಡಿರೆಕ್ಟಿನ್ 10000 ppm ಬೇವು ಆಧಾರಿತ ಕೀಟನಾಶಕವನ್ನು ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.
- ಎರಡು ಕೀಟನಾಶಕಗಳ ಸಿಂಪರಣೆಯ ಮಧ್ಯೆ 5% ಬೇವಿನ ಬೀಜದ ಕಷಾಯವನ್ನು ಸಿಂಪಡಿಸುವುದು ಉತ್ತಮ.
IV. ರಾಸಾಯನಿಕ ನಿಯಂತ್ರಣ ವಿಧಾನಗಳು
- ಕೀಟ ಅಥವಾ ರೋಗದ ಭಾದೆಯೂ ತೀವ್ರವಾದಾಗ ಈ ಕೆಳಗಿನ CIB&RC ನೊಂದಾಯಿತ ಪೀಡೆನಾಶಕಗಳನ್ನು ಪೀಡೆಗೆ ಅನುಸಾರವಾಗಿ ಬಳಸುವುದು. (Source : MAJOR USES OF PESTICIDES (Registered under the Insecticides Act, 1968, dtd – 31/03/2026)
| ಪೀಡೆ | ಪೀಡೆನಾಶಕ |
| ಬೂದಿ ರೋಗ (Powdery Mildew) | ಕ್ಯಾಪ್ಟನ್ 70% + ಹೆಕ್ಸಾಕೊನಜೋಲ್ 5% WP @ 1.5 ಗ್ರಾಂ/ಲೀ ನೀರಿಗೆ (WP : 7 ದಿನಗಳು) ಅಥವಾ ಪೈಡಿಫ್ಲುಮೆಟೊಫೆನ್ 6.89% + ಡೈಫೆನೊಕೊನಜೋಲ್ 11.49% w/w SC @ 1 ಮಿ.ಲಿ/ಲೀ (WP : 5 ದಿನಗಳು) ಅಥವಾ ಅಜೋಕ್ಸಿಸ್ಟ್ರೋಬಿನ್ 4.8% w/w + ಕ್ಲೋರೊಥಲೋನಿಲ್ 40% w/w SC @ 3 ಮಿಲಿ/ಲೀ (WP : 3 ದಿನಗಳು) |
| ಮೊದಲ ಅಂಗಮಾರಿ ರೋಗ (Early Blight) | ಮ್ಯಾಂಕೋಜೆಬ್ 75% WP @ 2 ಗ್ರಾಂ/ಲೀ ಅಥವಾ ಅಜೋಕ್ಸಿಸ್ಟ್ರೋಬಿನ್ 23% SC @ 1 ಮಿಲಿ/ಲೀ (WP : 3 ದಿನಗಳು) ಅಥವಾ ಮೆಟಿರಾಮ್ 70%WG @ 3 ಗ್ರಾಂ/ಲೀ (WP : 6 ದಿನಗಳು) ಅಥವಾ ಬೋಸ್ಕಾಲಿಡ್ 25.2%+ಪೈರಾಕ್ಲೋಸ್ಟ್ರೋಬಿನ್ 12.8%WG @ 1 ಗ್ರಾಂ/ಲೀ (WP : 10 ದಿನಗಳು) ಅಥವಾ ಪಿಕಾರ್ಬುಟ್ರಾಜಾಕ್ಸ್ 9.53% w/w SC @ 2 ಮಿಲಿ/ಲೀ (WP : 7 ದಿನಗಳು) ಅಥವಾ ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4% SC @ 1 ಮಿಲಿ/ಲೀ (WP : 5 ದಿನಗಳು) |
| ಕೊನೆಯ ಅಂಗಮಾರಿ ರೋಗ (Late blight) | ಅಜೋಕ್ಸಿಸ್ಟ್ರೋಬಿನ್ 23% SC @ 1 ಮಿಲಿ/ಲೀ (WP : 3 ದಿನಗಳು) ಅಥವಾ ಸೈಜೋಫಮಿಡ್ 34.5% SC @ 0.4 ಮಿಲಿ/ಲೀ (WP : 3-5 ದಿನಗಳು) ಅಥವಾ ಮಂಡಿಪ್ರೊಪಮಿಡ್ 23.4% SC @ 0.8 ಮಿಲಿ/ಲೀ (WP : 5 ದಿನಗಳು) ಅಥವಾ ಅಮೆಟೋಕ್ಟ್ರಾಡಿನ್ 27% + ಡೈಮೆಥೊಮಾರ್ಫ್ 20.27% w/w SC @ 2 ಮಿಲಿ/ಲೀ (WP : 3 ದಿನಗಳು) ಅಥವಾ ಫಾಮೋಕ್ಸಡೋನ್ 16.6% + ಸೈಮೋಕ್ಸನಿಲ್ 22.1% SC @ 1 ಮಿಲಿ/ಲೀ (WP : 3 ದಿನಗಳು) ಅಥವಾ ಪಿಕಾರ್ಬುಟ್ರಾಜಾಕ್ಸ್ 9.53% w/w SC @ 2 ಮಿಲಿ/ಲೀ (WP : 7 ದಿನಗಳು) ಅಥವಾ ಅಮೆಟೊಕ್ಟ್ರಾಡಿನ್ 25%(w/w) + ಮೆಟಾಲಾಕ್ಸಿಲ್ 20%(w/w) WDG @ 2 ಮಿಲಿ/ಲೀ ಅಥವಾ ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4% SC @ 1 ಮಿಲಿ/ಲೀ (WP : 5 ದಿನಗಳು) |
| ಬಿಳಿ ನೊಣ (Whitefly) | ಇಮಿಡಾಕ್ಲೋಪ್ರಿಡ್ 17.80 % SL @ 0.4 ml/L (WP: 3 ದಿನಗಳು) ಅಥವಾ ಡಯಾಫೆಂಥಿಯುರಾನ್ 50 % WP @ 1.2 g/L (WP: 5 ದಿನಗಳು) ಅಥವಾ ಸೈಂಟ್ರಾನಿಲಿಪ್ರೊಲ್ 10.26 % OD @ 1.8 ml/L (WP: 3 ದಿನಗಳು) ಅಥವಾ ಡಿಂಪ್ರೊಪಿರಿಡಾಜ್ 120 g/l SL @ 2 ml/L (WP: 3 ದಿನಗಳು) ಅಥವಾ ಫ್ಲೋನಿಕಾಮಿಡ್ 50 % WG @ 0.4g/L (WP: 5 ದಿನಗಳು) |
| ಸೂಜಿ ಹುಳು / ಎಲೆ ಸುರಂಗ ಹುಳು (Pinworm) | ಸ್ಪಿನೆಟೋರಾಮ್ 11.70 % SC @ 0.9 ಮಿಲಿ/ಲೀ (WP : 3 ದಿನಗಳು) |
| ಹಣ್ಣು/ ಕಾಯಿ ಕೊರಕ (Fruit borer) | ಇಂಡೋಕ್ಸಾಕಾರ್ಬ್ 14.50 % SC @ 1ml/L (WP : 5 ದಿನಗಳು) ಅಥವಾ ಬ್ರೋಫ್ಲಾನಿಲೈಡ್ 300 ಗ್ರಾಂ/ಲೀ SC @ 0.17 ml/L (WP : 1 ದಿನ) ಅಥವಾ ಕ್ಲೋರಾಂಟ್ರಾನಿಲಿಪ್ರೋಲ್ 18.50 % SC @ 0.3 ml/L (WP : 3 ದಿನಗಳು) ಅಥವಾ ಸೈಂಟ್ರಾನಿಲಿಪ್ರೋಲ್ 10.26 % OD @ 1.8 ml/L (WP : 3 ದಿನಗಳು) |